Thirumala Milk and Madras HC 
ಸುದ್ದಿಗಳು

ತಿರುಮಲ ಟ್ರೇಡ್ ಮಾರ್ಕ್ ಬಳಸದಂತೆ ಕುಟೆ‌ ಕಂಪೆನಿಯನ್ನು ಪ್ರತಿಬಂಧಿಸಿದ ಮದ್ರಾಸ್‌ ಹೈಕೋರ್ಟ್

ತಮ್ಮ ಉತ್ಪನ್ನಗಳ ಮಾರ್ಕೆಟಿಂಗ್ ಮತ್ತು ಮಾರಾಟದಲ್ಲಿ ತಿರುಮಲಾ ಎಂಬ ಹೆಸರು ಬಳಸದಂತೆ ಕುಟೆ‌ ಸಮೂಹಕ್ಕೆ ತಡೆಯಾಜ್ಞೆ ನೀಡಿದ ಮದ್ರಾಸ್‌ ಹೈಕೋರ್ಟ್.

Bar & Bench

ತಿರುಮಲ ಹೆಸರಿನಲ್ಲಿ ಮಾರ್ಕೆಟಿಂಗ್‌ ಮತ್ತು ತಮ್ಮ ಉತ್ಪನ್ನಗಳ ಮಾರಾಟ ಮಾಡದಂತೆ ಕುಟೆ ಸಮೂಹಕ್ಕೆ ಮದ್ರಾಸ್‌ ಹೈಕೋರ್ಟ್‌ ಪ್ರತಿಬಂಧಕ ಆದೇಶ ನೀಡಿದೆ (ತಿರುಮಲಾ ಮಿಲ್ಕ್‌ ಪ್ರಾಡಕ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ವರ್ಸಸ್‌ ಸ್ವರಾಜ್‌ ಇಂಡಿಯಾ ಇಂಡಸ್ಟ್ರೀಸ್‌ ಲಿಮಿಟೆಡ್).

ತಿರುಮಲ ಹಾಲು ಉತ್ಪನ್ನಗಳ ನೋಂದಾಯಿತ ಮಾರ್ಕ್ ಆದ Thirumala ಮತ್ತು Tirumala ಅನ್ನು ಬಳಸದಂತೆ ಕುಟೆ‌ ಸಮೂಹದ ತಿರುಮಲಾ ಡಾಯ್ರಿ (Tirumalaa Daairy) ವಿರುದ್ಧ ಹಾಲು ಮಾರುಕಟ್ಟೆ ಕಂಪೆನಿ ತಿರುಮಲ ಮಿಲ್ಕ್‌ ಪ್ರಾಡೆಕ್ಟ್ಸ್‌ ಪ್ರತಿಬಂಧಕ ಆದೇಶವನ್ನು ಪಡೆದುಕೊಂಡಿದೆ.

ಕುಟೆ‌ ಸಮೂಹದಿಂದ ಮೇಲ್ನೋಟಕ್ಕೆ ಅತಿಕ್ರಮಣ ಮತ್ತು ನಿಯಮದ ಉಲ್ಲಂಘನೆಯಾಗಿದೆ ಎಂದಿರುವ ನ್ಯಾಯಮೂರ್ತಿ ಸಿ ಕಾರ್ತಿಕೇಯನ್‌ ಅವರು ಹೀಗೆ ಹೇಳಿದ್ದಾರೆ.

“…ಪ್ರತಿವಾದಿಗಳು ವ್ಯಾಪಕವಾಗಿ ತಮ್ಮ ಉತ್ಪನ್ನಗಳನ್ನು ಮಾರ್ಕೆಟಿಂಗ್‌ ಮಾಡಲು ಆರಂಭಿಸಿದ್ದು, ಉತ್ಪನ್ನಗಳ ಜಾಹೀರಾತು ನೀಡಿದ್ದಾರೆ. ಇದನ್ನು ಉಲ್ಲಂಘನೆ ಎನ್ನಬಹುದಾಗಿದೆ. ಉಲ್ಲಂಘನೆಗೆ ಉತ್ಪನ್ನಗಳ ನೈಜ ಮಾರಾಟವಾಗಬೇಕು ಎಂದೇನಿಲ್ಲ. ವ್ಯಾಪಕವಾಗಿ ಜಾಹೀರಾತು ಪ್ರಚಾರ ಮಾಡುವುದು ಮತ್ತು ಫಿರ್ಯಾದುದಾರರ ಗ್ರಾಹಕರನ್ನು ವಿನಂತಿಸಿಕೊಳ್ಳುವುದು ಮತ್ತು ತಮ್ಮ ಉತ್ಪನ್ನಗಳು ಇನ್ನೂ ಬಿಡುಗಡೆಯಾಗದಿದ್ದರೂ “ಡೈರಿ ಕ್ಷೇತ್ರದಲ್ಲಿ ವಿಶ್ವಾಸಾರ್ಹತೆಯ ಸಂಕೇತವಾಗಿರುವ” ಎಂದು ಕರೆದುಕೊಂಡಿರುವುದು ಇದೆಲ್ಲವೂ ಪ್ರತಿವಾದಿಗಳ ಉದ್ದೇಶ ಫಿರ್ಯಾದುದಾರರು ಗಳಿಸಿರುವ ಪ್ರತಿಷ್ಠೆಯನ್ನು ಕಬಳಿಸಿ ಅದರ ಲಾಭಪಡೆಯುವುದಾಗಿದೆ.”

ವಾಸ್ತವಾಂಶ: ತಿರುಮಲ ಸಮೂಹದ ಟ್ರೇಡ್‌ ಮಾರ್ಕ್‌ ಉಚ್ಚಾರಣೆಯ ರೀತಿಯಲ್ಲಿಯೇ ಇರುವ ತಿರುಮಲಾ ಡಾಯ್ರಿ ಮಾರ್ಕ್‌ ಅನ್ನು ಕುಟೆ ಸಮೂಹ ಬಳಸುತ್ತಿದೆ ಎಂದು ತಿರುಮಲ ಮಿಲ್ಕ್‌ ಪ್ರಾಡೆಕ್ಟ್ಸ್‌ ಲಿಮಿಟೆಡ್‌ ಅತಿಕ್ರಮಣ ಮೊಕದ್ದಮೆ ಮತ್ತು ಪ್ರತಿಬಂಧಕಾದೇಶ ಕೋರಿ ಮದ್ರಾಸ್‌ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿತು.

ತಗಾದೆ: ಫಿರ್ಯಾದುದಾರರು ದಕ್ಷಿಣ ಭಾರತದ ಹಲವು ರಾಜ್ಯಗಳು ಹಾಗೂ ಪಶ್ಚಿಮ ಬಂಗಾಳದಲ್ಲಿ ಪ್ರಮುಖವಾದ ಡೈರಿ ಉತ್ಪನ್ನಗಳ ಮಾರಾಟಗಾರರಾಗಿದ್ದು, ಇತ್ತೀಚೆಗೆ ಮಹಾರಾಷ್ಟ್ರಗೆ ಮಾರುಕಟ್ಟೆಯನ್ನೂ ಪ್ರವೇಶಿಸಲಾಗಿದೆ. ಲಾತೂರಿನಲ್ಲಿ ಕಂಪೆನಿಯೊಂದರ ಜೊತೆ ತಿರುಮಲ ಹೆಸರಿನಲ್ಲಿ ಮಹಾರಾಷ್ಟ್ರಾದ್ಯಂತ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಪ್ರತಿಬಂಧಕ ಮನವಿ ವಿಚಾರಣೆಯ ಸಂದರ್ಭದಲ್ಲಿ ಫಿರ್ಯಾದುರಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ಇದಾದ ಬಳಿಕ ಪ್ರತಿವಾದಿಗಳು ಇದೇ ಉತ್ಪನ್ನಗಳ ಮಾರಾಟ ಉದ್ಯಮಕ್ಕೆ ಇಳಿದಿದ್ದು, ಮಹಾರಾಷ್ಟ್ರದಲ್ಲಿ ಮೂರು ಘಟಕಗಳನ್ನು ಆರಂಭಿಸಿದ್ದಾರೆ. ಉದ್ಯಮ ಆರಂಭಿಸದಿದ್ದರೂ ಪ್ರತಿವಾದಿಗಳು ತಮ್ಮ ವೆಬ್‌ಸೈಟಿನಲ್ಲಿ ತಾವು ಡೈರಿ ಕ್ಷೇತ್ರದಲ್ಲಿ ವಿಶ್ವಾಸಾರ್ಹತೆ ಉಳ್ಳವರು ಎಂದು ಉಲ್ಲೇಖಿಸಿದ್ದಾರೆ. ವಂಚಿಸುವ ಉದ್ದೇಶದಿಂದ ಒಂದೇ ಹೆಸರಿನಲ್ಲಿ ತಮ್ಮ ಡೈರಿ ಉತ್ಪನ್ನಗಳನ್ನು ಮಾರಾಟ ಮತ್ತು ಬ್ರಾಂಡ್‌ ಮಾಡಲು ಪ್ರತಿವಾದಿಗಳು ಮುಂದಾಗಿರುವುದು ಸಾಮಾನ್ಯ ಜನರನ್ನು ದಿಕ್ಕು ತಪ್ಪಿಸುವ ಮೂಲಕ ಫಿರ್ಯಾದುದಾರರು ಗಳಿಸಿಕೊಂಡಿರುವ ಪ್ರತಿಷ್ಠೆಯ ಲಾಭ ಮಾಡಿಕೊಳ್ಳುವ ಏಕೈಕ ಉದ್ದೇಶ ಹೊಂದಲಾಗಿದೆ. ಈ ನಡೆಯಿಂದ ಗೊಂದಲ ಸೃಷ್ಟಿಯಾಗಲಿದ್ದು, ಪ್ರತಿವಾದಿಗಳ ನಿರ್ಧಾರವು ದುರುದ್ದೇಶಪೂರಿತ ಮತ್ತು ಅಪ್ರಾಮಾಣಿಕವಾಗಿದೆ ಎಂದು ಫಿರ್ಯಾದುರಾರರು ಬಲವಾಗಿ ತಮ್ಮ ಮನವಿಯಲ್ಲಿ ಪ್ರತಿಪಾದಿಸಿದ್ದಾರೆ.

ತಮ್ಮ ಉತ್ಪನ್ನ ವಿಶಿಷ್ಟತೆ ಗಳಿಸಿಕೊಂಡಿದ್ದು, ತಿರುಮಲ ಎಂಬ ಹೆಸರು ತಮ್ಮ ಡೈರಿ ಉತ್ಪನ್ನಗಳ ಜೊತೆ ಮಿಳಿತಗೊಂಡಿದೆ. ಇದರ ಲಾಭ ಪಡೆಯಲು ಪ್ರತಿವಾದಿಗಳು ಯತ್ನಿಸುತ್ತಿದ್ದು, ಇದರಿಂದ ತಮ್ಮ ಉತ್ಪನ್ನಗಳಿಗೆ ಹೊಡೆತ ಬೀಳಲಿದೆ ಫಿರ್ಯಾದುದಾರರು ವಾದಿಸಿದ್ದಾರೆ. ಒಂದೇ ಹೆಸರಿನ ಉತ್ಪನ್ನವನ್ನು ಪ್ರತಿವಾದಿಗಳು ಪ್ರಚಾರ ಮಾಡಲು ಆರಂಭಿಸಿದ್ದರಿಂದ ಮಹಾರಾಷ್ಟ್ರದಲ್ಲಿರುವ ಪೂರೈಕೆದಾರರು ನಿರಂತರವಾಗಿ ಕರೆ ಮಾಡುತ್ತಿದ್ದಾರೆ ಎಂದು ಫಿರ್ಯಾದುದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಪ್ರತಿವಾದಿಗಳ ವಾದವೇನು?: ಫಿರ್ಯಾದುದಾರರು ಪಡೆದುಕೊಂಡಿರುವ ಹೆಸರು ವಿಭಿನ್ನವಾದುದೇನಲ್ಲ. ಅದು ವೆಂಕಟೇಶ್ವರ ದೈವದ ನೆಲೆಯಾಗಿದೆ ಎಂದು ಪ್ರತಿವಾದಿಗಳು ಉಲ್ಲೇಖಿಸಿದ್ದು, ತಮ್ಮ ಟ್ರೇಡ್‌ ಮಾರ್ಕ್‌ ನೋಂದಣಿಗೆ ಸಂಬಂಧಿಸಿದ ಆಕ್ಷೇಪಣೆ ಖಂಡಿಸುವಾಗ ಫಿರ್ಯಾದುದಾರರೇ ಈ ಕಾರಣವನ್ನು ನೀಡಿದ್ದಾರೆ. ತಿರುಮಲ ಎಂಬ ಹೆಸರನ್ನು ಇತರೆ ನೂರಾರು ಉದ್ಯಮಗಳಿಗೆ ಬಳಸಲಾಗಿದೆ ಎಂದು ಹೆಚ್ಚುವರಿಯಾಗಿ ಅವರೇ ಹೇಳಿದ್ದಾರೆ. ತಾವು ದೇವರ ಭಕ್ತರಾಗಿರುವುದರಿಂದ ಮತ್ತು ಅಧ್ಮಾತ್ಯ ಗುರುಗಳ ಸಲಹೆಯ ಹಿನ್ನೆಲೆಯಲ್ಲಿ ಸದರಿ ಹೆಸರು ಬಳಕೆ ಮಾಡಲಾಗಿದೆ ಎಂದು ಪ್ರತಿವಾದಿಗಳು ತಮ್ಮ ವಾದಕ್ಕೆ ಸಮರ್ಥನೆ ಒದಗಿಸಿದ್ದಾರೆ.

ನ್ಯಾಯಾಲಯದ ತೀರ್ಪು ಮತ್ತು ವಿಚಾರಗಳ ವಿವರಣೆ: ತಾವು ಮಹಾರಾಷ್ಟ್ರದಲ್ಲಿ ಬಲಿಷ್ಠವಾಗಿ ನೆಲೆಗೊಂಡಿದ್ದು, ಇದರ ಲಾಭ ಪಡೆಯಲು ಪ್ರತಿವಾದಿಗಳು ಯತ್ನಿಸುತ್ತಿದ್ದಾರೆ ಎಂಬ ಫಿರ್ಯಾದುದಾರರ ಆರೋಪವನ್ನು ಪ್ರತಿವಾದಿಗಳು ತಳ್ಳಿಹಾಕಿಲ್ಲ. ಈ ಹಿನ್ನೆಲೆಯಲ್ಲಿ ಮೇಲ್ನೋಟಕ್ಕೆ ಫಿರ್ಯಾದುದಾರರು ಪ್ರತಿಬಂಧಕಾದೇಶ ಪಡೆಯಲು ಅರ್ಹತೆ ಹೊಂದಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಇವುಗಳನ್ನು ಒಪ್ಪಿತ ಸತ್ಯ ಎಂದು ಪರಿಗಣಿಸಿರುವ ನ್ಯಾಯಪೀಠವು ಅತಿಕ್ರಮಣವಾಗಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ ಎಂದಿದೆ.

'ತಿರುಮಲ' ಹೆಸರಿನ ಹಿಂದೆ ಸಮೂಹದ ಹೆಸರು ಹಾಕಿಕೊಳ್ಳುವ ಪ್ರತಿವಾದಿಗಳ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು ಹೈಕೋರ್ಟ್‌ ಮುಂದಿರುವ ಪ್ರಕರಣವು ಇತ್ಯರ್ಥವಾಗುವವರೆಗೂ ಪ್ರತಿಬಂಧಕಾದೇಶ ಮುಂದುವರಿಯಲಿದೆ.

ವಕೀಲ ಪಿ ವಿ ಬಾಲಸುಬ್ರಮಣಿಯಮ್‌ ಅವರು ಫಿರ್ಯಾದುದಾರರ ಪರ ಮತ್ತು ವಕೀಲ ಹಿರೇನ್‌ ಕಮೋದ್‌ ಅವರು ಪ್ರತಿವಾದಿ ಕಂಪೆನಿ ಮತ್ತು ನಿರ್ದೇಶಕರನ್ನು ಪ್ರತಿನಿಧಿಸಿದ್ದರು.