Vidhana Soudha
Vidhana Soudha 
ಸುದ್ದಿಗಳು

ವಿಧಾನಸಭೆಯಲ್ಲಿ ಎಪಿಎಂಸಿ, ಕೆಟಿಟಿಪಿ, ಸಿಎಂ ಕಾನೂನು ಸಲಹೆಗಾರ ಕಚೇರಿ ಸೃಜನೆ ತಿದ್ದುಪಡಿ ವಿಧೇಯಕ ಸೇರಿ 6 ಮಸೂದೆ ಮಂಡನೆ

Bar & Bench

ಪ್ರಸಕ್ತ ಸಾಲಿನ ಬಜೆಟ್‌ ಅಧಿವೇಶನದಲ್ಲಿ ಬಹುಚರ್ಚಿತ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ವಿಧೇಯಕ ಸೇರಿ ಒಟ್ಟು ಆರು ಮಸೂದೆಗಳನ್ನು ವಿಧಾನಸಭೆಯಲ್ಲಿ ವಿವಿಧ ಸಚಿವರು ಮಂಗಳವಾರ ಮಂಡಿಸಿದರು.

ಎಪಿಎಂಸಿ ತಿದ್ದುಪಡಿ ಕಾಯಿದೆಯನ್ನು ಸದನದಲ್ಲಿ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಮಂಡಿಸಿದರು.

ಬೆಂಗಳೂರು ವ್ಯಾಪ್ತಿಯಲ್ಲಿ ರಸ್ತೆ ಸುರಕ್ಷತೆಗೆ ಒತ್ತು ನೀಡಲು ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ವ್ಯಾಪ್ತಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ತರುವ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ತಿದ್ದುಪಡಿ ವಿಧೇಯಕ 2023 ಅನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಯಿತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪರವಾಗಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಧೇಯಕ ಮಂಡನೆ ಮಾಡಿದರು.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆ ಅಪಘಾತ, ಸಾವು-ನೋವು ನಿಯಂತ್ರಿಸುವುದು. ತನ್ಮೂಲಕ ಅಪಘಾತಗಳಿಂದ ಉಂಟಾಗುವ ಸಾಮಾಜಿಕ ಹಾಗೂ ಆರ್ಥಿಕ ಅಭದ್ರತೆ ನಿವಾರಿಸುವ ದೃಷ್ಟಿಯಿಂದ ರಸ್ತೆ ಸುರಕ್ಷತಾ ಪ್ರಾಧಿಕಾರದ ಅಡಿಗೆ ತರುವುದು ವಿಧೇಯಕದ ಉದ್ದೇಶ.

ಕರ್ನಾಟಕ ರಸ್ತೆ ಸುರಕ್ಷತಾ ಪ್ರಾಧಿಕಾರವು ವಾಹನ ಮತ್ತು ರಸ್ತೆ ಎಂಜಿನಿಯರಿಂಗ್, ಸೂಚನಾ ಫಲಕಗಳ ಅಳವಡಿಕೆ, ಗುಣಮಟ್ಟದ ಪಾದಚಾರಿ ಮಾರ್ಗ, ಅಪರಾಧ ಉಲ್ಲಂಘನೆ ವಿರುದ್ಧ ಜಾಗೃತಿ, ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮತ್ತು ಶಿಕ್ಷಣ, ರಸ್ತೆ ಅಪಘಾತಗಳು ಸಂಭವಿಸಿದ ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆಯ ಲಭ್ಯತೆ, ನಿರ್ವಹಣೆ ವೈಜ್ಞಾನಿಕ ತಳಹದಿಯಲ್ಲಿ ಮಾಡುತ್ತದೆ.

2017ರಲ್ಲಿ ಜಾರಿಗೆ ತರಲಾಗಿರುವ ಪ್ರಾಧಿಕಾರದ ಅಡಿ ಪ್ರಸ್ತುತ ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ, ಶಿಕ್ಷಣ, ಆರೋಗ್ಯ, ಲೋಕೋಪಯೋಗಿ, ಪಂಚಾಯತ್ ರಾಜ್, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬರುತ್ತದೆ. ಇಷ್ಟೂ ಇಲಾಖೆಗಳು ಸಮನ್ವಯ ಸಾಧಿಸುವ ಮೂಲಕ ರಸ್ತೆಗಳನ್ನು ವಾಹನ ಸವಾರರಿಗೆ ಸುರಕ್ಷಿತ ಎಂಬಂತೆ ಮಾಡುತ್ತವೆ. ಇದರ ಅಡಿಗೆ ಇದೀಗ ಬಿಬಿಎಂಪಿಯೂ ಸೇರ್ಪಡೆಯಾಗಿರುವುದರಿಂದ ರಸ್ತೆ ಸುರಕ್ಷತೆ ಬಗ್ಗೆ ಚರ್ಚಿಸಲು ಬಿಬಿಎಂಪಿಗೆ ವೇದಿಕೆ ಸಿಕ್ಕಂತಾಗುತ್ತದೆ. ತನ್ಮೂಲಕ ಬೆಂಗಳೂರು ವ್ಯಾಪ್ತಿಯಲ್ಲಿ ಅಪಘಾತ, ಸಾವು-ನೋವು ನಿಯಂತ್ರಿಸುವ ಉದ್ದೇಶದಿಂದ ವಿಧೇಯಕ ಮಂಡಿಸಲಾಗಿದೆ.

ಕೆಟಿಟಿಪಿ ತಿದ್ದುಪಡಿ ಕಾಯಿದೆ: ರಾಜ್ಯದ ಸರ್ಕಾರಿ ಇಲಾಖೆಗಳ ವ್ಯಾಪ್ತಿಯಲ್ಲಿ ನಡೆಯುವ 1 ಕೋಟಿ ರೂಪಾಯಿ ಮೊತ್ತದವರೆಗಿನ ಎಲ್ಲಾ ಕಾಮಗಾರಿಗಳಲ್ಲೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಮೀಸಲಾತಿ ಒದಗಿಸುವ ಸಲುವಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಟಿಪಿ) ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ. ಇದನ್ನೂ ಪ್ರಿಯಾಂಕ್‌ ಖರ್ಗೆ ಅವರು ಮಂಡಿಸಿದ್ದು, ಈ ಹಿಂದೆ 50 ಲಕ್ಷ ರೂಪಾಯಿವರೆಗಿನ ಮೊತ್ತದ ಕಾಮಗಾರಿಗಳಲ್ಲಿ ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಮೀಸಲಾತಿ ಕಲ್ಪಿಸಿತ್ತು.

ವಿಧೇಯಕಕ್ಕೆ ಉಭಯ ಸದನಗಳ ಅಂಗೀಕಾರ ದೊರೆತರೆ ಸರ್ಕಾರಿ ಇಲಾಖೆಗಳ ವ್ಯಾಪ್ತಿಯಲ್ಲಿ ನಡೆಯುವ 1 ಕೋಟಿ ರೂಪಾಯಿವರೆಗಿನ ಎಲ್ಲಾ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿಗೆ 17.15 ರಷ್ಟು ಹಾಗೂ ಪರಿಶಿಷ್ಟ ಪಂಗಡದವಿಗೆ 6.95 ರಷ್ಟು ಮೀಸಲಾತಿ ದೊರೆಯಲಿದೆ.

ಅಗ್ನಿಶಾಮಕ ಎನ್‌ಒಸಿ ಕಡ್ಡಾಯ: 21 ಮೀಟರ್ ಅಥವಾ ಅದಕ್ಕಿಂತ ಎತ್ತರದ ಕಟ್ಟಡಗಳ ನಿರ್ಮಾಣಕ್ಕೆ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ನಿರಾಪೇಕ್ಷಣ ಪತ್ರ (ಎನ್‌ಒಸಿ) ಕಡ್ಡಾಯಗೊಳಿಸುವ ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ವಿಧೇಯಕವನ್ನು ವಿಧಾನಸಭೆಯಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್‌ ಅವರ ಪರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಮಂಡಿಸಿದರು.

ನಿರ್ಮಾಣಕ್ಕೆ ಮೊದಲೇ ಅಗ್ನಿಶಾಮಕ ದಳದಿಂದ ನಿರಾಪೇಕ್ಷಣಾ ಪತ್ರ ಪಡೆಯುವುದಕ್ಕೆ ಉಪಬಂಧವನ್ನು ಕಲ್ಪಿಸಲು ಅಗ್ನಿಶಾಮಕ ದಳ ಅಧಿನಿಯಮ-1968 ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ನಿರ್ಧರಿಸಲಾಗಿದೆ. ಇದರಡಿ ಬಿಬಿಎಂಪಿಯಿಂದ ನಕ್ಷೆ ಮಂಜೂರಾತಿ ಪಡೆಯುವ ಮೊದಲೇ ಅಗ್ನಿಶಾಮಕ ಇಲಾಖೆಯಿಂದ ಎನ್‌ಒಸಿ ಪಡೆಯಬೇಕು.

ಕಟ್ಟಡ ನಿರ್ಮಾಣ ಪೂರ್ಣಗೊಂಡ ಬಳಿಕ ಸಿಸಿ (ಕ್ಲಿಯರೆನ್ಸ್ ಸರ್ಟಿಫಿಕೇಟ್) ನೀಡಬೇಕು. ಜತೆಗೆ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿಗಳು (ಫೈರ್ ಆಫಿಸರ್) ಪ್ರತಿ ಎರಡು ವರ್ಷಗಳಿಗೊಮ್ಮೆ ಪರಿಶೀಲನೆ ನಡೆಸಬೇಕು ಎಂಬ ನಿಯಮಗಳನ್ನು ವಿಧಿಸಲು ನಿರ್ಧರಿಸಲಾಗಿದೆ.

ಸಿಎಂ ಕಾನೂನು ಸಲಹೆಗಾರ ಕಚೇರಿ ಸೃಜನೆ ತಿದ್ದುಪಡಿ ವಿಧೇಯಕ: ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರ ಕಚೇರಿ ಸೃಜನೆಗೆ ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) ಅಧಿನಿಯಮ-1956ಕ್ಕೆ ತಿದ್ದುಪಡಿ ವಿಧೇಯಕವನ್ನು ಮಂಡನೆ ಮಾಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರರಾಗಿ ವಿರಾಜಪೇಟೆ ಶಾಸಕ ಹಾಗೂ ಹಿರಿಯ ವಕೀಲ ಎ ಎಸ್ ಪೊನ್ನಣ್ಣ ಅವರನ್ನು ನೇಮಕ ಮಾಡಲಾಗಿತ್ತು. ಸಂಪುಟ ದರ್ಜೆ ಸಚಿವ ಸ್ಥಾನಮಾನದೊಂದಿಗೆ ಎಲ್ಲಾ ಸೌಲಭ್ಯ ನೀಡಿ ಆದೇಶಿಸಲಾಗಿತ್ತು. ಅವರಿಗೆ ವಿಧಾನಸೌಧ ಅಥವಾ ವಿಕಾಸಸೌಧದಲ್ಲಿ ಕಚೇರಿಗೆ ಕರ್ನಾಟಕ ವಿಧಾನಮಂಡಲ ಅಧಿನಿಯಮದಲ್ಲಿ ಅವಕಾಶವಿರಲಿಲ್ಲ. ಹೀಗಾಗಿ ವಿಧೇಯಕ ಮಂಡಿಸಲಾಗಿದೆ.

ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕವನ್ನು ಸಚಿವ ಪ್ರಿಯಾಂಕ್‌ ಖರ್ಗೆ ಮಂಡಿಸಿದರು. ರಾಜ್ಯದೊಳಗಿನ ಸರಕು ಮತ್ತು ಸೇವೆಯ ಮೇಲೆ ಲೆವಿ ಹಾಗೂ ತೆರಿಗೆ ಸಂಗ್ರಹಿಸಲು ತೊಡರುಗಳನ್ನು ಇದು ನಿವಾರಿಸಲಿದೆ. ಜಿಎಸ್‌ಟಿ ಮಂಡಳಿಯು ಸೂಚಿಸಿದ್ದ ಕೆಲವೊಂದು ತಿದ್ದುಪಡಿಗಳಲ್ಲಿ ಎರಡು ತಿದ್ದುಪಡಿಗಳನ್ನು ರಾಜ್ಯವು ಒಪ್ಪಿಲ್ಲ.