“ಲಭ್ಯವಿರುವ ಉಚಿತ ಕಾನೂನು ನೆರವು ಮತ್ತು ಕಾನೂನು ಸೇವಾ ಸಂಸ್ಥೆಗಳ ಚಟುವಟಿಕೆಗಳನ್ನು ತಿಳಿಸಿಕೊಡುವ ಉದ್ದೇಶದಿಂದ ರಾಷ್ಟ್ರೀಯ ಕಾನೂನು ಸೇವೆಗಳ ದಿನ ಆಚರಿಸಲಾಗುತ್ತದೆ” ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯಕಾರಿ ಅಧ್ಯಕ್ಷರಾದ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್ ಹೇಳಿದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಹೈಕೋರ್ಟ್‌ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ರಾಷ್ಟ್ರೀಯ ಕಾನೂನು ಸೇವೆ ಪ್ರಾಧಿಕಾರ ಕಾಯಿದೆ-1995 ರಾಷ್ಟ್ರಮಟ್ಟದಲ್ಲಿ 1997ರ ನವೆಂಬರ್ 9ರಂದು ಜಾರಿಗೆ ಬಂದಿತು. ಇದರ ಸ್ಮರಣಾರ್ಥ ಕಾನೂನು ಸೇವೆಗಳ ದಿನ ಆಯೋಜಿಸಲಾಗಿದೆ. ಕರ್ನಾಟಕದಲ್ಲಿ 1997ರ ಮಾರ್ಚ್ 6ರಂದು ಕಾಯಿದೆ ಜಾರಿಗೆ ಬಂದಿದ್ದು, ಅದೇ ವರ್ಷದ ಏಪ್ರಿಲ್ 19ರಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿತು. ಈ ವರ್ಷ ಎಂಪವರಿಂಗ್ ಜಸ್ಟೀಸ್ ಎಕ್ಸಿಸಿಬಲ್ ಏಡ್ ಫಾರ್ ಆಲ್ (ನ್ಯಾಯದ ಬಲವರ್ಧನೆ ಮತ್ತು ಎಲ್ಲರಿಗೂ ಸಹಾಯದ ಲಭ್ಯತೆ) ಎಂಬ ಘೋಷವಾಕ್ಯ ನೀಡಲಾಗಿದೆ” ಎಂದರು.
2024ರ ಜನವರಿ-ಸೆಪ್ಟೆಂಬರ್ ಅವಧಿಯಲ್ಲಿ ರಾಜ್ಯದಲ್ಲಿ 1,289 ಕಾನೂನು ಸೇವಾ ಕ್ಲಿನಿಕ್‌ಗಳು ಕಾರ್ಯನಿರ್ವಹಿಸಿವೆ. 2,096 ಪ್ಯಾನಲ್ ವಕೀಲರು, 5,032 ಅರೆ ಕಾನೂನು ಸ್ವಯಂ ಸಹಾಯಕರು, 6, 218 ನ್ಯಾಯಾಲಯ ಆಧಾರಿತ ಕಾನೂನು ಸೇವೆಗಳು, 88,538 ಕ್ಲಿನಿಕ್ ಆಧಾರಿತ ಕಾನೂನು ಸೇವೆಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.
“ಪ್ರಸಕ್ತ ವರ್ಷ ಮೂರು ರಾಷ್ಟ್ರೀಯ ಲೋಕ ಅದಾಲತ್ ನಡೆದಿದ್ದು, ರಾಜ್ಯದಲ್ಲಿ 7,17,035 ಬಾಕಿ ಪ್ರಕರಣಗಳು ಮತ್ತು 97,71,148 ದಾವೆ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಅನು ಶಿವರಾಮನ್, ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್, ಸಹಾಯಕ ಸಾಲಿಸಿಟರ್ ಜನರಲ್ ಎಚ್ ಶಾಂತಿಭೂಷಣ್, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮತ್ತಿತರರು ಭಾಗವಹಿಸಿದ್ದರು.