ಸುದ್ದಿಗಳು

ಮಾನನಷ್ಟ ಮೊಕದ್ದಮೆ ವರ್ಗಾವಣೆ ಕೋರಿಕೆ: ರಾಹುಲ್ ಮನವಿ ತಿರಸ್ಕರಿಸಿದ ಥಾಣೆ ನ್ಯಾಯಾಲಯ

Bar & Bench

ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆಗೆ ಸಂಬಂಧಿಸಿದಂತೆ ಆರ್‌ಎಸ್‌ಎಸ್‌ ಸಂಘಟನೆ ವಿರುದ್ಧ ಆರೋಪ ಮಾಡಿದ್ದಕ್ಕಾಗಿ ಆರ್‌ಎಸ್‌ಎಸ್ ಕಾರ್ಯಕರ್ತರೊಬ್ಬರು ತಮ್ಮ ಹಾಗೂ ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಅವರ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ಮತ್ತೊಂದು ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಮಹಾರಾಷ್ಟ್ರದ ಥಾಣಾ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ.

ಪ್ರಧಾನ ಜಿಲ್ಲಾ ನ್ಯಾಯಾಧೀಶ ಎ ಜೆ ಮಂತ್ರಿ ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ನೀಡಿದ್ದ ಆದೇಶದ ಪ್ರತಿಯನ್ನು ಇಂದಷ್ಟೇ ಅಪ್‌ಲೋಡ್‌ ಮಾಡಲಾಗಿದೆ. ದಾವೆ ಹೂಡಿರುವ ಅರ್ಜಿದಾರರು ಕೋರಿರುವ ಪರಿಹಾರ ಮೊತ್ತವು ಐದು ಲಕ್ಷ ರೂಪಾಯಿಗಿಂತ ಕಡಿಮೆ ಇರುವುದರಿಂದ ಪ್ರಕರಣವನ್ನು ಸೀನಿಯರ್ ಡಿವಿಷನ್‌ ಸಿವಿಲ್‌ ನ್ಯಾಯಾಧೀಶರಿಂದ ಜೂನಿಯರ್‌ ಡಿವಿಷನ್‌ ಸಿವಿಲ್‌ ನ್ಯಾಯಾಧೀಶರಿಗೆ ವರ್ಗಾಯಿಸಲು ರಾಹುಲ್‌ ಕೋರಿದ್ದರು.

ಆದರೆ ಈ ಬೇಡಿಕೆಯನ್ನು ತಿರಸ್ಕರಿಸಿದ ನ್ಯಾಯಾಲಯ, "ಒಂದು ವೇಳೆ ಪರಿಹಾರ ಮೊತ್ತದ ಆಧಾರದಲ್ಲಿ ಅರ್ಜಿದಾರರು (ರಾಹುಲ್‌ ಗಾಂಧಿ) ನ್ಯಾಯಿಕ ವ್ಯಾಪ್ತಿಯನ್ನು ಪ್ರಶ್ನಿಸುತ್ತಿರುವುದಾದರೆ ಅದನ್ನು ಅದೇ ಸಕ್ಷಮ ನ್ಯಾಯಾಲಯದ ಮುಂದೆ ಪ್ರಶ್ನಿಸಬಹುದಾಗಿದೆ. ಆ ನ್ಯಾಯಾಲಯವು ಮನವಿಯ ಆರ್ಹತೆಯ ಆಧಾರದಲ್ಲಿ ಪ್ರಕರಣವನ್ನು ನಿರ್ಧರಿಸಬಹುದು" ಎಂದು ಹೇಳಿ ಮನವಿಯನ್ನು ತಿರಸ್ಕರಿಸಿತು.