Justice Dinesh Maheshwari
Justice Dinesh Maheshwari 
ಸುದ್ದಿಗಳು

ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ: ನಿರ್ಗಮಿತ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ

Bar & Bench

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಅವರು ಇಂದು ಸೇವೆಯಿಂದ ನಿವೃತ್ತಿ ಹೊಂದಿದ್ದು, ಕಠಿಣ ಪರಿಶ್ರಮದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಪಿ ಎಸ್‌ ನರಸಿಂಹ ಅವರನ್ನೊಳಗೊಂಡ ವಿದ್ಯುಕ್ತ ಪೀಠದಲ್ಲಿ ಕುಳಿತು ನ್ಯಾ. ದಿನೇಶ್‌ ಮಹೇಶ್ವರಿ ಅವರು ವಿಚಾರಣೆ ನಡೆಸಿದರು.

“ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ… ವಿಚಾರಣಾಧೀನ ನ್ಯಾಯಾಲಯದಲ್ಲಿ ವಕೀಲನಾಗಿ ನಾನು ವೃತ್ತಿ ಆರಂಭಿಸಿದೆ" ಎಂದು ಸಾಗಿ ಬಂದ ಹಾದಿಯನ್ನು ನೆನೆದರು. "ಮಿಸ್‌ ಯೂ, ಎನ್ನುವುದು ವಿಷಾದ ಮೂಡಿಸುತ್ತದೆ. ಇದಕ್ಕೆ ಪರ್ಯಾಯವಾಗಿ ನಾನು ನಿಮ್ಮನ್ನು ನೆನಪಿಸಿಕೊಳ್ಳುತ್ತೇವೆ ಎಂದು ಹೇಳಿ” ಎಂದು ನ್ಯಾ. ಮಹೇಶ್ವರಿ ಹೇಳಿದರು.

ಒಗ್ಗೂಡಿ ತಂಡವಾಗಿ ಶ್ರಮಿಸದೆ ಹೋಗಿದ್ದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ನನ್ನ ಯಾವುದೇ ಕೆಲಸ ಸಾಧ್ಯವಾಗುತ್ತಿರಲಿಲ್ಲ ಎಂದ ನ್ಯಾ. ಮಹೇಶ್ವರಿ ಅವರು ವಕೀಲರ ಪರಿಷತ್‌ನ ಸದಸ್ಯರು, ನ್ಯಾಯಮೂರ್ತಿಗಳು ಮತ್ತು ಕಾನೂನು ಗುಮಾಸ್ತರ ನೆರವಿಗೆ ಗೌರವ ಸಲ್ಲಿಸಿದರು. “ಒಬ್ಬೇ ಒಬ್ಬರು ಏನನ್ನೂ ಮಾಡಲಾಗದು. ನಾನು ಯಾವಾಗಲೂ ʼನಾವುʼ ಎನ್ನುತ್ತೇನೆಯೇ ಹೊರತು ʼನಾನುʼ ಎನ್ನುವುದಿಲ್ಲ” ಎಂದರು.

ಸಿಜೆಐ ಚಂದ್ರಚೂಡ್‌ ಅವರು “ಅವರೊಬ್ಬ ಸಂಭಾವಿತರು, ಸ್ನೇಹಮಯಿ ನ್ಯಾಯಮೂರ್ತಿ. ತಾನು ಕೊನೆಯ ಬಾರಿಗೆ ತಾಳ್ಮೆ ಕಳೆದುಕೊಂಡಿದ್ದು ಯಾವಾಗ ಎಂದು ಬಹುಶಃ ಅವರಿಗೂ ನೆನೆಪಿರಲಿಕ್ಕಿಲ್ಲ” ಎಂದರು.

ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು “ನಿಮ್ಮ ಮುಂದೆ ವಿಚಾರಣೆಯಲ್ಲಿ ಭಾಗವಹಿಸಿದ್ದು, ನಮಗೆ ಸಿಕ್ಕ ವಿಶೇಷ ಮಾನ್ಯತೆ. ನಮ್ಮನ್ನು ಸರ್‌ ಅಥವಾ ಮೇಡಂ ಎಂದು ಸಂಬೋಧಿಸುತ್ತಿದ್ದ ನಿಮ್ಮ ಕೃತಜ್ಞತಾ ನಡೆಯನ್ನು ನಾವು ನೆನಪಿಸಿಕೊಳ್ಳುತ್ತೇವೆ. ನಾವು ಪ್ರಕರಣದಲ್ಲಿ ಹಿನ್ನಡೆ ಅನುಭವಿಸಿದರೂ ನಗುಮುಖದಿಂದ ಹೊರ ನಡೆಯುತ್ತಿದ್ದೆವು” ಎಂದರು.

ಹಿರಿಯ ವಕೀಲ ವಿಕಾಸ್‌ ಸಿಂಗ್‌ ಅವರು “ಇದು ನಿವೃತ್ತಿ ಹೊಂದುವ ವಯಸ್ಸಲ್ಲ ಎಂದು ನಾನು ಯಾವಾಗಲೂ ಹೇಳುತ್ತೇನೆ. ಆದರೆ, ಇದು ನಮ್ಮ ಕೈಯಲ್ಲಿ ಇಲ್ಲ. ನೀವು ವೃತ್ತಿಯ ಉಚ್ಛ್ರಾಯದಲ್ಲಿದ್ದೀರಿ. ನಿಮಗೆ ವಿದಾಯ ಹೇಳುವುದು ವ್ಯವಸ್ಥೆಗೆ ನಷ್ಟ” ಎಂದರು.

ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಅವರು “ನ್ಯಾ. ಮಹೇಶ್ವರಿ ಅವರ ಕೋರ್ಟ್‌ನಲ್ಲಿ ನಾವೆಲ್ಲರೂ ಸಮಾನರು. ಈ ಸಂಸ್ಥೆಯ ಭಾಗವಾಗುವ ಯಾವುದೇ ನ್ಯಾಯಮೂರ್ತಿ ಇಲ್ಲಿಂದ ಹೋಗುವುದಿಲ್ಲ. ತಮ್ಮದೇ ಆದ ರೀತಿಯಲ್ಲಿ ಪ್ರತಿಯೊಬ್ಬ ನ್ಯಾಯಮೂರ್ತಿಯೂ ಇಲ್ಲಿ ತಮ್ಮ ವಿಶಿಷ್ಟ ಛಾಪು ಬಿಟ್ಟು ಹೋಗುತ್ತಾರೆ” ಎಂದರು.

ಹಿರಿಯ ವಕೀಲ ಎ ಎಂ ಸಿಂಘ್ವಿ ಅವರು ನ್ಯಾ. ಮಹೇಶ್ವರಿ ಗುಣಗಾನ ಮಾಡಿದರು.