ಸುದ್ದಿಗಳು

[ಯುರೋಪ್‌ ಪ್ರವಾಸ] ಸೂಕ್ತ ಸೇವೆ ಕಲ್ಪಿಸಲು ಥಾಮಸ್‌ ಕುಕ್‌ ಕಂಪೆನಿ ವಿಫಲ: ₹3 ಲಕ್ಷ ದಂಡ ವಿಧಿಸಿದ ಆಯೋಗ

Bar & Bench

ಯುರೋಪ್ ಪ್ರವಾಸದ ವೇಳೆ ಉತ್ತಮ ವಸತಿ, ಆಹಾರ ಮತ್ತು ಸಾರಿಗೆ ಸೌಲಭ್ಯ ಕಲ್ಪಿಸದಿರುವುದಕ್ಕೆ ಭಾರತದ ಪ್ರಮುಖ ಪ್ರವಾಸ ಸೇವೆ ಆಯೋಜಿಸುವ ಥಾಮಸ್ ಕುಕ್ (ಇಂಡಿಯಾ) ಲಿಮಿಟೆಡ್‌ಗೆ ಬೆಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ₹2 ಲಕ್ಷ ದಂಡ ವಿಧಿಸಿದೆ.

ವಿದೇಶ ಪ್ರವಾಸದ ವೇಳೆ ಕಂಪೆನಿಯಿಂದ ತಮಗಾದ ಅನನುಕೂಲತೆಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕೋರಿ  ಬೆಂಗಳೂರಿನ ಕೆ ರುದ್ರಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ಅಧ್ಯಕ್ಷರಾದ ನಾರಾಯಣಪ್ಪ ಮತ್ತು ಸದಸ್ಯರಾದ ಎನ್‌ ಜ್ಯೋತಿ ಮತ್ತು ಎಸ್‌ ಎಂ ಶರಾವತಿ ಅವರ ನೇತೃತ್ವದ ಪೀಠವು ಭಾಗಶಃ ಪುರಸ್ಕರಿಸಿದೆ.

ಜಂಟಿ ಪ್ರವಾಸ ಯೋಜನೆ ಕೈಗೊಂಡಾಗ ವೀಸಾ ಹಾಗೂ ಇತರೆ ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಗಳಿಂದ ಪ್ರಯಾಣಿಕರಿಗೆ ಕೊಡಿಸುವುದು ಪ್ರವಾಸ ಕಂಪೆನಿಗಳ ಆದ್ಯ ಕರ್ತವ್ಯವಾಗಿರುತ್ತದೆ. ಅಲ್ಲದೆ, ದೂರುದಾರರು ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸಿದರೂ ವೀಸಾ ಹಾಗೂ ಇತರೆ ದಾಖಲೆ ಕೊಡಿಸದೇ ಇರುವುದು ಸೇವಾ ನ್ಯೂನತೆ ಆಗಲಿದೆ ಎಂಬ ಗ್ರಾಹಕರ ವಾದವನ್ನು ಪುರಸ್ಕರಿಸಿದೆ.

ಪ್ರಕರಣ ಸಂಬಂಧ ಅರ್ಜಿದಾರರಿಗೆ ಸೂಕ್ತ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾದ ಥಾಮಸ್ ಕುಕ್ (ಇಂಡಿಯಾ) ಲಿಮಿಟೆಡ್ ಕಂಪೆನಿಯು ₹2 ಲಕ್ಷ ಪರಿಹಾರ, ಸೇವಾ ನ್ಯೂನತೆಗಳಿಗಾಗಿ ₹1 ಲಕ್ಷ ಮತ್ತು ನ್ಯಾಯಾಂಗ ವೆಚ್ಚ ₹5,000ಗಳನ್ನು ಆದೇಶದ ದಿನಾಂಕದಿಂದ ಎರಡು ತಿಂಗಳ ಒಳಗೆ ವಾರ್ಷಿಕ ಶೇ. 10 ಬಡ್ಡಿಯೊಂದಿಗೆ ಅರ್ಜಿದಾರರಿಗೆ ಪಾವತಿಸಬೇಕು ಎಂದು ನಿರ್ದೇಶಿಸಿದೆ.

ಪ್ರವಾಸವು 2023ರ ಮೇ 24ರಂದು ಬೆಳಿಗ್ಗೆ 10.10ಕ್ಕೆ ಪ್ರಾರಂಭಗೊಳ್ಳಬೇಕಿತ್ತು. ಆದರೆ, ದೂರುದಾರರ ವೀಸಾ ಬರುವುದು ವಿಳಂಬವಾದ ಕಾರಣ ಅವರು ಸಕಾಲಕ್ಕೆ ಹೊರಡಲು ಸಾಧ್ಯವಾಗಲಿಲ್ಲ. ಎಂಬೆಸಿಯು ದೂರುದಾರರ ವೀಸಾವನ್ನು ತಡವಾಗಿ ಅನುಮೋದಿಸಿತು. ಅದರಿಂದ ದೂರುದಾರರು ನೇರವಾಗಿ ಪ್ಯಾರಿಸ್‌ ನಗರವನ್ನು ತಲುಪಿದರು. ಅಷ್ಟರಲ್ಲಿ ಪ್ರವಾಸದ ಲಂಡನ್‌ ನಗರದ ಭಾಗ ಮುಗಿದಿತ್ತು ಎಂದು ಕಂಪೆನಿ ವಾದವನ್ನು ಆಯೋಗವು ತಿರಸ್ಕರಿಸಿದೆ.

ಪ್ರಕರಣದ ವಿವರ: ಬೆಂಗಳೂರಿನ ಕೆ ರುದ್ರಮೂರ್ತಿ ಥಾಮಸ್ ಕುಕ್ ಇಂಡಿಯಾ ಲಿಮಿಟೆಡ್ ಎಂಬ ಪ್ರವಾಸ ಕಂಪೆನಿಯಿಂದ ಗ್ರ್ಯಾಂಡ್‌ ಬಾರ್ಗೇನ್ ಟೂರ್ ಆಫ್‌ ಯುರೋಪ್ - ಸೌತ್‌ ಸ್ಪೆಷಲ್‌ ’ ಹೆಸರಿನಡಿಯಲ್ಲಿ 14 ರಾತ್ರಿ ಹಾಗೂ 15 ದಿನಗಳ ಪ್ರವಾಸವನ್ನು ಕುಟುಂಬದೊಂದಿಗೆ ತೆರಳಲು ನಿರ್ಧರಿಸಿದ್ದರು. ಒಬ್ಬರಿಗೆ ಜಿಎಸ್‌ಟಿ ಹಾಗೂ ಟಿಸಿಎಸ್ ಸೇರಿ ₹ 3,79,535ಯಂತೆ, ಅರ್ಜಿದಾರರು ಕುಟುಂಬದ ನಾಲ್ವರ ಜೊತೆಗೆ ಪ್ರವಾಸಕ್ಕೆ ತೆರಳಲು ಕಂಪೆನಿಗೆ ₹16,37,000 ಪಾವತಿಸಿದ್ದರು.

ಪ್ರವಾಸದ ಸಂದರ್ಭದಲ್ಲಿ ಯುರೋಪ್‌ನ ಪ್ರಮುಖ ಸ್ಥಳಗಳಾದ ಲಂಡನ್, ಪ್ಯಾರಿಸ್‌, ಬೆಲ್ಜಿಯಂ, ನೆದರ್‌ಲ್ಯಾಂಡ್‌, ಜರ್ಮನಿ, ಸ್ವಿಟ್ಜರ್‌ಲ್ಯಾಂಡ್‌, ಆಸ್ಟ್ರಿಯಾ ಹಾಗೂ ವ್ಯಾಟಿಕನ್ ಸಿಟಿ ಭೇಟಿಯನ್ನು ಕಂಪೆನಿಯು ಖಚಿತಪಡಿಸಿತ್ತು. ಪ್ಯಾಕೇಜ್‌ ಆಹಾರ, ವಸತಿ ಹಾಗೂ ಸಾರಿಗೆ ಸೌಲಭ್ಯವನ್ನು ಒಳಗೊಂಡಿತ್ತು. ಪ್ರವಾಸವು ಕಳೆದ ವರ್ಷದ ಮೇ 24 ರಂದು ಪ್ರಾರಂಭಗೊಂಡು ಜೂನ್‌ 8ರಂದು ಮುಕ್ತಾಯಗೊಂಡಿತು. ಕಂಪೆನಿಯು 14 ರಾತ್ರಿ ಹಾಗೂ 15 ದಿನಗಳ ಪ್ರವಾಸವನ್ನು 12 ರಾತ್ರಿ ಹಾಗೂ 13 ದಿನಗಳ ಪ್ರವಾಸಕ್ಕೆ ಮೊಟಕುಗೊಳಿಸಿತ್ತು. ಆಹಾರ ವಸತಿ ಹಾಗೂ ಸಾರಿಗೆ ಸೌಲಭ್ಯ ಸರಿಯಾಗಿ ಕಲ್ಪಿಸಿರಲಿಲ್ಲ. ಅಲ್ಲದೆ, ಕಂಪೆನಿಯು ಪ್ರಸ್ತಾಪಿಸಿದ ಎಲ್ಲ ಸ್ಥಳಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಿಲ್ಲ ಮಾತ್ರವಲ್ಲದೆ ಪ್ರವಾಸದ ಮುಖ್ಯ ಭಾಗವಾಗಿರುವ ಲಂಡನ್‌ಗೂ ಕರೆದೊಯ್ದಿರಲಿಲ್ಲ ಎಂದು ದೂರಲಾಗಿತ್ತು.

Rudramurthy K Vs Thomas Cook (India) Ltd.pdf
Preview