ಅಮೆರಿಕದ ಒಂದು ಸ್ಥಳೀಯ ನ್ಯಾಯಾಲಯ. ವೀಡಿಯೊ ಕಲಾಪದ ಮೂಲಕ ವಿಚಾರಣೆ ನಡೆಯುತ್ತಿದೆ. ಗುಂಡು ಸೂಜಿ ಬಿದ್ದರೂ ಕೇಳುವಂಥ ನಿಶಬ್ದ. ನ್ಯಾಯಾಧೀಶರ ಮುಖದಲ್ಲೂ ಗಂಭೀರ ಮುದ್ರೆ. ಆದರೆ ತೆರೆಯ ಮೇಲೆ ವಕೀಲರೇ ಕಾಣುತ್ತಿಲ್ಲ. ಬದಲಿಗೆ ಬಿಳಿ ಬೂದು ಬಣ್ಣದ ಬೆಕ್ಕೊಂದು ಠಳಾಯಿಸಿದೆ ! ಅತ್ತಿಂದಿತ್ತ, ಇತ್ತಿಂದತ್ತ ಕಣ್ಣು ಪಿಳಿ ಪಿಳಿ ಬಿಡುತ್ತಿದೆ. ಭೀತಿಯಲ್ಲಿ ಚಡಪಡಿಸುತ್ತಿದೆ. ನ್ಯಾಯಾಧೀಶರು ಕೇಳಿದರೆ ʼನಾನು ಬೆಕ್ಕಲ್ಲ, ವಕೀಲ,ʼ ಎನ್ನುತ್ತಿದೆ !
ಆದದ್ದಿಷ್ಟು: ಟೆಕ್ಸಾಸ್‌ನ 394 ನೇ ಜುಡಿಷಿಯಲ್ ಡಿಸ್ಟ್ರಿಕ್ಟ್‌ನ ನ್ಯಾಯಾಧೀಶ ರಾಯ್ ಫರ್ಗೂಸನ್ ವಿಚಾರಣೆಗಾಗಿ ಕಂಪ್ಯೂಟರ್ ಮುಂದೆ ಕುಳಿತಾಗ ಕಲಾಪದಲ್ಲಿ ಭಾಗಿಯಾಗಿದ್ದ ವಕೀಲ ರಾಡ್ ಪಾಂಟನ್ ಆಕಸ್ಮಿಕವಾಗಿ ಝೂಮ್ ಅಪ್ಲಿಕೇಷನ್‌ನಲ್ಲಿ ಲಭ್ಯ ಇರುವ ʼಕ್ಯಾಟ್ ಫಿಲ್ಟರ್ʼ (ಬೆಕ್ಕಿನ ವರ್ಚುವಲ್ ಮುಖವಾಡ) ಬಟನ್ ಒತ್ತಿ ಬಿಟ್ಟಿದ್ದಾರೆ. ಏನು ಮಾಡಿದರೂ ಅವರಿಗೆ ಆ ಫಿಲ್ಟರ್ ತೆಗೆಯಲು ಸಾಧ್ಯವಾಗುತ್ತಿಲ್ಲ. ಅದು ಅವರನ್ನು ಭೀತಿಗೊಳಿಸಿದೆ. ಬಹುಶಃ ನ್ಯಾಯಾಧೀಶರು ಏನು ಶಿಕ್ಷೆ ವಿಧಿಸುತ್ತಾರೋ ಎಂಬ ಭಯ. ಆದರೆ ಆ ಭೀತಿ ಬೆಕ್ಕಿನ ರೂಪದಲ್ಲಿ ವ್ಯಕ್ತವಾಗುತ್ತಿದೆ. ಬೆಕ್ಕಿನ ರೂಪದ ವಕೀಲ ಅತ್ತಿಂದಿತ್ತ ಕಣ್ಣು ಪಿಳಿ ಪಿಳಿ ಬಿಡುತ್ತಿದ್ದಾರೆ. ಅವರ ಧ್ವನಿಯಲ್ಲಿ ಅಪರಾಧ ಭಾವ ವ್ಯಕ್ತವಾಗುತ್ತಿದೆ.
ಅಷ್ಟರಲ್ಲಿ ನ್ಯಾಯಾಧೀಶ ಫರ್ಗೂಸನ್ ಅವರಿಗೆ ಅಲ್ಲಿ ನಡೆಯುತ್ತಿರುವುದೇನು ಎಂದು ಅರ್ಥವಾಗಿದೆ. “ನೀವು ವೀಡಿಯೊ ಸೆಟ್ಟಿಂಗ್‌ನಲ್ಲಿ ಫಿಲ್ಟರ್ ಆನ್ ಮಾಡಿದ್ದೀರಿ ಎಂದು ನಂಬುವೆ…” ಎಂದಿದ್ದಾರೆ. ಬೆಕ್ಕಿನ ರೂಪದಲ್ಲಿ ತುಟಿ ಅಲ್ಲಾಡಿಸುತ್ತ ಪಾಂಟನ್ ʼನನ್ನ ಮಾತು ಕೇಳುತ್ತಿದೆಯೇ ನ್ಯಾಯಾಧೀಶರೇ?” ಎಂದು ಮರುಪ್ರಶ್ನಿಸಿದ್ದಾರೆ. “ಕೇಳುತ್ತಿದೆ. ಅದು ಫಿಲ್ಟರ್”- ನ್ಯಾಯಾಧೀಶರ ಮಾತು. “ನನಗೆ ಇದನ್ನು ಹೇಗೆ ತೆಗೆದುಹಾಕುವುದೋ ತಿಳಿಯುತ್ತಿಲ್ಲ” ವಕೀಲರ ಬಿನ್ನಹ. ಜೊತೆಗೆ “ನನ್ನ ಸಹಾಯಕ ಅದನ್ನು ತೆಗೆಯಲು ಯತ್ನಿಸುತ್ತಿದ್ದಾರೆ. ನಾನು ಮುಂದುವರಿಯಲು ಸಿದ್ಧನಿದ್ದೇನೆ. ನಾನೀಗ ಲೈವ್‌ನಲ್ಲಿದ್ದೇನೆ, ನಾನು ಬೆಕ್ಕಲ್ಲ” ಎಂದು ಬಿನ್ನವಿಸಿಕೊಂಡಿದ್ದಾರೆ. “ನನಗದು ಕಾಣುತ್ತಿದೆ”- ನ್ಯಾಯಧೀಶರ ಪ್ರತಿಕ್ರಿಯೆ. ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಕೆಲ ನೆಟ್ಟಿಗರು ಗಂಭೀರ ಸಲಹೆ ಸೂಚನೆಗಳನ್ನು ಕೂಡ ನೀಡಿದ್ದಾರೆ.
ವೀಡಿಯೊ ಫಿಲ್ಟರ್‌ಗಳ ಬಗ್ಗೆ ಹೇಗೆ ಎಚ್ಚರಿಕೆಯಿಂದಿರಬೇಕೆಂದು ಜಾಗೃತಿ ಮೂಡಿಸಲು ಸ್ವತಃ ನ್ಯಾಯಧೀಶರೇ ವೀಡಿಯೊ ತುಣುಕನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೆ ವಕೀಲರನ್ನು ಅಪಹಾಸ್ಯ ಮಾಡಲು ವೀಡಿಯೊವನ್ನು ಬಳಸಕೂಡದು ಇದನ್ನು ಅರಿವಿನ ಉದ್ದೇಶಕ್ಕಾಗಿ ಮಾತ್ರ ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಅವರ ಮಾತಿನ ಸಾರ ಹೀಗಿದೆ: "ಈ ದುರ್ಬರ ಕಾಲದಲ್ಲಿಯೂ ನ್ಯಾಯವ್ಯವಸ್ಥೆಯ ಕಾರ್ಯನಿರ್ವಹಣೆ ಅಬಾಧಿತವಾಗಿ ಮುಂದುವರಿಯಲು ಕಾರಣವಾದ ನ್ಯಾಯಿಕ ವೃತ್ತಿಯ ಬದ್ಧತೆಯ ಉಪ ಉತ್ಪನ್ನಗಳಾಗಿ ಇಂತಹ ಮೋಜಿನ ಕ್ಷಣಗಳು ಮೂಡುತ್ತವೆ. ವೀಡಿಯೊ ಕಲಾಪದಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ಅದನ್ನು ಗೌರವಯುತವಾಗಿ ನಿಭಾಯಿಸಿದರು, ಫಿಲ್ಟರ್ ಗೆ ಒಳಗಾಗಿದ್ದ ವಕೀಲರು ಅಪಾರ ಘನತೆಯನ್ನು ಪ್ರದರ್ಶಿಸಿದರು. ಎಲ್ಲೆಡೆಯೂ ನೈಜ ವೃತ್ತಿಪರತೆ ಎದ್ದುಕಂಡಿತು! ಮಾಧ್ಯಮ ಪ್ರತಿನಿಧಿಗಳೇ ನೀವು ವೀಡಿಯೊವನ್ನು ಬಳಸಬಹುದು. ಇದನ್ನು ಟೆಕ್ಸಾಸ್‌ನ 394 ನೇ ಡಿಸಿ ಯಲ್ಲಿ ವರ್ಚುವಲ್ ವಿಚಾರಣೆಯ ವೇಳೆ ರೆಕಾರ್ಡ್ ಮಾಡಲಾಗಿದೆ. ಜಾಗೃತಿ ಮೂಡಿಸುವ ಉದ್ದೇಶಕ್ಕಾಗಿ ಇದನ್ನು ಬಿಡುಗಡೆ ಮಾಡಲಾಗಿದೆ. ವಕೀಲರನ್ನು ಅಪಹಾಸ್ಯ ಮಾಡಲು ಇದನ್ನು ಬಳಸದೇ ಇರುವುದು ಕಡ್ಡಾಯ. ಬದಲಿಗೆ ನ್ಯಾಯಕ್ಕಾಗಿ ಕಾರ್ಯತತ್ಪರರಾಗಿರುವ ನ್ಯಾಯಿಕ ಸಮುದಾಯದ ಬದ್ಧತೆಯ ಧ್ಯೋತಕವಾಗಿ ಇದು ಇರಲಿದೆ” ಎಂದಿದ್ದಾರೆ.