Dr BR Ambedkar 
ಸುದ್ದಿಗಳು

ತಮಿಳುನಾಡಿನಲ್ಲಿ ಅಂಬೇಡ್ಕರ್, ಪೆರಿಯಾರ್ ಪ್ರತಿಮೆ ಸ್ಥಾಪನೆಗೆ ಆಕ್ಷೇಪ ಇರದು: ಮದ್ರಾಸ್ ಹೈಕೋರ್ಟ್

ತಮ್ಮ ಜಮೀನಿನಲ್ಲಿ ಡಾ. ಅಂಬೇಡ್ಕರ್ ಮತ್ತು ಪೆರಿಯಾರ್ ಅವರ ಪ್ರತಿಮೆಗಳನ್ನು ಸ್ಥಾಪಿಸಲು ಖಾಸಗಿ ವ್ಯಕ್ತಿಗಳಿಗೆ ಅನುಮತಿ ನೀಡುವಂತೆ ತೂತ್ತುಕುಡಿ ಜಿಲ್ಲಾಧಿಕಾರಿಗಳಿಗೆ ಪೀಠ ನಿರ್ದೇಶಿಸಿದೆ.

Bar & Bench

ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಹಾಗೂ ಸಮಾಜ ಸುಧಾರಕ ಪೆರಿಯಾರ್ ಇ ವಿ ರಾಮಸಾಮಿ ಅವರ ಪ್ರತಿಮೆಗಳನ್ನು ಸ್ಥಾಪಿಸುವುದಕ್ಕೆ ತಮಿಳುನಾಡಿನಲ್ಲಿ ಯಾವುದೇ ಆಕ್ಷೇಪಣೆ ಇರುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಕಾಲಾಡಿ ಮತ್ತು ಜಿಲ್ಲಾಧಿಕಾರಿ ಮತ್ತು ಇತರ ಐವರ ನಡುವಣ ಪ್ರಕರಣ].

ತಮ್ಮ ಜಮೀನಿನಲ್ಲಿ ಈ ಇಬ್ಬರೂ ಮಹಾನ್‌ ವ್ಯಕ್ತಿಗಳ ಪ್ರತಿಮೆ ಸ್ಥಾಪಿಸಲು ಅನುಮತಿಸುವಂತೆ ಕೋರಿ ಕಾಲಾಡಿ ಎಂಬುವವರು ಸಲ್ಲಿಸಿರುವ ಮನವಿಯನ್ನು ಎರಡು ವಾರಗಳ ಒಳಗೆ ಇತ್ಯರ್ಥಪಡಿಸುವಂತೆ ತೂತ್ತುಕುಡಿ ಜಿಲ್ಲಾಧಿಕಾರಿಗಳಿಗೆ ನ್ಯಾ. ಸತಿಕುಮಾರ್ ಸುಕುಮಾರ ಕುರುಪ್ ಅವರಿದ್ದ ಏಕ ಸದಸ್ಯ ಪೀಠ ಸೂಚಿಸಿತು.

"ತಮಿಳುನಾಡಿಗೆ ಸಂಬಂಧಿಸಿದಂತೆ, ತಂಥೈ ಪೆರಿಯಾರ್ ಅಥವಾ ಡಾ. ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಸ್ಥಾಪಿಸಲು ಯಾರಿಂದಲೂ ಯಾವುದೇ ಆಕ್ಷೇಪಣೆ ಬರುವುದಿಲ್ಲ. ಜನರು ಈ ನಾಯಕರ ಬಗ್ಗೆ ವೈಯಕ್ತಿಕವಾಗಿ ಗೌರವ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ, ಅರ್ಜಿದಾರರ ಮನವಿ ಸ್ವೀಕಾರಾರ್ಹ” ಎಂದು ನ್ಯಾಯಾಲಯ ಹೇಳಿದೆ.

ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದೇನೆ. ಅಲ್ಲದೇ ಸ್ಥಳೀಯ ತಹಸೀಲ್ದಾರ್ ಕೂಡ ತಮ್ಮ ಜಮೀನಿನಲ್ಲಿ ಪ್ರತಿಮೆ ಸ್ಥಾಪಿಸಲು ಶಿಫಾರಸು ಮಾಡಿದ್ದಾರೆ. ಆದರೂ ಜಿಲ್ಲಾಧಿಕಾರಿಗಳು ತಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ದೂರಿ ಕಾಲಾಡಿ ಹೈಕೋರ್ಟ್‌ ಕದ ತಟ್ಟಿದ್ದರು.