Justice G R Swaminathan 
ಸುದ್ದಿಗಳು

ದೀಪ ಬೆಳಗುವ ಕಾಲ ಬರುತ್ತದೆ: ನ್ಯಾ. ಜಿ ಆರ್ ಸ್ವಾಮಿನಾಥನ್ ಮಾರ್ಮಿಕ‌ ನುಡಿ

ಇತ್ತೀಚೆಗೆ ತಿರುಪರನ್ ಕುಂಡ್ರಂ ಬೆಟ್ಟದ ಮೇಲೆ ದೀಪ ಬೆಳಗಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಹೊರಡಿಸಿದ ನ್ಯಾಯಾಂಗ ಆದೇಶ ತೀವ್ರ ಚರ್ಚೆಗೆ ಗ್ರಾಸವಾಗಿರುವಂತೆಯೇ ಅವರು ಈ ಹೇಳಿಕೆ ನೀಡಿದ್ದಾರೆ.

Bar & Bench

ಮುಸ್ಲಿಮರ ಆರಾಧನಾ ಸ್ಥಳ ಕೂಡ ಇರುವ ಮಧುರೈ ಸಮೀಪದ ತಿರುಪರನ್ ಕುಂಡ್ರನ್ ಬೆಟ್ಟದಲ್ಲಿ ಕಾರ್ತಿಕ ದೀಪ ಬೆಳಗಿಸುವ ವಿಚಾರಕ್ಕೆ ಸಂಬಂಧಿಸಿದಂತೆ ತಾನು ನ್ಯಾಯಾಂಗ ಆದೇಶ ನೀಡಿದ ಕೆಲ‌ ದಿನಗಳಲ್ಲಿಯೇ ನಡೆದ ಕಾರ್ಯಕ್ರಮವೊಂದರಲ್ಲಿ “ದೀಪ ಬೆಳಗಿಸುವ ದಿನ ಶೀಘ್ರದಲ್ಲೇ ಬರಲಿದೆ” ಎಂದು ಮದ್ರಾಸ್ ಹೈಕೋರ್ಟ್ ಮಧುರೈ‌ ಪೀಠದ ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ಮಾರ್ಮಿಕವಾಗಿ ಹೇಳಿದ್ದಾರೆ.

ಡಿಸೆಂಬರ್ 27ರಂದು ನಡೆದ ‘ಕಂಬನ್ ಮತ್ತು ವೈಷ್ಣವಂ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಈ ಮಾತುಗಳನ್ನಾಡಿದರು. 12ನೇ ಶತಮಾನದ ತಮಿಳು ಕವಿ ಕಂಬನ್ ಅವರು ರಾಮಾಯಣವನ್ನು ತಮಿಳಿಗೆ ಅನುವಾದಿಸಿದ ಮೊದಲ ವ್ಯಕ್ತಿ ಎಂಬುದು ಇಲ್ಲಿ ಗಮನಾರ್ಹ.

ಸಮಾರಂಭದಲ್ಲಿ ಮಾತನಾಡಿದ ನ್ಯಾ. ಸ್ವಾಮಿನಾಥನ್, ದೀಪ ಬೆಳಗಿಸುವ ವಿಚಾರದಲ್ಲಿ ತಮ್ಮ ಅನೌಪಚಾರಿಕ ನಂಟಿನ ಬಗ್ಗೆ ಲಘುಧಾಟಿಯಲ್ಲಿ ಮಾತನಾಡಿದರು.

“ನನಗೂ ದೀಪಕ್ಕೂ ಏನು ಸಂಬಂಧವೋ ತಿಳಿದಿಲ್ಲ. ಇಂದು ಇಲ್ಲಿ (ಕಾರ್ಯಕ್ರಮದಲ್ಲಿ) ಸಂತೋಷದಿಂದ ದೀಪ ಬೆಳಗಿಸಲು ಬಂದೆ. ಆದರೆ ‘ಸರ್, ನೀವು ದೀಪ ಬೆಳಗಿಸಬಾರದು’ ಎಂದು ತಿಳಿಸಲಾಯಿತು. ಅದರಿಂದ ಸ್ವಲ್ಪ ನಿರಾಶೆಯಾಯಿತು. ಆದರೆ ದೀಪ ಬೆಳಗಿಸುವ ದಿನ ಖಂಡಿತಾ ಬರಲಿದೆ ಎಂದು ನಾನು ದೃಢವಾಗಿ ನಂಬಿದ್ದೇನೆ” ಎಂದು ಅವರು ತಮಿಳಿನಲ್ಲಿ ಹೇಳಿದರು.

ಇತ್ತೀಚೆಗೆ ತಿರುಪರನ್ ಕುಂಡ್ರನ್ ಬೆಟ್ಟದ ಮೇಲೆ ದೀಪ ಬೆಳಗಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಹೊರಡಿಸಿದ ನ್ಯಾಯಾಂಗ ಆದೇಶ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅದರ ಬೆನ್ನಿಗೇ ಅವರು ನೀಡಿರುವ ಈ ಹೇಳಿಕೆ ಗಮನಸೆಳೆದಿದೆ.

ದರ್ಗಾ ಇರುವ ಮಧುರೈ ಸಮೀಪದ ತಿರುಪರನ್‌ ಕುಂಡ್ರಂ ಬೆಟ್ಟದ ಅರುಲ್ಮಿಗು ಸುಬ್ರಮಣ್ಯ ಸ್ವಾಮಿ ದೇಗುಲದಲ್ಲಿರುವ ಕಲ್ಲಿನ ದೀಪಸ್ತಂಭದ ಮೇಲೆ ಕಾರ್ತಿಕ ದೀಪ ಬೆಳಗಲು ಭಕ್ತರಿಗೆ ಅವಕಾಶ ಕಲ್ಪಿಸಿದ್ದ ಅವರ ಆದೇಶ ವಿವಾದದ ಕಿಡಿ ಹೊತ್ತಿಸಿದ್ದಲ್ಲದೆ ರಾಜಕೀಯ ವಾಕ್ಸರಮಕ್ಕೂ ಕಾರಣವಾಗಿತ್ತು.

ಕೋಮು ಸೌಹಾರ್ದ ಕದಡುತ್ತದೆ ಎಂಬ ಕಾರಣಕ್ಕೆ ಆದೇಶವನ್ನು ಆಡಳಿತಾರೂಢ ಡಿಎಂಕೆ ಪಕ್ಷ ಬಲವಾಗಿ ವಿರೋಧಿಸಿತ್ತು. ಅಲ್ಲದೆ ಸಂಸತ್ತಿನಲ್ಲಿ ಡಿಎಂಕೆ ಸೇರಿದಂತೆ ವಿರೋಧಪಕ್ಷಗಳು ನ್ಯಾ. ಸ್ವಾಮಿನಾಥನ್ ಅವರ ವಿರುದ್ಧ ವಾಗ್ದಂಡನೆ ಗೊತ್ತುವಳಿಗೆ ಸಹಿ ಹಾಕಿದ್ದವು. ಇತ್ತ ತಮ್ಮ ಆದೇಶ ಜಾರಿಗೆ ತರದ ತಮಿಳುನಾಡು ಸರ್ಕಾರದ ಅಧಿಕಾರಿಗಳ ವಿರುದ್ಧ ನ್ಯಾ. ಸ್ವಾಮಿನಾಥನ್ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತಾದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಮುಂದುವರೆದಿದೆ. ಮತ್ತೊಂದೆಡೆ ನ್ಯಾಯಮೂರ್ತಿಗಳ ತೀರ್ಪನ್ನು‌ ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ಕಾಯ್ದಿರಿಸಿದೆ.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನ್ಯಾಯಮೂರ್ತಿ ಸ್ವಾಮಿನಾಥನ್, ತಮ್ಮನ್ನು ತಾವು “ಆದರ್ಶವಾದಿ” ಎಂದು ವಿವರಿಸಿದರು. ತಮ್ಮ ಜೀವನದಲ್ಲಿ ಆರೋಗ್ಯ ಮತ್ತು ಆರ್ಥಿಕ ಸಂಕಷ್ಟಗಳನ್ನು ಎದುರಿಸಿದ್ದರೂ, ತತ್ವಗಳಿಗೆ ಬದ್ಧರಾಗಿರುವುದನ್ನೇ ಆಯ್ದುಕೊಂಡೆನೆಂದು ಹೇಳಿದರು.

ಧಾರ್ಮಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಸಾರುವ ಸಂಗತಿಗಳನ್ನು ಧರಿಸುವ ಬಗ್ಗೆ ಯಾರೂ ಸಂಕೋಚ ಹೊಂದಬಾರದು ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ತಮ್ಮಿಂದ ಹಸ್ತಾಕ್ಷರ ಪಡೆಯಲು ಬಂದ ಇಬ್ಬರು ವಿದ್ಯಾರ್ಥಿಗಳು ಹಣೆಯ ಮೇಲೆ ವಿಭೂತಿ ಧರಿಸಿದ್ದನ್ನು ಶ್ಲಾಘಿಸಿದ ಅವರು, ನಮ್ಮ ಧಾರ್ಮಿಕ ಹಾಗೂ ಸಾಂಸ್ಕೃತಿಕ ಅಸ್ಮಿತೆಯನ್ನು ಸಾರುವ ಇಂತಹ ಗುರುತುಗಳನ್ನು ಧರಿಸುವ ಬಗ್ಗೆ ನಾವು ಎಂದೀಗೂ ಸಂಕೋಚ ಅಥವಾ ಹಿಂಜರಿಕೆ ಹೊಂದಿರಬಾರದು ಎಂದರು.

ಮಕ್ಕಳನ್ನು ಬೆಳೆಸುವ ವಿಚಾರವಾಗಿಯೂ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಅವರು, ಚಿಕ್ಕ ವಯಸ್ಸಿನಲ್ಲಿಯೇ ಅಳವಡಿಸಿಕೊಂಡ ಮೌಲ್ಯಗಳು ಮುಂದೆ ವ್ಯಕ್ತಿತ್ವವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ ಎಂದರು.

ರಾಮಾಯಣವನ್ನು ಉದಾಹರಿಸುತ್ತಾ, ಧರ್ಮ ಮತ್ತು ಅಧರ್ಮದ ನಡುವಿನ ಹೋರಾಟದಲ್ಲಿ ಆರಂಭದಲ್ಲಿ ಧರ್ಮ ಸಂಕಷ್ಟಕ್ಕೆ ಸಿಲುಕಿದರೂ, ಅಂತಿಮವಾಗಿ ಜಯಶಾಲಿಯಾಗುತ್ತದೆ ಎಂದು ಹೇಳಿದರು. ಆ ಗೆಲುವಿಗೆ ಧೈರ್ಯ, ಶಿಸ್ತು ಮತ್ತು ನಿರಂತರ ಪ್ರಯತ್ನ ಅಗತ್ಯವೆಂದು ತಿಳಿಸಿದರು.