Justice GR Swaminathan (L), Madurai Bench of Madras High Court (R)

 
ಸುದ್ದಿಗಳು

[ಮತಾಂತರ ವಿವಾದ] ತಂಜಾವೂರು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದ ಮದ್ರಾಸ್‌ ಹೈಕೋರ್ಟ್‌

ಮೃತ ಬಾಲಕಿಯ ತಂದೆಯು ಪ್ರಕರಣದ ತನಿಖೆಯಲ್ಲಿ ಮತಾಂತರದ ಕೋನವನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ಷೇಪಿಸಿ ನ್ಯಾಯಾಲಯದ ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದರು.

Bar & Bench

ತಂಜಾವೂರಿನ ವಿದ್ಯಾರ್ಥಿನಿ ಲಾವಣ್ಯ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವರ್ಗಾವಣೆ ಮಾಡಿ ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠವು ಸೋಮವಾರ ಆದೇಶಿಸಿದೆ [ಮುರುಗನಾಥಮ್‌ ವರ್ಸಸ್‌ ಪೊಲೀಸ್‌ ಮಹಾ ನಿರ್ದೇಶಕರು].

ಪ್ರಕರಣದ ಹಿನ್ನೆಲೆ:

ತಂಜಾವೂರಿನ ಹನ್ನೆರಡನೇ ತರಗತಿಯ ವಿದ್ಯಾರ್ಥಿನಿ ಮೃತ ಲಾವಣ್ಯ ಕೀಟನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದಾಗಿದೆ. ಸಾವಿಗೂ ಮುನ್ನ ಆಕೆ ಪೊಲೀಸರು ಹಾಗೂ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಅವರ ಸಮ್ಮುಖದಲ್ಲಿ ನೀಡಿದ ಹೇಳಿಕೆಯಲ್ಲಿ ತನ್ನ ಸಾವಿಗೆ ವಸತಿ ನಿಲಯದ ವಾರ್ಡನ್‌ ಅವರೇ ಕಾರಣ ಎಂದಿದ್ದರು. ತನ್ನ ಮೇಲೆ ವಾರ್ಡನ್‌ ಅವರು ಪಠ್ಯೇತರ ಚಟುವಟಿಕೆಗಳ ಒತ್ತಡ ಉಂಟುಮಾಡಿದ್ದು ತಾನು ಆತ್ಮಹತ್ಯೆಗೆ ಮುಂದಾಗುವಂತೆ ಮಾಡಿತು ಎಂದು ತಿಳಿಸಿದ್ದರು.

ಮುಂದೆ, ಇದಕ್ಕೆಲ್ಲಾ ಮತಾಂತರ ಕಾರಣ ಎಂದು ಶಾಲಾ ಪ್ರತಿನಿಧಿಯೊಬ್ಬರ ವಿರುದ್ಧ ಆರೋಪಿಸಲಾದ ವಿಡಿಯೋ ಒಂದು ಹರಿದಾಡಲಾರಂಭಿಸಿತು. ಈ ಬಗ್ಗೆ ಮಾಧ್ಯಮವೊಂದರ ವರದಿಗಾರರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರ ಗಮನಕ್ಕೆ ತಂದಾಗ ಅವರು ಪ್ರಾಥಮಿಕ ತನಿಖೆಯಲ್ಲಿ ಮತಾಂತರದ ಕೋನವನ್ನು ಪರಿಗಣಿಸಿಲ್ಲ ಎಂದಿದ್ದರು. ಇದು ಮೃತ ವಿದ್ಯಾರ್ಥಿನಿಯ ತಂದೆಯನ್ನು ಹೈಕೋರ್ಟ್‌ ಮೆಟ್ಟಿಲೇರುವಂತೆ ಮಾಡಿತ್ತು. ಪ್ರಕರಣದ ತನಿಖೆಯಲ್ಲಿ ಮತಾಂತರದ ಕೋನವನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ಷೇಪಿಸಿ ಅವರು ನ್ಯಾಯಾಲಯದ ಮಧ್ಯಪ್ರವೇಶಕ್ಕೆ ಕೋರಿದ್ದರು.

ಪ್ರಕರಣದ ವಿಚಾರಣೆಯನ್ನು ನ್ಯಾ. ಜಿ ಆರ್ ಸ್ವಾಮಿನಾಥನ್ ಅವರ ಏಕಸದಸ್ಯ ಪೀಠ ನಡೆಸಿತು. ವಿಚಾರಣೆ ವೇಳೆ, ಸರ್ಕಾರದ ಪರ ವಾದ ಮಂಡನೆ ಮಾಡಿದ ಹೆಚ್ಚುವರಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅವರು ತನಿಖೆಯ ವ್ಯಾಪ್ತಿಯು ಕಾರ್ಯಾಂಗದ ವ್ಯಾಪ್ತಿಗೆ ಒಳಪಡುವಂತಹದ್ದಾಗಿದ್ದು, ಇದರ ಸೂಕ್ಷ್ಮ ನಿರ್ವಹಣೆಯು ನ್ಯಾಯಾಲಯದ್ದಲ್ಲ. ಹಾಗಾಗಿ, ತನಿಖೆಯ ನಡುವಿನ ನ್ಯಾಯಾಲಯದ ಮಧ್ಯಪ್ರವೇಶವು ನ್ಯಾಯಸಮ್ಮತವಲ್ಲ ಎಂದರು.

ಇನ್ನು ಶಾಲೆಯನ್ನು ಪ್ರತಿನಿಧಿಸಿದ್ದ ವಕೀಲರು ಮೃತ ವಿದ್ಯಾರ್ಥಿನಿಯನ್ನು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಳ್ಳಲು ಒತ್ತಾಯಿಸಲಾಗಿತ್ತು ಎನ್ನುವ ಆರೋಪ ಆಧಾರ ರಹಿತ ಎಂದಿದ್ದರು. ಶಾಲೆಯ ಪ್ರತಿಷ್ಠೆಗೆ ಧಕ್ಕೆ ತರಲು ಕೆಲವು ಗುಂಪುಗಳು ಮಾಡುತ್ತಿರುವ ಪ್ರಯತ್ನ ಇದಾಗಿದೆ ಎಂದು ಆಪಾದಿಸಿದ್ದರು.

ಅಂತಿಮವಾಗಿ ನ್ಯಾಯಾಲಯವು ತನಿಖೆಯು ಸೂಕ್ತ ದಿಕ್ಕಿನಲ್ಲಿ ಸಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟಿತು. ಅದರಲ್ಲಿಯೂ ಪ್ರಕರಣದ ವಿಚಾರದಲ್ಲಿ ಉನ್ನತ ಸಚಿವರೊಬ್ಬರು ತಮ್ಮ ನಿಲುವನ್ನು ವ್ಯಕ್ತಪಡಿಸಿರುವುದು ತನಿಖೆಯ ಮೇಲೆ ಪರಿಣಾಮ ಬೀರಬಹುದು ಎನ್ನುವ ಅಂಶವನ್ನು ಪರಿಗಣಿಸಿತು. ಹಾಗಾಗಿ, ರಾಜ್ಯ ಪೊಲೀಸರು ತನಿಖೆಯನ್ನು ನಡೆಸುವುದು ಸೂಕ್ತವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟು ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತು.