Karnataka High Court 
ಸುದ್ದಿಗಳು

ಕಾನೂನು, ಸುವ್ಯವಸ್ಥೆಗೆ ಧಕ್ಕೆ ಮಾಡುವವರಿಗೆ ಆಡಳಿತ ಮಣಿಯಕೂಡದು: ಹೈಕೋರ್ಟ್‌

ಜಾತ್ರೆ ಸಂಬಂಧ ಹಿಂದಿನ ವರ್ಷ ನಡೆದ ಘಟನೆಗಳ ಕುರಿತು ಪೊಲೀಸರು ಸಲ್ಲಿಸಿದ್ದ ವರದಿ ಪರಿಶೀಲಿಸಿದ ಪೀಠವು ಕೆಲ ವ್ಯಕ್ತಿಗಳ ನಡವಳಿಕೆಯಿಂದ ಸ್ಥಳೀಯಾಡಳಿತವು ಜಾತ್ರೆ ನಡೆಸಲು ಅನುಮತಿ ನೀಡುವುದಕ್ಕೆ ಹಿಂಜರಿಯುತ್ತಿರುವಂತೆ ತೋರುತ್ತಿದೆ ಎಂದಿರುವ ಪೀಠ.

Bar & Bench

ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಮಾಡುವ ಕೆಲವರ ನಡವಳಿಕೆಗೆ ಆಡಳಿತ ಮಣಿಯುವಂತಾಗಬಾರದು ಎಂದಿರುವ ಕರ್ನಾಟಕ ಹೈಕೋರ್ಟ್​, ಚಿತ್ರದುರ್ಗ ಜಿಲ್ಲೆಯ ಅಜ್ಜಯ್ಯನ ಹಟ್ಟಿ ಗ್ರಾಮದಲ್ಲಿ ಸಾಂಪ್ರದಾಯಿಕ ವೀರಮಾರಣ್ಣಸ್ವಾಮಿ ಜಾತ್ರಾ ಮಹೋತ್ಸವ ಶಾಂತಿಯುತವಾಗಿ ನಡೆಸಲು ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿ ಕ್ರಮಕೈಗೊಳ್ಳುವಂತೆ ಹೊಸದುರ್ಗ ಪೊಲೀಸ್​ ಇನ್​ಸ್ಪೆಕ್ಟರ್ ಮತ್ತು ತಹಶೀಲ್ದಾರ್​ಗೆ ನಿರ್ದೇಶಿಸಿದೆ.

ಅಜ್ಜಯ್ಯನ ಹಟ್ಟಿ ಗ್ರಾಮದ ವೀರಮಾರಣ್ಣ ಸ್ವಾಮಿ ದೇವರ ಕಲ್ಲು ಹುಣ್ಣಿಮೆ ಜಾತ್ರೆ ಮಹೋತ್ಸವಕ್ಕೆ ಅಗತ್ಯ ಭದ್ರತೆ ಒದಗಿಸುವಂತೆ ಕೋರಿ ವೀರಮಾರಣ್ಣ ಸ್ವಾಮಿ ದೇವರ ಜೀರ್ಣೋದ್ಧಾರ ಕಟ್ಟಡ ಸೇವಾ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ ಎಂ ಶಾಮ್‌ಪ್ರಸಾದ್​ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಜಾತ್ರೆಗೆ ಸಂಬಂಧಿಸಿದಂತೆ ಈ ಹಿಂದಿನ ವರ್ಷ ನಡೆದ ಘಟನೆಗಳ ಕುರಿತಂತೆ ಸ್ಥಳೀಯ ಪೊಲೀಸರು ಸಲ್ಲಿಸಿದ್ದ ವರದಿಯನ್ನು ಪರಿಶೀಲಿಸಿದ ಪೀಠವು ಕೆಲ ವ್ಯಕ್ತಿಗಳ ನಡವಳಿಕೆಯಿಂದ ಸ್ಥಳೀಯಾಡಳಿತವು ಜಾತ್ರೆ ನಡೆಸಲು ಅನುಮತಿ ನೀಡುವುದಕ್ಕೆ ಹಿಂಜರಿಯುತ್ತಿರುವಂತೆ ತೋರುತ್ತಿದೆ. ಅಧಿಕಾರಿಗಳು ಅಂತಹ ವ್ಯಕ್ತಿಗಳ ನಡವಳಿಕೆಗೆ ಮಣಿಯಕೂಡದು ಎಂದಿದೆ.

ತಹಶೀಲ್ದಾರ್ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಅರ್ಜಿದಾರರೊಂದಿಗೆ ಸಭೆ ನಡೆಸಿ ಯಾವುದೇ ಆಸ್ತಿ ಮತ್ತು ಜೀವಕ್ಕೆ ಹಾನಿಯಾಗದಂತೆ ಮತ್ತು ಜಾತ್ರೆ ಶಾಂತಿಯುತವಾಗಿ ನಡೆಯಲು ಅಗತ್ಯ ಕ್ರಮಕೈಗೊಳ್ಳುವ ಸಂಬಂಧ ಸಲಹೆ ನೀಡಬೇಕು. ಅಲ್ಲದೇ, ಅಹಿತಕರ ಘಟನೆಗಳು ತಡೆಯುವುದಕ್ಕೆ ಸಂಬಂಧಿಸಿದಂತೆ ಕಾನೂನಿನಲ್ಲಿ ಅವಕಾಶವಿರುವ ಕಿಡಿಗೇಡಿಗಳ ಬಂಧನ  ಸೇರಿ ಅಗತ್ಯ ಕ್ರಮವನ್ನು ಪೊಲೀಸರು ಕೈಗೊಳ್ಳಬಹುದು ಎಂದಿದೆ.

ಜಾತ್ರೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳುವ ಸಲುವಾಗಿ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಸೇರಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಹಶೀಲ್ದಾರ್ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಪೀಠ ಸಲಹೆ ನೀಡಿದೆ.

ಜಾತ್ರಾ ಮಹೋತ್ಸವ ಮುಂದುವರಿಯಬೇಕಾದಲ್ಲಿ ಎಲ್ಲ ಸಾಂಪ್ರದಾಯಿಕ ಕಾರ್ಯಗಳನ್ನು ಅರ್ಜಿದಾರರು ಮಾತ್ರ ನೆರವೇರಿಸಬೇಕು ಎಂಬುದಾಗಿ ಪಟ್ಟು ಹಿಡಿಯುವಂತಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ. ಸಂಜೆ ನಡೆಯುವ ಮೆರವಣಿಗೆಯಿಂದ ಪರಿಸ್ಥಿತಿಯನ್ನು ನಿಯಂತ್ರಣ ಮಾಡುವುದಕ್ಕೆ ಕಷ್ಟವಾಗುವಂತಿದ್ದರೆ, ಆ ಮೆರವಣಿಗೆ ಮಾಡದಂತೆ ಸೂಚನೆ ನೀಡಬಹುದು ಎಂದು ಪೀಠ ಆದೇಶಿಸಿದೆ.

ಹಿಂದಿನ ವಿಚಾರಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಜಾತ್ರೆ ನಿಲ್ಲಿಸುವ ಬದಲು ಕಾನೂನು ಮತ್ತು ಸುವ್ಯವಸ್ಥೆ ಸೃಷ್ಟಿಸಬಹುದಾದವರ ವಿರುದ್ಧ ಕಾನೂನಿನಲ್ಲಿ ಅನುಮತಿಸಲಾದ ಕ್ರಮ ಏಕೆ ತೆಗೆದುಕೊಳ್ಳಲಾಗುವುದಿಲ್ಲ ಎಂಬುದರ ಕುರಿತು ದಾಖಲೆಗಳ ಮೂಲಕ ವರದಿ ಸಲ್ಲಿಸುವಂತೆ ಸೂಚನೆ ನೀಡಿತ್ತು.

ನ್ಯಾಯಾಲಯದ ಸೂಚನೆಯಂತೆ ವರದಿ ಸಲ್ಲಿಸಿದ್ದ ಹೊಸದುರ್ಗ ಪೊಲೀಸ್​ ಇನ್‌ಸ್ಪೆಕ್ಟರ್‌ ಕಳೆದ ವರ್ಷ ಜಾತ್ರೆ ನಡೆದ ಸಂದರ್ಭದಲ್ಲಿ ಕೊಲೆ ಯತ್ನ  ನಡೆದಿವೆ. ಕೆಲವರು ಗದ್ದಲ ಸೃಷ್ಟಿಸಲು ಸಂಚು ರೂಪಿಸುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಸಾಧ್ಯತೆಗಳಿವೆ. ಅಲ್ಲದೆ, ಜಾತ್ರ ಮಹೋತ್ಸವ ನಡೆಸಲು ಎರಡು ಗುಂಪುಗಳಿದ್ದು, ಎರಡೂ ಗುಂಪಿನವರು ದೇವರ ಸೇವೆಗಳನ್ನು ತಾವೇ ಮಾಡಬೇಕು ಎಂಬ ಒತ್ತಾಯಿಸುತ್ತಾರೆ. ಶಾಂತಿ ಸಭೆ ಕರೆದರೂ ಒಂದು ಗುಂಪಿನ ಜನ ಬಂದರೂ, ಮತ್ತೊಂದು ಗುಂಪಿನ ಜನ ಸಭೆಗೆ ಭಾಗವಹಿಸಿರಲಿಲ್ಲ.  2020ರಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ವಿಷ ಪ್ರಾಷನವಾಗಬಹುದು ಎಂಬ ವದಂತಿ ಹರಡಿತ್ತು. ಈ ಹಿಂದೆ ಜಾತ್ರೆ ನಡೆಸ ಸಂದರ್ಭದಲ್ಲಿ ಕೆಲವರಿಂದ ಮುಚ್ಚಳಿಕೆ ರೂಪದಲ್ಲಿ ಬಾಂಡ್‌ಗಳನ್ನು ತೆಗೆದುಕೊಳ್ಳಲಾಗಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಜಾತ್ರೆ ನಡೆದರೆ ಆಸ್ತಿ ಮತ್ತು ಜೀವಗಳಿಗೆ ಹಾನಿಯಾಗುವ ಸಾಧ್ಯತೆಯಿದೆ.  ಇದೇ ಕಾರಣದಿಂದ ಜಾತ್ರೆ ನಡೆಸದಂತೆ ನಿರ್ದೇಶನ ನೀಡಲಾಗಿತ್ತು ಎಂಬುದಾಗಿ ವರದಿಯಲ್ಲಿ ತಿಳಿಸಿದ್ದರು. ವರದಿಯನ್ನು ಪರಿಶೀಲಿಸಿದ ಪೀಠವು ಮೇಲಿನಂತೆ ಆದೇಶಿಸಿತ್ತು.

2026ರ ಜನವರಿ 28ರಿಂದ ಏಳು ದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಿ ಅನುಮತಿ ನೀಡಲು ಸೂಚನೆ ನೀಡುವಂತೆ ಕೋರಿ ಅರ್ಜಿದಾರರು ತಹಶೀಲ್ದಾರ್‌ ಮತ್ತು ಪೊಲೀಸ್​ ಇನ್‌ಸ್ಪೆಕ್ಟರ್‌ಗೆ ಮನವಿ ಸಲ್ಲಿಸಿದ್ದರು. ಮನವಿ ಪರಿಶೀಲಿಸಿದ್ದ ಅಧಿಕಾರಿಗಳು ಜಾತ್ರೆ ಮುಂದೂಡುವಂತೆ ಹಿಂಬರಹ ನೀಡಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್​ಗೆ  ಅರ್ಜಿ ಸಲ್ಲಿಸಲಾಗಿದೆ.