DHARAVI 
ಸುದ್ದಿಗಳು

ಅದಾನಿಗೆ ಕೊಳಗೇರಿ ಪುನರಭಿವೃದ್ಧಿ ಟೆಂಡರ್: ಬಾಂಬೆ ಹೈಕೋರ್ಟ್‌ನಲ್ಲಿ ತನ್ನ ನಡೆ ಸಮರ್ಥಿಸಿಕೊಂಡ ಮಹಾರಾಷ್ಟ್ರ ಸರ್ಕಾರ

2018ರ ಟೆಂಡರ್ ರದ್ದುಗೊಳಿಸಿ 2022ರಲ್ಲಿ ಸರ್ಕಾರ ಹೊಸ ಟೆಂಡರ್‌ ಕರೆದು ಅದಾನಿ ಅವರ ಬಿಡ್ ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ ಮತ್ತೊಬ್ಬ ಹರಾಜುದಾರ ಕಂಪೆನಿ ಸಲ್ಲಿಸಿದ್ದ ಮನವಿಗೆ ಸರ್ಕಾರ ಪ್ರತಿಕ್ರಿಯೆ ಸಲ್ಲಿಸಿದೆ.

Bar & Bench

ಮುಂಬೈನ ಕೊಳೆಗೇರಿಯಾದ ಧಾರಾವಿಯ ಪುನರಾಭಿವೃದ್ಧಿ ಮಾಡುವ ಟೆಂಡರನ್ನು ಅದಾನಿ ಪ್ರಾಪರ್ಟೀಸ್‌ಗೆ ನೀಡುವ ನಿರ್ಧಾರ ಸಮರ್ಥಿಸಿ ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ [ಸೆಕ್‌ಲಿಂಕ್‌ ಟೆಕ್ನಾಲಜೀಸ್ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಪ್ರತಿಸ್ಪರ್ಧಿ ಹರಾಜುದಾರನಾಗಿದ್ದ ಸೆಕ್ಲಿಂಕ್ ಟೆಕ್ನಾಲಜೀಸ್ ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಸರ್ಕಾರ ಈ ಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂಬ ಮಾತುಗಳನ್ನು ತಳ್ಳಿಹಾಕಿದೆ.

2018 ರ ಟೆಂಡರ್ ರದ್ದುಗೊಳಿಸಿ 2022ರಲ್ಲಿ ಸರ್ಕಾರ ಹೊಸ ಟೆಂಡ್‌ ಕರೆದು ಅದಾನಿ ಅವರ ಬಿಡ್‌ ಆಯ್ಕೆ ಮಾಡಿರುವುದನ್ನು ಸೆಕ್‌ಲಿಂಕ್‌ ಪ್ರಶ್ನಿಸಿತ್ತು. ತನ್ನನ್ನು ಹರಾಜು ಪ್ರಕ್ರಿಯೆಯಿಂದ ಹೊರಹಾಕಿ ಅದಾನಿ ಪರವಾಗಿ ಹರಾಜು ನಡೆಯಲೆಂದೇ ಹೊಸ ಟೆಂಡರ್‌ ಷರತ್ತುಗಳನ್ನು ಸೇರಿಸಲಾಗಿದೆ ಎಂಬ ಸೆಕ್‌ಲಿಂಕ್‌ ನಿಲುವನ್ನು ರಾಜ್ಯ ವಸತಿ ಇಲಾಖೆ ಬುಧವಾರ ಅಲ್ಲಗಳೆದಿದೆ.

ಆ ಪ್ರದೇಶದ ಒಂದು ಭಾಗದಲ್ಲಿದ್ದ ರೈಲ್ವೆ ಅಭಿವೃದ್ಧಿ ಪ್ರಾಧಿಕಾರಕ್ಕೆ (RLDA) ಕನಿಷ್ಠ ₹ 2,800 ಕೋಟಿಗಳನ್ನು ಪಾವತಿಸುವುದು ಹೊಸ ಬಿಡ್‌ದಾರರ ಹೊಣೆಯಾಗಿದ್ದು ಈ ಮೊತ್ತ ಬಿಡ್‌ಗಿಂತ ಹೆಚ್ಚಾಗಿರುತ್ತದೆ. ಇದರ ಹೊರತಾಗಿ, ಸರಿಸುಮಾರು 84,000 ಚದರ ಮೀಟರ್ ಭೂಮಿಯಲ್ಲಿ ರೈಲ್ವೆ ವಸತಿಗೃಹಗಳನ್ನು ನಿರ್ಮಿಸುವ ಹೆಚ್ಚುವರಿ ವೆಚ್ಚ ಇತ್ತು.  ಈ ಪಾವತಿ ಹಿನ್ನೆಲೆಯಲ್ಲಿ ಅದಾನಿ ಕಂಪೆನಿಯನ್ನು ಅತಿ ಹೆಚ್ಚು ಹರಾಜುದಾರ ಎಂದು ಘೋಷಿಸಲಾಯಿತು ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

ಈ ಹಿನ್ನೆಲೆಯಲ್ಲಿ ಅದಾನಿ ಸಂಸ್ಥೆಯು ಸಲ್ಲಿಸಿದ್ದ ₹7,869 ಕೋಟಿ ಬಿಡ್‌ ಅತಿ ಹೆಚ್ಚಿನ ಬಿಡ್‌ ಆಗಿದ್ದು, ಇದು ಸೆಕ್‌ಲಿಂಕ್‌ ಸಲ್ಲಿಸಿದ್ದ ₹7,200 ಕೋಟಿ ಬಿಡ್‌ಗಿಂತ ಹೆಚ್ಚಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಜೊತೆಗೆ ದೇಶದಲ್ಲಿ 2019ರಿಂದ 2022ರ ನಡುವೆ ಆರ್ಥಿಕ ಮತ್ತು ವಾಸ್ತವಾಂಶಗಳಲ್ಲಿ ಬದಲಾವಣೆಯಾಗಿರುವ ಹಿನ್ನೆಲೆಯಲ್ಲಿ ಟೆಂಡರ್‌ ಷರತ್ತುಗಳನ್ನು ಪರಿಷ್ಕರಿಸಲಾಗಿದೆ ಎಂದು ಅಫಿಡವಿಟ್‌ನಲ್ಲಿ ಸರ್ಕಾರ ತಿಳಿಸಿದೆ.