ಪರವಾನಗಿ ನವೀಕರಿಸದ ಆರೋಪದ ಹಿನ್ನೆಲೆಯಲ್ಲಿ ಪವರ್ ಟಿವಿ ಕನ್ನಡ ಸುದ್ದಿ ವಾಹಿನಿ ಕಾರ್ಯಕ್ರಮಗಳ ಪ್ರಸಾರ ಸ್ಥಗಿತಗೊಳಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠ ಮಾಡಿರುವ ಆದೇಶವನ್ನು ಬದಿಗೆ ಸರಿಸಲು ವಿಭಾಗೀಯ ಪೀಠ ಬುಧವಾರ ನಿರಾಕರಿಸಿದೆ.
ಪವರ್ ಸ್ಮಾರ್ಟ್ ಮೀಡಿಯಾ ಪ್ರೈ. ಲಿ., ಮಿಟ್‌ಕಾನ್ ಇನ್ಪ್ರಾಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಪವರ್ ಸ್ಮಾರ್ಟ್ ಮೀಡಿಯಾ ಪ್ರೈ. ಲಿ. ನಿರ್ದೇಶಕ ರಾಕೇಶ್ ಸಂಜೀವ್ ಶೆಟ್ಟಿ ಅಲಿಯಾಸ್ ರಾಕೇಶ್ ಶೆಟ್ಟಿ ಸಲ್ಲಿಸಿದ್ದ ಎರಡು ಮೇಲ್ಮನವಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ನೇತೃತ್ವದ ವಿಭಾಗೀಯ ಪೀಠ ಇತ್ಯರ್ಥಪಡಿಸಿದೆ.
ಸುದ್ದಿ ವಾಹಿನಿಯು ಪ್ರಸಾರ ಆರಂಭಿಸಬೇಕೆ ಬೇಡವೇ ಎಂಬುದನ್ನು ಕೇಂದ್ರ ಸರ್ಕಾರವು ತುರ್ತಾಗಿ ನಿರ್ಧರಿಸಬೇಕು. ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಫೆಬ್ರವರಿ 9ರಂದು ಜಾರಿ ಮಾಡಿರುವ ಷೋಕಾಸ್ ನೋಟಿಸ್‌ಗಳು ಮತ್ತು ಪವರ್ ಟಿವಿ ಪ್ರಸಾರ ಪರವಾನಗಿ ಕೋರಿ ಸಲ್ಲಿಸಿರುವ ಅರ್ಜಿಗಳ ಸಂಬಂಧ ಆರು ವಾರಗಳಲ್ಲಿ ನಿರ್ಧರಿಸಬೇಕು ಎಂದು ಆದೇಶಿಸಿದೆ.
ಅಲ್ಲದೇ, ಪ್ರಕರಣ ನಿರ್ಧರಿಸುವುದಕ್ಕೂ ಮುನ್ನ ಪವರ್ ಟಿವಿಯ ವಾದವನ್ನು ಆಲಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ. ಪವರ್ ಟಿವಿಯು ಅಗತ್ಯವೆನಿಸಿದರೆ ಆಕ್ಷೇಪಣೆ ಸಲ್ಲಿಸಬಹುದು ಎಂದೂ ನ್ಯಾಯಾಲಯ ಹೇಳಿದೆ.
ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಎಸ್ ಎಸ್ ನಾಗಾನಂದ್ ಅವರು ಸಚಿವಾಲಯ ಹೊರಡಿಸಿರುವ ಷೋಕಾಸ್ ನೋಟಿಸ್ ಆಧರಿಸಿ ಚಾನಲ್ ಬಂದ್ ಮಾಡಲು ಏಕಸದಸ್ಯ ಪೀಠ ಆದೇಶ ನೀಡಬಾರದಿತ್ತು. ಷೋಕಾಸ್ ನೋಟಿಸ್‌ಗೆ ವಿವರವಾದ ಉತ್ತರ ನೀಡಲಾಗಿದೆ. ಏಕಸದಸ್ಯ ಪೀಠದ ಆದೇಶದಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿದುಕೊಂಡಂತಾಗಿದೆ ಎಂದರು.
ಕೇಂದ್ರ ಸರಕಾರದ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಅವರು “2021ರ ಅಕ್ಟೊಬರ್ 12ರಿಂದ ಅನ್ವಯವಾಗುವಂತೆ ಮೆಸರ್ಸ್ ಮಿಟ್ಕಾನ್ ಪ್ರಾಜೆಕ್ಟ್‌ಗೆ ಲೈಸನ್ ಇಲ್ಲ, ಅದು ಕಾನೂನುಬಾಹಿರವಾಗಿ ಸುದ್ದಿ/ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ” ಎಂದರು.
ಕೇಂದ್ರ ವಲಯದ ಐಜಿ ಬಿ ಆರ್ ರವಿಕಾಂತೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್ ಎಂ ರಮೇಶ್‌ಗೌಡ ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ಅವರ ಏಕಸದಸ್ಯ ಪೀಠ ವಾಹಿನಿಯ ಪ್ರಸಾರಕ್ಕೆ ನಿಷೇಧ ಹೇರಿತ್ತು.
ಅಲ್ಲದೇ, “ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ (ನಿಯಂತ್ರಣ) ಕಾಯಿದೆ- 1995ರ ಆದೇಶ ಉಲ್ಲಂಘಿಸಿರುವ ಕಾರಣ ತಕ್ಷಣದಿಂದಲೇ ತಮ್ಮ ಚಾನಲ್‌ನಲ್ಲಿ ಸುದ್ದಿಗಳೂ ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ಜುಲೈ 8ರವರೆಗೆ ಪ್ರಸಾರ ಮಾಡಬಾರದು” ಎಂದು ಪ್ರಕರಣದ ಪ್ರತಿವಾದಿಯಾದ ಮೆಸರ್ಸ್ ಪವರ್ ಸ್ಮಾರ್ಟ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಪ್ರತಿನಿಧಿಯಾಗಿರುವ ನಿರ್ದೇಶಕ ರಾಕೇಶ್ ಶೆಟ್ಟಿಗೆ ಹೈಕೋರ್ಟ್ ನಿರ್ದೇಶನ ನೀಡಿ ಆದೇಶ ಹೊರಡಿಸಿತ್ತು.