Justice S Sunil Dutt Yadav and Karnataka High Court 
ಸುದ್ದಿಗಳು

ಪಂಚಾಯ್ತಿ ಕಾಮಗಾರಿ ಗುತ್ತಿಗೆ ಒಪ್ಪಂದ ಅಸ್ವಿತ್ವದಲ್ಲಿದ್ದರೆ ಮಾತ್ರ ಗ್ರಾಮ ಪಂಚಾಯ್ತಿ ಸದಸ್ಯತ್ವ ರದ್ದು: ಹೈಕೋರ್ಟ್‌

ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆ ಸೆಕ್ಷನ್ 12 (ಎಚ್) ಪ್ರಕಾರ ಗ್ರಾಪಂ ಸದಸ್ಯರನ್ನು, ಅವರ ಪಂಚಾಯ್ತಿಗೆ ಸೇರಿದ ಕಾಮಗಾರಿ ಗುತ್ತಿಗೆ ಪಡೆದು, ಆ ಗುತ್ತಿಗೆ ಒಪ್ಪಂದ ಅಸ್ತಿತ್ವದಲ್ಲಿ ಇದ್ದರೆ ಮಾತ್ರ ಸದಸ್ಯತ್ವ ಅನರ್ಹಗೊಳಿಸಬಹುದು.

Bar & Bench

ಗ್ರಾಮ ಪಂಚಾಯ್ತಿ ಸದಸ್ಯರು ತಾವು ಆಯ್ಕೆಯಾಗುವ ಸಂದರ್ಭದಲ್ಲಿ ಪಂಚಾಯ್ತಿಗೆ ಸಂಬಂಧಿಸಿದಂತೆ ಪಡೆದಿರುವ ಕಾಮಗಾರಿ ಗುತ್ತಿಗೆ (ಒಪ್ಪಂದ) ಅಸ್ವಿತ್ವದಲ್ಲಿದ್ದರೆ ಅದು ಅವರ ಸದಸ್ಯತ್ವ ರದ್ದುಪಡಿಸಲು ಕಾರಣವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಸ್ಪಷ್ಟಪಡಿಸಿದೆ.

ಮಂಡ್ಯ ಜಿಲ್ಲೆಯ ಕೆ ಆರ್‌ ಪೇಟೆ ತಾಲ್ಲೂಕಿನ ಬೀರುಹಳ್ಳಿ ಗ್ರಾಮ ಪಂಚಾಯಿತಿಯ ಗುತ್ತಿಗೆ ಕಾಮಗಾರಿ ಕೆಲಸ ನಿರ್ವಹಿಸಿರುವ ಹಿನ್ನೆಲೆಯಲ್ಲಿ ಅದರ ಸದಸ್ಯ ಬಿ ಎನ್ ಕುಮಾರ್ ಅವರನ್ನು ಅನರ್ಹಗೊಳಿಸಬೇಕು ಎಂದು ಕೋರಿ ಅದೇ ಗ್ರಾಮದ ನಿವಾಸಿ ಬಿ ಟಿ ಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆ- 1993ರ ಸೆಕ್ಷನ್ 12 (ಎಚ್) ಪ್ರಕಾರ ಗ್ರಾಮ ಪಂಚಾಯ್ತಿ ಸದಸ್ಯರನ್ನು, ಅವರ ಪಂಚಾಯತಿಗೆ ಸೇರಿದ ಕಾಮಗಾರಿಗಳ ಗುತ್ತಿಗೆ ಪಡೆದು, ಆ ಗುತ್ತಿಗೆ ಒಪ್ಪಂದ ಅಸ್ತಿತ್ವದಲ್ಲಿ ಇದ್ದರೆ ಮಾತ್ರ ಸದಸ್ಯತ್ವ ಅನರ್ಹಗೊಳಿಸಲು ಕಾರಣವಾಗುವುದು. ಅದು ಬಿಟ್ಟು ಹಿಂದಿನ ವರ್ಷದ ಕಾಮಗಾರಿಗಳು ಅಂದರೆ ಅವರು ಸದಸ್ಯರಾಗುವ ಮುನ್ನ ಕಾಮಗಾರಿಗಳು ನಡೆಸಿ, ಅದನ್ನು ಪೂರ್ಣಗೊಳಿಸಿದ್ದರೆ, ಅದರ ಆಧಾರದ ಮೇಲೆ ಸದಸ್ಯತ್ವ ರದ್ದುಪಡಿಸಲು ಸಾಧ್ಯವಿಲ್ಲ. ಅಧೀನ ನ್ಯಾಯಾಲಯವು ಸಹ ಇದೇ ವ್ಯಾಖ್ಯಾನ ಮಾಡಿ, ಬಿ ಎನ್‌ ಕುಮಾರ್‌ ಅವರ ಅನರ್ಹತೆ ಕೋರಿ ಅರ್ಜಿದಾರರು ಸಲ್ಲಿಸಿದ್ದ ಚುನಾವಣಾ ಅರ್ಜಿಯನ್ನು ತಿರಸ್ಕರಿಸಿದೆ. ಹೀಗಾಗಿ, ಅದರ ಆದೇಶದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯ ಕಂಡುಬರುತಿಲ್ಲ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಬೀರುಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಬಿ ಎನ್ ಕುಮಾರ್ 2018ರಿಂದ 2020ರ ಜುಲೈ 3ರ ನಡುವೆ ಪಂಚಾಯ್ತಿ ಗುತ್ತಿಗೆ ಕಾಮಗಾರಿಗಳನ್ನು ಕೈಗೊಂಡು ಪೂರ್ಣಗೊಳಿಸಿದ್ದಾರೆ. ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯ್ತಿ ಸದಸ್ಯರ ಆಯ್ಕೆಗೆ 2020ರ ಜುಲೈ 7ರಂದು ಚುನಾವಣಾ ಅಧಿಸೂಚನೆ ಹೊರಡಿಸಿತ್ತು. ಅದರಂತೆ ಗ್ರಾಮ ಪಂಚಾಯಿತಿ ಸದಸ್ಯ ಚುನಾವಣೆಗೆ ಸ್ಪರ್ಧಿಸಿ ಬಿ ಎನ್ ಕುಮಾರ್‌ ಆಯ್ಕೆಯಾಗಿದ್ದಾರೆ.

ಕುಮಾರ್‌ ಆಯ್ಕೆ ಪ್ರಶ್ನಿಸಿ ಮಂಡ್ಯದ ಕೆ ಆರ್‌ ಪೇಟೆಯ ಹಿರಿಯ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಬಿ ಟಿ ಕುಮಾರ್‌ ಚುನಾವಣಾ ಅರ್ಜಿ ಸಲ್ಲಿಸಿದ್ದರು. ಗ್ರಾಮ ಪಂಚಾಯ್ತಿಯ ಯಾವುದೇ ಕಾಮಗಾರಿ ಗುತ್ತಿಗೆ ಪಡೆದು ನಿರ್ವಹಿಸಿದವರು ಸದಸ್ಯರಾಗಲು ಅವಕಾಶವಿಲ್ಲ ಎಂದು ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯಿದೆ-1993ರ ಸೆಕ್ಷನ್‌ 12(ಎಚ್‌) ಹೇಳುತ್ತದೆ. ಅದರಂತೆ ಕುಮಾರ್‌ ಅವರನ್ನು ಗ್ರಾಮ ಪಂಚಾಯ್ತಿ ಸದಸ್ಯತ್ವದಿಂದ ಅನರ್ಹಗೊಳಿಸಿ ಆದೇಶಿಸಬೇಕು ಎಂದು ಕೋರಿದ್ದರು. ಆ ಅರ್ಜಿಯನ್ನು ತಿರಸ್ಕರಿಸಿ ಅಧೀನ ನ್ಯಾಯಾಲಯವು 2022ರ ಆಗಸ್ಟ್‌ 6ರಂದು ಆದೇಶಿಸಿತ್ತು. ಇದರಿಂದ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್‌ ಅರ್ಜಿಯನ್ನು ವಜಾಗೊಳಿಸಿದೆ.

B T Kumar Vs B N Kumar.pdf
Preview