ಸುದ್ದಿಗಳು

ಕೋವಿಡ್‌ ವೇಳೆ ಪ್ರಕರಣಗಳ ವಿಲೇವಾರಿಯಲ್ಲಿ ಕರ್ನಾಟಕ ಹೈಕೋರ್ಟ್‌ ಮುಂಚೂಣಿಯಲ್ಲಿತ್ತು: ನ್ಯಾ. ಅವಸ್ಥಿ ಮೆಚ್ಚುಗೆ

ಬಳಿಕ ನಡೆದ ಪ್ರತ್ಯೇಕ ಕಾರ್ಯಕ್ರಮದಲ್ಲಿ ನ್ಯಾ. ಪಿ ಬಿ ಭಜಂತ್ರಿ ಅವರಿಗೆ ಬೀಳ್ಕೊಡುಗೆ ನೀಡಲಾಯಿತು. ನ್ಯಾ. ಭಜಂತ್ರಿ ಅವರು ಸಲ್ಲಿಸಿದ ಸೇವೆಗೆ ಮುಖ್ಯ ನ್ಯಾಯಮೂರ್ತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

Bar & Bench

ಕೋವಿಡ್‌ ಸಾಂಕ್ರಾಮಿಕ ಹರಡಿದ್ದ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್‌ ಆಧುನಿಕ ತಂತ್ರಜ್ಞಾನ ಬಳಸುವಲ್ಲಿ ಮುಂಚೂಣಿಯಲ್ಲಿತ್ತು. ಹೈಬ್ರಿಡ್‌ ವಿಧಾನದಲ್ಲಿ ಅದು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿತು. ವಕೀಲರ ಸಹಕಾರದೊಂದಿಗೆ ನ್ಯಾಯಮೂರ್ತಿಗಳು ಅವಿರತವಾಗಿ ಶ್ರಮಿಸಿದರು. ತತ್ಫಲವಾಗಿ ದಾಖಲಾದ ಪ್ರಕರಣಗಳಿಗಿಂತಲೂ ಅವುಗಳ ವಿಲೇವಾರಿಯಲ್ಲಿ ಕರ್ನಾಟಕ ಹೈಕೋರ್ಟ್‌ ಮುಂಚೂಣಿಯಲ್ಲಿದೆ ಎಂದು ಕರ್ನಾಟಕ ಹೈಕೋರ್ಟ್‌ ನೂತನ ಮುಖ್ಯ ನ್ಯಾಯಮೂರ್ತಿ ರಿತು ರಾಜ್‌ ಅವಸ್ಥಿ ಶ್ಲಾಘಿಸಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್ತು (ಕೆಎಸ್‌ಬಿಸಿ) ಮತ್ತು ಬೆಂಗಳೂರು ವಕೀಲರ ಸಂಘದ (ಎಎಬಿ) ವತಿಯಿಂದ ನ್ಯಾ. ಅವಸ್ಥಿ ಅವರಿಗೆ ಇಂದು ಆಯೋಜಿಸಲಾಗಿದ್ದ ಸ್ವಾಗತ ಕಾರ್ಯಕ್ರಮ ಹಾಗೂ ಪಾಟ್ನಾ ಹೈಕೋರ್ಟ್‌ಗೆ ವರ್ಗವಾಗಿರುವ ಪಿ ಬಿ ಭಜಂತ್ರಿ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಕರ್ನಾಟಕ ಹೈಕೋರ್ಟ್‌ಗೆ ದೀರ್ಘವಾದ ಭವ್ಯ ಇತಿಹಾಸವಿದೆ. 1881ರಲ್ಲಿ ಮುಖ್ಯ ನ್ಯಾಯಾಧೀಶರ ಹುದ್ದೆ ಸೃಷ್ಟಿಯಾಯಿತು. ಬಳಿಕ ಮೂವರು ನ್ಯಾಯಾಧೀಶರೊಂದಿಗೆ ಸರ್ವೋಚ್ಚ ಮೇಲ್ಮನವಿ ನ್ಯಾಯಾಲಯವಾಗಿ 1884ರಲ್ಲಿ ಮೈಸೂರು ಮುಖ್ಯ ನ್ಯಾಯಾಲಯ ಸ್ಥಾಪನೆಯಾಯಿತು. 1930ರಲ್ಲಿ ಇದು ಮೈಸೂರು ಹೈಕೋರ್ಟ್‌ ಎಂದು ಮರುರೂಪುಗೊಂಡಿತು. ಮುಖ್ಯ ನ್ಯಾಯಾಧೀಶರ ಹುದ್ದೆ ಮುಖ್ಯ ನ್ಯಾಯಮೂರ್ತಿಯ ಹುದ್ದೆಯಾಗಿ ಬದಲಾಯಿತು. 1973ರಲ್ಲಿ ಮೈಸೂರು ಹೈಕೋರ್ಟ್‌ ಹೆಸರು ಈಗಿನ ಕರ್ನಾಟಕ ಹೈಕೋರ್ಟ್‌ ಎಂದು ಬದಲಾಯಿತು. ಅಂದಿನಿಂದಲೂ ಇಂದಿನವರೆಗೆ ಕರ್ನಾಟಕ ಹೈಕೋರ್ಟ್‌ ಮತ್ತು ಕರ್ನಾಟಕ ನ್ಯಾಯಾಂಗ ದೇಶದ ನ್ಯಾಯಶಾಸ್ತ್ರ ಮತ್ತು ಕಾನೂನು ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ನೀಡಿವೆ” ಎಂದರು.

ಬಳಿಕ ನಡೆದ ಪ್ರತ್ಯೇಕ ಕಾರ್ಯಕ್ರಮದಲ್ಲಿ ನ್ಯಾ. ಪಿ ಬಿ ಭಜಂತ್ರಿ ಅವರಿಗೆ ಬೀಳ್ಕೊಡುಗೆ ನೀಡಲಾಯಿತು. ನ್ಯಾ. ಭಜಂತ್ರಿ ಅವರು ಸಲ್ಲಿಸಿದ ಸೇವೆಗೆ ನ್ಯಾ. ಅವಸ್ಥಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರು ಧಾರವಾಡ, ಕಲಬುರ್ಗಿ ಪೀಠಗಳ ವಿವಿಧ ನ್ಯಾಯಮೂರ್ತಿಗಳು, ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ ನಾವದಗಿ, ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ ಬಿ ನರಗುಂದ, ಸಹಾಯಕ ಸಾಲಿಸಿಟರ್‌ ಜನರಲ್‌ ಶಾಂತಿಭೂಷಣ್‌, ಬೆಂಗಳೂರು ವಕೀಲರ ಸಂಘದ ವಿವಿಧ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.