Karnataka High Court 
ಸುದ್ದಿಗಳು

ಮರು, ಹೊಸ, ತನಿಖೆಯ ವರ್ಗಾವಣೆ ಅಧಿಕಾರ ಇರುವುದು ಸಾಂವಿಧಾನಿಕ ನ್ಯಾಯಾಲಯಗಳಿಗೆ ಮಾತ್ರ: ಹೈಕೋರ್ಟ್‌

ಮರು, ಹೊಸ ಅಥವಾ ತನಿಖೆ ಬೇರಾವುದೇ ಸಂಸ್ಥೆಗೆ ವಹಿಸುವ ವಿಶೇಷ ಅಧಿಕಾರ ಸಂವಿಧಾನದ 226ನೇ ವಿಧಿಯಡಿ ಸಾಂವಿಧಾನಿಕ ನ್ಯಾಯಾಲಯಗಳಿಗೆ ಮಾತ್ರ ಇದೆ.ಸಿಆರ್‌ಪಿಸಿ ಸೆಕ್ಷನ್‌ 482ರ ಅಡಿ ಇದು ಸಾಂವಿಧಾನಿಕ ನ್ಯಾಯಾಲಯಗಳಿಗೆ ಅಂತರ್ಗತ ಎಂದಿರುವ ಹೈಕೋರ್ಟ್‌.

Bar & Bench

“ಕ್ರಿಮಿನಲ್‌ ಪ್ರಕರಣವೊಂದರ ಮರು ಅಥವಾ ಮುಂದುವರಿದ ತನಿಖೆಗೆ ಆದೇಶಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಕಾನೂನುಬಾಹಿರ” ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ ಹೇಳಿದ್ದು, “ಮರು ತನಿಖೆ, ಹೊಸ ತನಿಖೆ ಅಥವಾ ತನಿಖೆಯ ವರ್ಗಾವಣೆ ಮಾಡುವ ಅಧಿಕಾರ ಸಾಂವಿಧಾನಿಕ ನ್ಯಾಯಾಲಯಗಳಿಗೆ ಮಾತ್ರವಿದೆ” ಎಂದು ಒತ್ತಿ ಹೇಳಿದೆ.

ಮರು ಅಥವಾ ಮುಂದುವರಿದ ತನಿಖೆಗೆ ಆದೇಶಿಸಿದ್ದ ಮ್ಯಾಜಿಸ್ಟ್ರೇಟ್‌ ಆದೇಶವನ್ನು ಪ್ರಶ್ನಿಸಿ ಬೆಂಗಳೂರಿನ ತಾರಾ ಪೀತಾಂಬರಂ ಮತ್ತು ಡಾ. ಎಂ ಡಿ ಕೃಷ್ಣಾರ್ಜುನ್‌ ಪೀತಾಂಬರಂ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿದೆ.

Justice M Nagaprasanna

ಕ್ರಿಮಿನಲ್‌ ಪ್ರಕರಣವನ್ನು ಪುನರ್‌ ಅಥವಾ ಮುಂದಿನ ತನಿಖೆ ನಡೆಸುವಂತೆ ಪೊಲೀಸರಿಗೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ನಿರ್ದೇಶಿಸಿರುವುದು ವಿಚಿತ್ರ. ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) 156(3)ರ ಅಡಿ ಕ್ರಿಮಿನಲ್‌ ಪ್ರಕರಣದ ಪುನರ್‌ ಅಥವಾ ಮುಂದುವರಿದ ತನಿಖೆಗೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಆದೇಶಿಸಿರುವುದು ಕಾನೂನುಬಾಹಿರವಾಗಿದೆ. ಸಕ್ಷಮ ನ್ಯಾಯಾಲಯವು ಉದ್ದೇಶಪೂರ್ವವಾಗಿ ಕಾನೂನಿನ ಮೂಲತತ್ವ ಮರೆತಂತಿದೆ ಎಂದು ನ್ಯಾಯಾಲಯ ಹೇಳಿದ್ದು, ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಮಾಡಿದ್ದ ಆದೇಶವನ್ನು ಬದಿಗೆ ಸರಿಸಿದೆ.

ಪುನರ್‌ ತನಿಖೆ, ಹೊಸ ತನಿಖೆ ಅಥವಾ ತನಿಖೆಯನ್ನು ಬೇರಾವುದೇ ಸಂಸ್ಥೆಗೆ ವಹಿಸುವ ವಿಶೇಷ ಅಧಿಕಾರ ಸಂವಿಧಾನದ 226ನೇ ವಿಧಿಯಡಿ ಸಾಂವಿಧಾನಿಕ ನ್ಯಾಯಾಲಯಗಳಿಗೆ ಮಾತ್ರ ಇದೆ. ಸಿಆರ್‌ಪಿಸಿ ಸೆಕ್ಷನ್‌ 482ರ ಅಡಿ ಇದು ಸಾಂವಿಧಾನಿಕ ನ್ಯಾಯಾಲಯಗಳಿಗೆ ಅಂತರ್ಗತವಾಗಿದೆ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ವಿಚಾರಣಾಧೀನ ನ್ಯಾಯಾಲಯಗಳಿಗೆ ಮುಂದುವರಿದ ತನಿಖೆಗೆ ಆದೇಶಿಸುವ ಅಧಿಕಾರವಿದ್ದರೂ ಹಾಲಿ ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯವು ಪೊಲೀಸರಿಗೆ ತನಿಖಾ ವರದಿ ಸಲ್ಲಿಸುವಂತೆ ಸಿಆರ್‌ಪಿಸಿ ಸೆಕ್ಷನ್‌ 176(2) ಅಡಿ ಆದೇಶಿಸಿದ್ದರೂ ಅವರು ಸಲ್ಲಿಸಿರಲಿಲ್ಲ. ಅದಾಗ್ಯೂ, ತನ್ನ ಮುಂದೆ ಯಾವುದೇ ದಾಖಲೆಗಳು ಇಲ್ಲದಿರುವಾಗ ಸಿಆರ್‌ಪಿಸಿ ಸೆಕ್ಷನ್‌ 173(8)ರ ಅಡಿ ಮುಂದುವರಿದ ತನಿಖೆಗೆ ವಿಚಾರಣಾಧೀನ ನ್ಯಾಯಾಲಯ ಆದೇಶಿಸಲಾಗದು ಎಂದು ಹೈಕೋರ್ಟ್‌ ಹೇಳಿದೆ.

ಪೊಲೀಸರು ಸಲ್ಲಿಸುವ ಹಾಲಿ ತನಿಖಾ ವರದಿ, ಆರೋಪ ಪಟ್ಟಿ ಅಥವಾ ಅಂತಿಮ ವರದಿಯಿಂದ ಸಂತೃಪ್ತಿಯಾಗದಿದ್ದಾಗ ವಿಚಾರಣಾಧೀನ ನ್ಯಾಯಾಲಯವು ಮುಂದುವರಿದ ತನಿಖೆ ಆದೇಶಿಸುವ ಪ್ರಶ್ನೆ ಎದುರಾಗುತ್ತದೆ ಎಂದಿರುವ ಹೈಕೋರ್ಟ್‌, ಕಾನೂನಿನ ಅನ್ವಯ ಅಗತ್ಯ ಆದೇಶ ಮಾಡುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಪ್ರಕರಣ ಮರಳಿಸಿದೆ.

ತಂದೆ ಸಾವನ್ನಪ್ಪಿದ ಬಳಿಕ ಅವರ ಆಧಾರ್‌ ಮತ್ತು ಫೋನ್‌ ನಂಬರ್‌ ಬಳಸಿ ತಾಯಿ ಮತ್ತು ಕಿರಿಯ ಸಹೋದರ ಸರಕು ಮತ್ತು ಸೇವಾ ತೆರಿಗೆ ಫೈಲಿಂಗ್‌ ಇತ್ಯಾದಿ ಮಾಡುತ್ತಿದ್ದಾರೆ ಎಂದು ಹಿರಿಯ ಪುತ್ರ ದಾಖಲಿಸಿದ್ದ ಪ್ರಕರಣದಲ್ಲಿ ಪುನರ್‌ ಅಥವಾ ಮುಂದುವರಿದ ತನಿಖೆ ನಡೆಸುವಂತೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ತಾಯಿ ಮತ್ತು ಕಿರಿಯ ಪುತ್ರ ಅರ್ಜಿ ಸಲ್ಲಿಸಿದ್ದರು.

Thara Peethambaram Vs State of Karnataka.pdf
Preview