ಯಕ್ಷಗಾನ ಕಲಾವಿದರಿಗೆ ಬೆದರಿಕೆ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿ ತನಿಖೆಗೆ ಸಹಕರಿಸಬೇಕು ಎಂದು ನಿರ್ದೇಶಿಸಿರುವ ಕರ್ನಾಟಕ ಹೈಕೋರ್ಟ್ ಅವರ ವಿರುದ್ಧ ತನಿಖಾಧಿಕಾರಿ ಬಲವಂತದ ಕ್ರಮಕೈಗೊಳ್ಳಬಾರದು ಎಂದು ನಿರ್ದೇಶಿಸಿದೆ.
ಪ್ರಕರಣ ರದ್ದತಿ ಕೋರಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ಅರ್ಜಿದಾರರ ಪರ ವಕೀಲೆ ಅಕ್ಷತಾ ಶೆಟ್ಟಿ “ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಅವರ ಬಾಲ್ಯ ಸ್ನೇಹಿತನ ಜೊತೆ ಫೋನ್‌ನಲ್ಲಿ ಸಂಭಾಷಣೆಯಾಗಿದೆ. ತಿಮರೋಡಿ ಅವರ ಸ್ನೇಹಿತ ಯಕ್ಷಗಾನ ಕಾರ್ಯಕ್ರಮದಲ್ಲಿ ಅಭಿನಯಿಸಿದ್ದು, ಅದು ನಮ್ಮ ಕುಡ್ಲ ಚಾನೆಲ್‌ನಲ್ಲಿ ಪ್ರಸಾರವಾಗಿತ್ತು. ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ತನಿಖೆಗೆ ವಿಶೇಷ ತನಿಖಾ ದಳ ರಚನೆಯಾದಾಗಿನಿಂದ ಈ ವಸ್ತುವನ್ನು ಯಕ್ಷಗಾನ ಕಾರ್ಯಕ್ರಮದಲ್ಲಿ ಹಾಸ್ಯವಾಗಿ ಬಳಕೆ ಮಾಡುತ್ತಿದ್ದಾರೆ. ಹಾಸ್ಯ ನಟರು ತಲೆ ಬುರುಡೆ ಹಿಡಿದು, ಮಾಸ್ಕ್ ಹಾಕಿಕೊಂಡು ಬಂದು ತಿಮರೋಡಿಗೆ ಪ್ರಚೋದನೆ ನೀಡುತ್ತಿದ್ದಾರೆ. ಬುರುಡೆ ಗ್ಯಾಂಗ್ ಎಂದು ಏಕೆ ಹೇಳುತ್ತಾರೆ. ಯಕ್ಷಗಾನವನ್ನು ಈ ರೀತಿ ಬಳಕೆ ಮಾಡಬಾರದು ಎಂದು ತಿಮರೋಡಿ ಹೇಳಿದ್ದಾರೆ” ಎಂದರು.
ಆಗ ಪೀಠವು “ತಿಮರೋಡಿಗೆ ಸುಮ್ಮನೇ ಇರಲು ಆಗುವುದಿಲ್ಲವೇ?” ಎಂದಿತು. ಅದಕ್ಕೆ ಅಕ್ಷತಾ ಅವರು “ವೈಯಕ್ತಿಕ ಸಂಭಾಷಣೆಯನ್ನು ವ್ಯಾಪಕವಾಗಿ ಹಂಚಲಾಗಿದೆ” ಎಂದರು. ಈ ಹಂತದಲ್ಲಿ ಪೀಠವು ಅದನ್ನು ಹಂಚಿದವರು ಯಾರು ಎಂದು ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರನ್ನು ಪ್ರಶ್ನಿಸಿತು. ಅದಕ್ಕೆ ಅವರು ತನಿಖೆ ನಡೆಯುತ್ತಿದೆ” ಎಂದರು.
ಇದಕ್ಕೆ ಪೀಠವು “ನೀವು ತನಿಖೆ ಮಾಡಿ, ಯಾರು ಹಂಚಿಕೆ ಮಾಡಿದರು ಅವರನ್ನು ಆರೋಪಿಯನ್ನಾಗಿ ಮಾಡೋಣ. ತಿಮರೋಡಿ ತನಿಖೆಗೆ ಸಹಕರಿಸಬೇಕು” ಎಂದು ನ್ಯಾಯಾಲಯ ಹೇಳಿತು.
ಈ ಹಂತದಲ್ಲಿ ಜಗದೀಶ್ ಅವರು “ಸಮನ್ವಯ ಪೀಠವು ಬೇರೊಂದು ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ದೊರೆತಿದ್ದು, ತನಿಖೆಗೆ ಸಹಕರಿಸಬೇಕು ಎಂದು ನ್ಯಾಯಾಲಯ ಹೇಳಿದೆ” ಎಂದರು. ಆಗ ಅಕ್ಷತಾ ಅವರು “ತಿಮರೋಡಿ ವಿರುದ್ಧ ಗಡಿಪಾರು ಆದೇಶವಿದೆ. ಹೀಗಾಗಿ, ತನಿಖೆಯಲ್ಲಿ ಭಾಗವಹಿಸಲು ಆಗುತ್ತಿಲ್ಲ. ಈಗ ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದೇವೆ. ನಿರೀಕ್ಷಣಾ ಜಾಮೀನು ಷರತ್ತಿನಲ್ಲೂ ಸಡಿಲಿಕೆ ಕೋರಿದ್ದೇವೆ” ಎಂದರು.
ಆಗ ಪೀಠವು “ಗಡಿಪಾರು ಆದೇಶದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ತನಿಖೆಗೆ ಹಾಜರಾಗಿ. ಬಲವಂತದ ಕ್ರಮಕೈಗೊಳ್ಳಬಾರದು ಎಂದು ಆದೇಶ ಮಾಡುತ್ತೇನೆ. ಯಾರು ಆಡಿಯೊ ಹಂಚಿಕೆ ಮಾಡಿದ್ದಾರೆ ಎಂಬುದು ಗೊತ್ತಾಗಬೇಕು” ಎಂದು, ಆದೇಶಿಸಿತು.
ವಿಚಾರಣೆಯ ವೇಳೆ ವಕೀಲ ಎಸ್ ರಾಜಶೇಖರ್ ಅವರನ್ನು ಕುರಿತು ಪೀಠವು “ನಿಮಗೆ ನೋಟಿಸ್ ಕೊಟ್ಟಿಲ್ಲ. ಈ ಕೇವಿಯಟ್ ಬ್ಯುಸಿನೆಸ್ ನಿಲ್ಲಬೇಕು. ಈ ನ್ಯಾಯಾಲಯದ ನ್ಯಾಯವ್ಯಾಪ್ತಿಯಲ್ಲಿ ಕೇವಿಯಟ್ ಇಲ್ಲ. ರಾಜ್ಯ ಸರ್ಕಾರ ವಾದ ಮಂಡಿಸಬೇಕೆ ವಿನಾ ನೀವಲ್ಲ” ಎಂದು ಸ್ಪಷ್ಟವಾಗಿ ಹೇಳಿತು.