Justice M Nagaprasanna and Karnataka HC's Dharwad Bench 
ಸುದ್ದಿಗಳು

ನಿವೃತ್ತಿ ಹೊಂದಿದ ಮಾತ್ರಕ್ಕೆ ಸೇವಾ ಕಾಯಂ ಹಕ್ಕು ಕಸಿಯಲಾಗದು: ಬಿಲ್‌ ಕಲೆಕ್ಟರ್‌ ಸೇವೆ ಕಾಯಂಗೊಳಿಸಿದ ಹೈಕೋರ್ಟ್‌

“1994ರಿಂದ 2015ರವರೆಗೆ ಎಲ್ಲಾ ಭತ್ಯೆಗಳಿಗೂ ವೆಂಕಟರಾಮ ಹೆಗಡೆ ಅರ್ಹರಾಗಿದ್ದಾರೆ. ಜೊತೆಗೆ ಅವರು ಪಿಂಚಣಿಗೂ ಅರ್ಹರಾಗಿದ್ದು, ಅವರಿಗೆ ಎಲ್ಲಾ ಭತ್ಯೆಗಳನ್ನು ನೀಡಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.

Bar & Bench

“ನಿವೃತ್ತಿ ಹೊಂದಿದಾಕ್ಷಣ ಸೇವಾ ಕಾಯಮಾತಿ ಹಕ್ಕನ್ನು ಕಸಿದುಕೊಳ್ಳಲಾಗದು” ಎಂಬ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಗ್ರಾಮ ಪಂಚಾಯಿತಿಯಲ್ಲಿ 21 ವರ್ಷ ಗುತ್ತಿಗೆ ಆಧಾರದಡಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ರಮೇಶ್ ವೆಂಕಟರಾಮ ಹೆಗಡೆ ಅವರ ಸೇವೆ ಕಾಯಂಗೊಳಿಸಿದೆ.

ಶಿರಸಿ ತಾಲ್ಲೂಕಿನ ಕುಳವೆ ಗ್ರಾಮದ 68 ವರ್ಷದ ರಮೇಶ್‌ ವೆಂಕಟರಮಣ ಹೆಗಡೆ ಸಲ್ಲಿಸಿದ್ದ  ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

“ದಶಕಗಳ ಕಾಲ ವೃತ್ತಿ ಪ್ರಗತಿ ಅಥವಾ ಸಮಾನ ಸಂಭಾವನೆ ಇಲ್ಲದೆ ದುಡಿದ ನೌಕರರ ದುಃಸ್ಥಿತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ” ಎಂದೂ ನ್ಯಾಯಾಲಯ ಹೇಳಿದೆ.

“ತಾತ್ಕಾಲಿಕ, ಒಪ್ಪಂದದ ಮೇರೆಗೆ ಅಥವಾ ದಿನಗೂಲಿ ಇಲ್ಲವೇ ಕ್ರೋಢೀಕೃತ ವೇತನ ಪಡೆಯುವ ನೌಕರರು ಯಾವುದೇ ರೀತಿಯ ನೇಮಕಾತಿಗೆ ಒಳಪಟ್ಟಿದ್ದರೂ, ಅವರು 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ಮತ್ತು ಹುದ್ದೆಯನ್ನು ಅಲಂಕರಿಸಲು ಅರ್ಹತೆ ಪಡೆದ ನಂತರ, ಸೇವಾ ಕ್ರಮಬದ್ಧತೆಗೆ ಒಳಪಡಲು ಅರ್ಹರಾಗಿರುತ್ತಾರೆ. ಒಂದು ವೇಳೆ ಈ ಸೇವಾ ಕ್ರಮಬದ್ಧತೆಯನ್ನು ಪರಿಗಣಿಸಲು ನಿರಾಕರಿಸಿದ್ದೇ ಆದರೆ ಅದು ನೇಮಕಾತಿಯ ಶೋಷಣೆಗೆ ಹಿಡಿದ ಕೈಗನ್ನಡಿಯಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

“ಅರ್ಜಿದಾರರು 1994ರಿಂದ 21 ವರ್ಷಗಳ ಕಾಲ ಅಟೆಂಡರ್ ಕಮ್ ಬಿಲ್ ಕಲೆಕ್ಟರ್‌ ಆಗಿ ಗುತ್ತಿಗೆ ಆಧಾರದಡಿ ಕೆಲಸ ನಿರ್ವಹಿಸಿ ಸೇವಾ ನಿವೃತ್ತಿ ಹೊಂದಿದ್ದು, ಅವರ ಸೇವೆಯನ್ನು ಕಾಯಮಾತಿ ವ್ಯಾಪ್ತಿಯಲ್ಲಿಯೇ ಪರಿಗಣಿಸಲೇಬೇಕಾಗುತ್ತದೆ” ಎಂಬ ಅಭಿಪ್ರಾಯವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ.

ಸೇವಾ ಕಾಯಮಾತಿಗೆ ಸಂಬಂಧಿಸಿದಂತೆ 2006ರ ಕರ್ನಾಟಕ ಸರ್ಕಾರ ಮತ್ತು ಉಮಾದೇವಿ ಮತ್ತಿತರರ ನಡುವಿನ ಪ್ರಕರಣ, 2015ರ ಧರ್ಮಸಿಂಗ್ ಮತ್ತು ಉತ್ತರ ಪ್ರದೇಶ ನಡುವಿನ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿರುವ ಪೀಠವು “ಈ ಮಹತ್ವದ ತೀರ್ಪುಗಳನ್ನು ಕಡೆಗಣಿಸಿ ರಾಜ್ಯ ಸರ್ಕಾರ ಅರ್ಜಿದಾರರನ್ನು ಮತ್ತೊಂದು ಮೊಕದ್ದಮೆಯ ಚಕ್ರಕ್ಕೆ ತಳ್ಳಬಾರದು” ಎಂದಿದೆ.

ಸೇವೆಯನ್ನು ಕಾಯಂಗೊಳಿಸುವಂತೆ 2014ರಲ್ಲಿಯೇ ಹೈಕೋರ್ಟ್‌ ಆದೇಶಿಸಿತ್ತು. ಇದರನ್ವಯ ಗ್ರಾಮ ಪಂಚಾಯಿತಿ ಕೂಡ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ, ಸರ್ಕಾರ ಅರ್ಜಿದಾರರ ಸೇವೆಯನ್ನು ಕಾಯಂಗೊಳಿಸಿರಲಿಲ್ಲ. ಹೀಗಾಗಿ, ರಮೇಶ್ ವೆಂಕಟರಮಣ ಹೆಗಡೆ ‍ಪುನಃ ಹೈಕೋರ್ಟ್ ಮೆಟ್ಟಿಲೇರಿದ್ದರು. 

ರಮೇಶ್‌ ವೆಂಕಟರಾಮ ಹೆಗಡೆಯವರ 10 ವರ್ಷಗಳ ಅವಧಿ ಸೇವೆ ಸಲ್ಲಿಸಿದ ನಂತರದ ಅವಧಿಯ ಸೇವೆಯನ್ನು ಕಾಯಂಗೊಳಿಸಲು, ಅಂದರೆ 2004ರ ಜನವರಿ 9ರಿಂದ ಅನ್ವಯವಾಗುವಂತೆ ಅವರ ಸೇವೆ ಕಾಯಂಗೊಳಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಬಾಕಿ ವೇತನ ಹೊರತುಪಡಿಸಿ 1994ರಿಂದ 2015ರವರೆಗೆ ಎಲ್ಲಾ ಭತ್ಯೆ ಮತ್ತು ಪಿಂಚಣಿಗೂ ಅರ್ಹರಾಗಿದ್ದು, ಅವರಿಗೆ ಎಲ್ಲಾ ಭತ್ಯೆಗಳನ್ನು ನೀಡಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ.

Ramesh Hegde Vs State of Karnataka.pdf
Preview