ಸುದ್ದಿಗಳು

ತೃತೀಯ ಭಾಷಾ ವಿಷಯಕ್ಕೆ ಅಂಕಗಳ ಬದಲಿಗೆ ಗ್ರೇಡ್‌: ಪ್ರಚಾರದ ಅರ್ಜಿ ಎಂದು ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

“ವಿವಾದಾತ್ಮಕ ವಿಷಯ ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ ಎಂಬುದನ್ನು ಗಮನಿಸಿ, ಹೇಳಿಕೆಯಲ್ಲದ ಹೇಳಿಕೆ ಆಧರಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಕೇವಲ ಮೂರು ಪದದ ಪತ್ರಿಕಾ ಹೇಳಿಕೆ!” ಎಂದು ಕಿಡಿಕಾರಿದ ಹೈಕೋರ್ಟ್‌.

Bar & Bench

“ಹಿಂದಿಯನ್ನು ಸಂಪೂರ್ಣವಾಗಿ ಕೈಬಿಡಲಾಗುತ್ತದೆ” ಎಂಬ ಹೇಳಿಕೆಯೇ ವರದಿಯಲ್ಲಿ ಇಲ್ಲ ಎಂದಿರುವ ಕರ್ನಾಟಕ ಹೈಕೋರ್ಟ್‌, ಪ್ರಚಾರಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ ಎಂದು ಅರ್ಜಿದಾರರಿಗೆ ಬರೋಬ್ಬರಿ ₹1 ಲಕ್ಷ ದಂಡ ವಿಧಿಸಿ ಶುಕ್ರವಾರ ಅರ್ಜಿ ವಜಾಗೊಳಿಸಿದೆ.

ಕರ್ನಾಟಕ ರಾಜ್ಯ ಪೌಢ ಶಿಕ್ಷಣ ಪರೀಕ್ಷಾ ಮಂಡಳಿ (ಎಸ್‌ಎಸ್‌ಎಲ್‌ಸಿ) ನಡೆಸುವ  ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಅಂಕಗಳ ಬದಲಿಗೆ ಗ್ರೇಡ್‌ ನೀಡುವುದಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ಪ್ರಸ್ತಾವ ಪ್ರಶ್ನಿಸಿ ಬೆಂಗಳೂರಿನ ಎಚ್‌ ಎನ್‌ ಚಂದನಾ ಮತ್ತು ಎಸ್ ವೆಂಕಟೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ವಜಾಗೊಳಿಸಿದೆ.

Chief Justice Vibhu Bhakhru & Justice CM Poonacha

ಸಚಿವರು ಆಕ್ಷೇಪಾರ್ಹವಾದ ಹೇಳಿಕೆ ನೀಡಿದ್ದು, ನ್ಯಾಯಾಲಯವು ವಿಶೇಷ ವ್ಯಾಪ್ತಿಯ ಅಧಿಕಾರ ಬಳಸಿ, ಹೇಳಿಕೆ ವಜಾಗೊಳಿಸಬೇಕು ಎಂದು ಕೋರಿದ್ದಾರೆ. ಇದೊಂದು ಪ್ರಚಾರ ಹಿತಾಸಕ್ತಿ ಹೊಂದಿರುವ ಅರ್ಜಿಯಾಗಿದ್ದು, ಅರ್ಜಿದಾರರಿಗೆ ₹50,000 ದಂಡ ವಿಧಿಸಿ ವಜಾಗೊಳಿಸಲಾಗಿದೆ. ಎರಡು ವಾರಗಳಲ್ಲಿ ಕಾನೂನು ಸೇವಾ ಪ್ರಾಧಿಕಾರಕ್ಕೆ ದಂಡದ ಮೊತ್ತ ಪಾವತಿಸಬೇಕು ಎಂದು ನಿರ್ದೇಶಿಸಿತು. ಇಲ್ಲವಾದಲ್ಲಿ ಅದನ್ನು ಭೂಕಂದಾಯ ಬಾಕಿಯಾಗಿ ವಸೂಲಿ ಮಾಡಲು ಜಿಲ್ಲಾಧಿಕಾರಿಗೆ ಆದೇಶ ಕಳುಹಿಸಿಕೊಡಲು ಸರ್ಕಾರಕ್ಕೆ ನಿರ್ದೇಶಿಸಿತು.

ಈ ಹಂತದಲ್ಲಿ ಅರ್ಜಿದಾರರ ಪರ ವಕೀಲರು ಹಿಂದಿಯನ್ನು ಕೈಬಿಡುವ ಆತಂಕ ವ್ಯಕ್ತಪಡಿಸಿದರು. ಅದಕ್ಕೆ ಪೀಠವು “ಪತ್ರಿಕಾ ವರದಿಯಲ್ಲಿ ಮೂರು ಪದಗಳು ಮಾತ್ರ ಇವೆ. ಹಿಂದಿಯನ್ನು ಕೈಬಿಡುವ ಹೇಳಿಕೆಯೇ ವರದಿಯಲ್ಲಿಲ್ಲ. ಇದಕ್ಕಾಗಿ ದಂಡವನ್ನು ₹1 ಲಕ್ಷಕ್ಕೆ ಏರಿಕೆ ಮಾಡಲಾಗುತ್ತಿದೆ” ಎಂದಿತು.

ಆದೇಶದಲ್ಲಿ ಮಾರ್ಪಾಡು ಮಾಡಿದ ಪೀಠವು ದಂಡದ ಮೊತ್ತವನ್ನು ₹1 ಲಕ್ಷಕ್ಕೆ ಏರಿಕೆ ಮಾಡಿತು. ಅಲ್ಲದೇ, “ಹಿಂದಿಯನ್ನು ಕೈಬಿಡಲಾಗುತ್ತದೆ ಎಂಬ ಹೇಳಿಕೆಯೇ ಉಲ್ಲೇಖಿತ ಪತ್ರಿಕಾ ವರದಿಯಲ್ಲಿಲ್ಲ. ಇದೊಂದು ಪ್ರಚಾರ ಹಿತಾಸಕ್ತಿ ಅರ್ಜಿಯಾಗಿದೆ” ಎಂದು ಆದೇಶಲ್ಲಿ ದಾಖಲಿಸಿತು.

“ವಿವಾದಾತ್ಮಕ ವಿಷಯ ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ ಎಂಬುದನ್ನು ಗಮನಿಸಿ, ಹೇಳಿಕೆಯಲ್ಲದ ಹೇಳಿಕೆ ಆಧರಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಕೇವಲ ಮೂರು ಪದದ ಪತ್ರಿಕಾ ಹೇಳಿಕೆ!” ಎಂದು ಕಿಡಿಕಾರಿತು.

ಆಗ ಅರ್ಜಿದಾರರ ಪರ ವಕೀಲರು “ಹಿಂದಿ ಕೈಬಿಡುವ ವಿಚಾರವು ಸರಿಯಾದ ದೃಷ್ಟಿಕೋನವಲ್ಲ” ಎಂದರು. ಅದಕ್ಕೆ ಪೀಠವು “ಅದು ಹೇಳಿಕೆಯೇ ಎಂದು ನಾವು ಹೇಳುತ್ತಿದ್ದೇವೆ. ಇದು ಪ್ರಚಾರ ಹಿತಾಸಕ್ತಿಯ ಅರ್ಜಿ. ಹಿಂದಿಯನ್ನು ಕೈಬಿಡುವ ಹೇಳಿಕೆಯೇ ಇಲ್ಲ. ಹಿಂದಿಯನ್ನು ಕೈಬಿಡುವ ವಿಚಾರ ಪತ್ರಿಕಾ ಹೇಳಿಕೆಯಲ್ಲಿ ಇಲ್ಲ” ಎಂದಿತು.

ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ದಂಡದ ಮೊತ್ತವನ್ನು ವಕೀಲರ ಗುಮಾಸ್ತರ ನಿಧಿಗೆ ನೀಡುವುದನ್ನು ನ್ಯಾಯಾಲಯ ಮುಂದೆ ಪರಿಗಣಿಸಬೇಕು ಎಂದು ಕೋರಿದರು.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ  ಹಿಂದಿ ಸೇರಿದಂತೆ ತೃತೀಯ ಭಾಷೆ ಕಡ್ಡಾಯವಲ್ಲ. ಈ ಭಾಷೆಗಳಿಗೆ ಅಂಕಗಳ ಬದಲಿಗೆ ಗ್ರೇಡ್ ನೀಡಲಾಗುತ್ತದೆ. ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ದ್ವಿಭಾಷಾ ಸೂತ್ರವನ್ನು ಜಾರಿಗೆ ತರವುದಾಗಿ ತಿಳಿಸಿದ್ದಾರೆ. ಅಲ್ಲದೆ, ಸಚಿವರು ಈ ನಿರ್ಧಾರವನ್ನು ಪ್ರಕಟಿಸುವುದಕ್ಕೂ ಮುನ್ನ ಸಾರ್ವಜನಿಕವಾಗಿ ಚರ್ಚೆ ನಡೆಸಿಲ್ಲ. ಸಚಿವ ಸಂಪುಟದ ಅನುಮೋದನೆ ಪಡೆದಿಲ್ಲ ಹಾಗೂ ಭಾಷಾ ತಜ್ಞರ ಸಲಹೆ ಇಲ್ಲದೇ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಅಂದರೆ ಮಾರ್ಚ್ 31ರಂದು ಈ ರೀತಿಯ ಹೇಳಿಕೆ ಹೊರಬಿದ್ದಿರುವುದರಿಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ.  ಆದರೆ, ಈವರೆಗೂ ಈ ಕುರಿತಂತೆ ಯಾವುದೇ ಅಧಿಕೃತ ಸರ್ಕಾರಿ ಆದೇಶ ಅಥವಾ ಅಧಿಸೂಚನೆ ಹೊರಬಂದಿಲ್ಲ. ಸಚಿವರ ಈ ನಿರ್ಧಾರಕ್ಕಾಗಿ ಸಾರ್ವಜನಿಕರಿಂದ  ವ್ಯಾಪಕ ವಿರೋಧ ವ್ಯಕ್ತವಾಗಿದೆ ಎಂದು ವಿವರಿಸಲಾಗಿತ್ತು.

ಸಚಿವರ ಈ ನಿರ್ಧಾರ ಸಂವಿಧಾನದ 14ನೇ ವಿಧಿಯಡಿ ಸಮಾನತೆ ಹಕ್ಕಿನ ಉಲ್ಲಂಘನೆಯಾಗಿದೆ. 21ನೇ ವಿಧಿಯಡಿ ಶಿಕ್ಷಣ ಹಕ್ಕಿನ ಮೇಲೆ ಪರಿಣಾಮ ಬೀರಿದ್ದು, ವಿದ್ಯಾರ್ಥಿಗಳ ಭವಿಷ್ಯವನ್ನು ಅಸ್ಥಿರಗೊಳಿಸುತ್ತದೆ. ಸರ್ಕಾರದ ಅಧಿಕೃತ ಆದೇಶವಿಲ್ಲದೆ ನೀತಿ ಜಾರಿಗೆ ತರಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರದ ನಿರ್ಧಾರವನ್ನು ರದ್ದುಪಡಿಸುವ ನಿಟ್ಟಿನಲ್ಲಿ ಪೀಠ ಮಧ್ಯಪ್ರವೇಶಿಸಬೇಕು. ಸಚಿವರ ವಿವಾದಾತ್ಮಕ ಹೇಳಿಕೆಗೆ ತಡೆ ನೀಡಬೇಕು ಎಂದು ಕೋರಲಾಗಿತ್ತು.

ಸಚಿವ ಮಧು ಬಂಗಾರಪ್ಪ ಅವರು ಹಿಂದಿ ಸೇರಿದಂತೆ ಮೂರನೇ ಭಾಷಾ ವಿಷಯಗಳಿಗೆ ಹಿಂದಿನ ವರ್ಷದಂತೆ 100 ಅಂಕಗಳಿರಲಿವೆ. ಆದರೆ, ಮೌಲ್ಯಮಾಪನದ ಬಳಿಕ ಅಂಕಪಟ್ಟಿಯಲ್ಲಿ ಅಂಕ ನಮೂದಿಸದೇ ಗ್ರೇಡ್‌ ಎ, ಬಿ, ಸಿ ಮತ್ತು ಡಿ ಎಂದು ನಮೂದಿಸಲಾಗುತ್ತದೆ. ಇದುವರೆಗೂ ಮಕ್ಕಳು 625 ಅಂಕಗಳಿಗೆ ಪರೀಕ್ಷೆ ಬರೆಯುತ್ತಿದ್ದರು. ಈಗಲೂ ಅಷ್ಟೆ ಅಂಕಗಳಿಗೆ ಪರೀಕ್ಷೆ ಬರೆಯುತ್ತಾರೆ. ಆದರೆ, ತೃತೀಯ ಭಾಷೆ ಹೊರತುಪಡಿಸಿ ಉಳಿದ ವಿಷಯಗಳ ಗರಿಷ್ಠ 525 ಅಂಕಗಳನ್ನಷ್ಟೇ ಪರಿಗಣಿಸಿ, ಪ್ರತಿ ವಿದ್ಯಾರ್ಥಿಯ ಶೇಕಡಾವಾರು ಅಂಕ ಲೆಕ್ಕ ಹಾಕಲಾಗುತ್ತದೆ ಎಂದು ಹೇಳಿದ್ದರು.