Chief Justice of India NV Ramana  
ಸುದ್ದಿಗಳು

ಮಾನವ ಹಕ್ಕುಗಳಿಗೆ ಬೆದರಿಕೆ ಹೆಚ್ಚಿರುವುದು ಪೊಲೀಸ್ ಠಾಣೆಗಳಲ್ಲಿ ಎಂದ ಸಿಜೆಐ; ಪೊಲೀಸರಲ್ಲಿ ಸಂವೇದನೆ ಮೂಡಿಸಲು ಕರೆ

ಎನ್ಎಎಲ್ಎಸ್ಎ ಆಯೋಜಿಸಿದ್ದ ಕಾನೂನು ಸೇವೆಗಳ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ವಿಶೇಷ ಹಕ್ಕು ಪಡೆದವರು ಕೂಡ ಮೂರನೇ ಡಿಗ್ರಿ ಟ್ರೀಟ್‌ಮೆಂಟ್‌ನಿಂದ ಬಚಾವಾಗಲು ಸಾಧ್ಯವಾಗುತ್ತಿಲ್ಲ ಎಂದರು.

Bar & Bench

ಪೊಲೀಸ್‌ ಠಾಣೆಗಳಲ್ಲಿಯೇ ಮಾನವ ಹಕ್ಕುಗಳು ಮತ್ತು ದೈಹಿಕ ಭದ್ರತೆಗೆ ಹೆಚ್ಚಿನ ಬೆದರಿಕೆಗಳು ಇವೆ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ಭಾನುವಾರ ತಿಳಿಸಿದರು. ಜೊತೆಗೆ ದೇಶದೆಲ್ಲೆಡೆಯ ಪೊಲೀಸ್ ಪಡೆಗಳಿಗೆ ಸಂವೇದನಾ ಕಾರ್ಯಕ್ರಮಗಳನ್ನು ನಡೆಸುವಂತೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಎನ್‌ಎಎಲ್‌ಎಸ್‌ಎ) ಅವರು ಕರೆ ನೀಡಿದರು.

ಸಾಂವಿಧಾನಿಕ ಘೋಷಣೆ ಮತ್ತು ಖಾತರಿಗಳ ಹೊರತಾಗಿಯೂ ಬಂಧಿತರು ಮತ್ತು ವಶಕ್ಕೆ ಪಡೆದ ವ್ಯಕ್ತಿಗಳಿಗೆ ಪೊಲೀಸ್ ಠಾಣೆಗಳಲ್ಲಿ ಪರಿಣಾಮಕಾರಿ ಕಾನೂನು ಬೆಂಬಲದ ಕೊರತೆಯಿದೆ. ಪೊಲೀಸರನ್ನು ನಿಯಂತ್ರಣದಲ್ಲಿಡಲು, ಉಚಿತ ಕಾನೂನು ನೆರವು ಮತ್ತು ಸಹಾಯದ ಮಾಹಿತಿ ಸರಿಯಾದ ದಿಕ್ಕಿನಲ್ಲಿ ಇರಿಸಿದ ಹೆಜ್ಜೆಯಾಗಿದೆ. ಪ್ರಾಧಿಕಾರವು ಪೊಲೀಸ್ ಸಂವೇದನಾ ಕಾರ್ಯಕ್ರಮಗಳನ್ನು ಸಹ ಕೈಗೊಳ್ಳಬೇಕು" ಎಂದು ಸಿಜೆಐ ಹೇಳಿದರು.

ಎನ್‌ಎಎಲ್‌ಎಸ್‌ಎ ಆಯೋಜಿಸಿದ್ದ ಕಾನೂನು ಸೇವೆಗಳ ಮೊಬೈಲ್‌ ಅಪ್ಲಿಕೇಷನ್‌ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕಸ್ಟಡಿ ಸಾವು ಮತ್ತಿತರ ಪೊಲೀಸ್‌ ದೌರ್ಜನ್ಯಗಳು ಸಮಾಜದಲ್ಲಿ ಇನ್ನೂ ಪ್ರಚಲಿತದಲ್ಲಿರುವ ಸಮಸ್ಯೆಗಳು ಎಂದು ಅವರು ತಿಳಿಸಿದರು.

ಪೊಲೀಸ್‌ ಠಾಣೆಗಳಲ್ಲಿ ಮಾನವ ಹಕ್ಕುಗಳಿಗೆ ಮತ್ತು ದೈಹಿಕ ಭದ್ರತೆಗೆ ಭಾರಿ ಬೆದರಿಕೆ ಇದೆ. ಇತ್ತೀಚಿನ ವರದಿಗಳ ಪ್ರಕಾರ, ವಿಶೇಷ ಹಕ್ಕು ಪಡೆದವರು ಕೂಡ ಮೂರನೇ ಡಿಗ್ರಿ ಟ್ರೀಟ್‌ಮೆಂಟ್‌ನಿಂದ ಬಚಾವಾಗಲು ಸಾಧ್ಯವಾಗುತ್ತಿಲ್ಲ ಎಂದರು. ಪೋಲಿಸರ ಅತಿರೇಕಗಳನ್ನು ನಿಯಂತ್ರಣದಲ್ಲಿಡಲು, ಕಾನೂನು ಸಹಾಯದ ಸಾಂವಿಧಾನಿಕ ಹಕ್ಕು ಮತ್ತು ಉಚಿತ ಕಾನೂನು ನೆರವು ಲಭ್ಯತೆಯ ಬಗ್ಗೆ ಮಾಹಿತಿ ಪ್ರಸರಣ ಅಗತ್ಯ ಎಂದು ಅಭಿಪ್ರಾಯಪಟ್ಟರು.

"ಪ್ರತಿ ಪೊಲೀಸ್ ಠಾಣೆ ಮತ್ತು ಕಾರಾಗೃಹದಲ್ಲಿ ಪ್ರದರ್ಶನ ಫಲಕಗಳು ಮತ್ತು ಹೊರಾಂಗಣ ಹೋರ್ಡಿಂಗ್‌ಗಳನ್ನು ಅಳವಡಿಸುವುದು ಈ ನಿಟ್ಟಿನಲ್ಲಿ ಇರಿಸಬೇಕಾದ ಹೆಜ್ಜೆಯಾಗಿದೆ" ಎಂದರು.

"ನಾವು ಕಾನೂನಿನ ನಿಯಮದಿಂದ ಆಳ್ವಿಕೆಯಾಗುವ ಸಮಾಜವಾಗಿ ಉಳಿಯಲು ಬಯಸಿದರೆ, ಹೆಚ್ಚಿನ ಸವಲತ್ತು ಪಡೆದವರು ಮತ್ತು ಅತ್ಯಂತ ದುರ್ಬಲರ ನಡುವಿನ ನ್ಯಾಯದ ಲಭ್ಯತೆಯ ಅಂತರ ಕಡಿಮೆ ಮಾಡುವುದು ಅತ್ಯಗತ್ಯ" ಎಂದು ಅವರು ಹೇಳಿದರು.

ಗ್ರಾಮೀಣ ಪ್ರದೇಶದ ಜನರ ಮೇಲೆ ಪರಿಣಾಮ ಬೀರುವ ನ್ಯಾಯದ ಲಭ್ಯತೆಯ ಸಮಸ್ಯೆಯ ಬಗ್ಗೆಯೂ ಸಿಜೆಐ ಮಾತನಾಡಿದರು. ನ್ಯಾಯ ಎಲ್ಲರಿಗೂ ಲಭ್ಯವಾಗುವಂತೆ ನೋಡಿಕೊಳ್ಳಲು ಸರ್ಕಾರದ ವಿವಿಧ ಅಂಗಗಳೊಂದಿಗೆ ಕೈಜೋಡಿಸಿ ಕೆಲಸ ಮಾಡುವುದು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

ಉಚಿತ ಕಾನೂನು ನೆರವು ಸೇವೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅರ್ಹ ವ್ಯಕ್ತಿಗಳ ಮೂಲಕ ಕಾನೂನು ಸೇವೆಗಳ ವ್ಯಾಪ್ತಿಯನ್ನು ಹೆಚ್ಚಿಸಲು ಈಗಿರುವ ಅಂಚೆ ಜಾಲದ ಸೇವೆಗಳನ್ನು ತೊಡಗಿಸಿಕೊಳ್ಳುವ ಬಗ್ಗೆ ಪ್ರಾಧಿಕಾರವು ತೆಗೆದುಕೊಂಡಿರುವ ನಿರ್ಧಾರವನ್ನು ಸಿಜೆಐ ಶ್ಲಾಘಿಸಿದರು.

ಅಗತ್ಯವಿರುವವರಿಗೆ ಸಹಾಯ ಮಾಡಲು ಎಲ್ಲ ವಕೀಲರು, ಅದರಲ್ಲಿಯೂ ವಿಶೇಷವಾಗಿ ಹಿರಿಯರು, ತಮ್ಮ ಕೆಲಸದ ಶೇಕಡಾವಾರು ಸಮಯ ಮೀಸಲಿಡಬೇಕೆಂದು ಮನವಿ ಮಾಡಿದರು.

"ಯಾವುದೇ ಸಂಸ್ಥೆಯು ಎಷ್ಟು ಉದಾತ್ತವಾಗಿರಲಿ, ಅದನ್ನು ಸಾರ್ವಜನಿಕ ಚಳುವಳಿಯಾಗಿ ಪರಿವರ್ತಿಸಲು ಎಲ್ಲಾ ಪಾಲುದಾರರಿಂದ ಸಂಪೂರ್ಣ ಸಹಾಯ ದೊರೆಯದ ಹೊರತು ಅದು ಯಶಸ್ವಿಯಾಗಲು ಸಾಧ್ಯವಿಲ್ಲ" ಎಂದು ಸಿಜೆಐ ಹೇಳಿದರು.