Karnataka HC and KPSC 
ಸುದ್ದಿಗಳು

ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿಯಿಂದಲೇ ಸಮಸ್ಯೆಯಾಗಿದೆ: ಹೈಕೋರ್ಟ್‌

ಶಾಂತಿ ಹೊಸಮನಿ ವಿರುದ್ಧದ ಆರೋಪಗಳನ್ನು ಪರಿಶೀಲಿಸಲು ಕೆಪಿಎಸ್‌ಸಿ ಸಮಿತಿಯು ಎಲ್ಲಾ ಒಂಬತ್ತು ಮಂದಿಗೆ ನೀಡಿರುವ ಅಂಕಗಳನ್ನು ಸಲ್ಲಿಸಬೇಕು.

Bar & Bench

ಕರ್ನಾಟಕ ಲೋಕಸೇವಾ ಆಯೋಗದ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಹಗರಣದ ಸಂಬಂಧ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಕೆಪಿಎಸ್‌ಸಿ ಸದಸ್ಯೆ. ಡಾ. ಶಾಂತಾ ಹೊಸಮನಿ ಅವರಿಗೆ ಬಂಧನದಿಂದ ರಕ್ಷಣೆ ನೀಡಲು ನಿರಾಕರಿಸಿರುವ ಹೈಕೋರ್ಟ್‌, ಬುಧವಾರಕ್ಕೆ ವಿಚಾರಣೆ ಮುಂದೂಡಿದೆ.

ಶಾಂತಾ ಹೊಸಮನಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠ ಮಂಗಳವಾರ ನಡೆಸಿತು.

Justice S Vishwajith Shetty

ಶಾಂತ ಹೊಸಮನಿ ಪರ ಹಿರಿಯ ವಕೀಲ ವಿವೇಕ್‌ ಸುಬ್ಬಾರೆಡ್ಡಿ ಅವರು “ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಯ ನೇಮಕಾತಿಗೆ 2025ರ ಜುಲೈನಲ್ಲಿ ತಡೆ ನೀಡಲಾಗಿದೆ. ಪ್ರಕ್ರಿಯೆ ಮುಗಿಸುವುದನ್ನು ಮುಂದುವರಿಸಲು ಆದೇಶಿಸಲಾಗಿತ್ತು. ಆದರೆ, ನ್ಯಾಯಾಲಯದ ಅನುಮತಿ ಇಲ್ಲದೇ ಅಂತಿಮ ಆಯ್ಕೆ ಪಟ್ಟಿ ಫಲಿತಾಂಶ ಪ್ರಕಟಿಸದಂತೆ ಮುಖ್ಯ ನ್ಯಾಯಮೂರ್ತಿಗಳ ಪೀಠದಿಂದ ತಡೆ ಇದೆ. ಆದರೆ, ಆ ಪ್ರಕರಣದಲ್ಲಿಅರ್ಜಿದಾರರ ವಿರುದ್ಧ ಆರೋಪವಿರುವ ಹಿನ್ನೆಲೆಯಲ್ಲಿಬಂಧಿಸುವ ಸಾಧ್ಯತೆ ಇದೆ. ಆದ್ದರಿಂದ ಜಾಮೀನು ನೀಡಬೇಕು” ಎಂದು ಕೋರಿದರು.

ಅದಕ್ಕೆ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಶಾಂತಾ ಹೊಸಮನಿ ಅವರು ಎರಡನೇ ಆರೋಪಿ. ಅವರ ವಿರುದ್ಧ ಹೆಚ್ಚು ಅಂಕ ನೀಡಿರುವ ಆರೋಪವಿದೆ. ನಿರ್ದಿಷ್ಟ ದಿನದಂದು ಸಂದರ್ಶನಕ್ಕೆ ಹಾಜರಾಗಿದ್ದ ಎಲ್ಲಾಅಭ್ಯರ್ಥಿಗಳ ಅಂಕಗಳನ್ನು ಪೀಠ ಪರಿಶೀಲಿಸಬೇಕು” ಎಂದು ಆಕ್ಷೇಪಿಸಿದರು.

ಕೆಪಿಎಸ್‌ಸಿ ಪರ ವಕೀಲೆ ಎಂ ಆರ್‌ ಸಿಂಚನಾ ಅವರು “ಪ್ರಕರಣದ ಸಂಬಂಧ ಆಯೋಗದ ಸಹಾಯಕ ಕಾರ್ಯದರ್ಶಿ ನೀಡಿರುವ ವರದಿ ಸಲ್ಲಿಸುತ್ತಿದ್ದೇನೆ. ನಿಯಮದ ಪ್ರಕಾರ ಒಂಭತ್ತು ಮಂದಿ ಇದ್ದರು. ಬೆಳಗ್ಗೆ ಐದು ಸಂಜೆ ನಾಲ್ಕು ಮಂದಿ ಸಂದರ್ಶನವಾಗಿತ್ತು. ಕೆಪಿಎಸ್‌ಸಿಯ ಮೂವರು ಮಂದಿ ಸಂದರ್ಶನ ನಡೆಸಿದ್ದರು. ಗೆಜೆಟೆಡ್‌ ಪ್ರೊಬೇಷನರ್‌ ನೇಮಕದ ಅಂತಿಮ ಆಯ್ಕೆ ಪಟ್ಟಿಯನ್ನು ಇನ್ನಷ್ಟೇ ಪ್ರಕಟಿಸಬೇಕಿದೆ” ಎಂದು ಹೇಳಿದರು.

ವಾದ-ಪ್ರತಿವಾದ ಆಲಿಸಿದ ಬಳಿಕ ಪೀಠವು “ಕೆಪಿಎಸ್‌ಸಿ ಪರ ವಕೀಲರು ಮುಚ್ಚಿದ ಲಕೋಟೆಯಲ್ಲಿ ಕೆಪಿಎಸ್‌ಸಿ ಸಮಿತಿಯು ಅಭ್ಯರ್ಥಿಗಳಿಗೆ 2026ರ ಮೇ 8 ರಂದು ನಡೆದ ಸಂದರ್ಶನದಲ್ಲಿ ನೀಡಿರುವ ಅಂಕಪಟ್ಟಿ ಸಲ್ಲಿಸಿದ್ದಾರೆ. ಅರ್ಜಿದಾರರ ವಿರುದ್ಧದ ಆರೋಪಗಳನ್ನು ಪರಿಶೀಲಿಸಲು ಕೆಪಿಎಸ್‌ಸಿ ಸಮಿತಿಯು ಎಲ್ಲಾ ಒಂಬತ್ತು ಮಂದಿಗೆ ನೀಡಿರುವ ಅಂಕಗಳನ್ನು ಸಲ್ಲಿಸಬೇಕು” ಎಂದು ಆದೇಶಿಸಿ ವಿಚಾರಣೆ ಮುಂದೂಡಿತು.

ಈ ಹಂತದಲ್ಲಿಅರ್ಜಿದಾರರ ಪರ ವಕೀಲರು “ಶಾಂತಾ ಹೊಸಮನಿ ವಿರುದ್ಧ ಆತುರದ ಕ್ರಮಕೈಗೊಳ್ಳದಂತೆ ಆದೇಶಿಸಬೇಕು” ಎಂದು ಕೋರಿದರು.

ಅದಕ್ಕೆ ಪೀಠವು “ಈ ಹಂತದಲ್ಲಿ ಯಾವುದೇ ಮಧ್ಯಂತರ ಆದೇಶವಿಲ್ಲ. ಮಹಿಳೆಯ ವಿರುದ್ಧ ಆರೋಪವಿದೆ, ಆಕೆಯಿಂದಲೇ ಸಮಸ್ಯೆಯಾಗಿದೆ ಎಂದು ಹೇಳಲಾಗಿದೆ. ಹೀಗಾಗಿ, ಬುಧವಾರ ನೋಡೋಣ” ಎಂದು ವಿಚಾರಣೆ ಮುಂದೂಡಿತು.