Ramesh gowda 
ಸುದ್ದಿಗಳು

ಉದ್ಯಮಿ ವಿಜಯ್‌ ಟಾಟಾಗೆ ಬೆದರಿಕೆ: ಎಫ್‌ಐಆರ್‌ ರದ್ದತಿ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಜೆಡಿಎಸ್‌ ಮುಖಂಡ ರಮೇಶ್‌ ಗೌಡ

ಚುನಾವಣಾ ವೆಚ್ಚಕ್ಕೆ ₹50 ಕೋಟಿ ಕೊಡು. ಇಲ್ಲದೇ ಇದ್ದರೆ ನಿನ್ನನ್ನು ಬದುಕಲು ಬಿಡುವುದಿಲ್ಲ ಎಂದು ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಮತ್ತು ಎಚ್‌ ಎಂ ರಮೇಶ್‌ ಗೌಡ ಬೆದರಿಕೆ ಒಡ್ಡಿದ್ದಾರೆ ಎಂದು ದೂರಲಾಗಿದೆ.

Bar & Bench

ಉದ್ಯಮಿ ವಿಜಯ್ ಟಾಟಾಗೆ ಬೆದರಿಕೆಯೊಡ್ಡಿದ ಆರೋಪದಡಿ ತಮ್ಮ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿ ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್ ಎಂ ರಮೇಶ್‌ ಗೌಡ ಅವರು‌ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ಕುರಿತ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್‌ ಅವರ ಏಕಸದಸ್ಯ ಪೀಠದ ಮುಂದೆ ಸೋಮವಾರ ವಿಚಾರಣೆಗೆ ನಿಗದಿಯಾಗಿತ್ತು. ಅರ್ಜಿ ಪರಿಶೀಲಿಸಿದ ಪೀಠವು ಅರ್ಜಿಯಲ್ಲಿನ ಕಚೇರಿ ಆಕ್ಷೇಪಣೆಗಳನ್ನು ನಿವಾರಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಅಕ್ಟೋಬರ್‌ 21ಕ್ಕೆ ಮುಂದೂಡಿತು.

ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ ಅವರು “ಅರ್ಜಿದಾರರ ವಿರುದ್ಧದ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದವು. ಈ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರನ್ನೂ ಹೆಸರಿಸಲಾಗಿದೆ. ಆಧಾರರಹಿತವಾದ ಈ ದೂರನ್ನು ರದ್ದುಗೊಳಿಸಬೇಕು” ಎಂದು ಮನವಿ ಮಾಡಿದರು.

“ಚುನಾವಣಾ ವೆಚ್ಚಕ್ಕೆ ₹50 ಕೋಟಿ ಕೊಡು. ಇಲ್ಲದೇ ಇದ್ದರೆ ನಿನ್ನನ್ನು ಬದುಕಲು ಬಿಡುವುದಿಲ್ಲ ಎಂದು ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಮತ್ತು ಎಚ್‌ ಎಂ ರಮೇಶ್‌ ಗೌಡ ಬೆದರಿಕೆ ಒಡ್ಡಿದ್ದಾರೆ” ಎಂದು ಆರೋಪಿಸಿ ಉದ್ಯಮಿ ವಿಜಯ್‌ ಟಾಟಾ ನೀಡಿರುವ ದೂರಿನ ಅನ್ವಯ ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.