Supreme Court 
ಸುದ್ದಿಗಳು

ದೇಶದೆಲ್ಲೆಡೆ ಆಗಾಗ್ಗೆ ಇಂಟರ್ನೆಟ್ ಸ್ಥಗಿತ ಪ್ರಶ್ನಿಸಿ ಅರ್ಜಿ: ವಿಚಾರಣೆ ನಡೆಸಲಿರುವ ತ್ರಿಸದಸ್ಯ ಪೀಠ

ಫೌಂಡೇಶನ್ ಫಾರ್ ಮೀಡಿಯಾ ಪ್ರೊಫೆಷನಲ್ಸ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಯು ಯು ಲಲಿತ್ ಮತ್ತು ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಅವರಿದ್ದ ಪೀಠದೆದುರು ಪ್ರಸ್ತಾಪಿಸಲಾಯಿತು.

Bar & Bench

ದೇಶದೆಲ್ಲೆಡೆ ಆಗಾಗ್ಗೆ ಇಂಟರ್‌ನೆಟ್‌ ಸ್ಥಗಿತಗೊಳಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರು ಅರ್ಜಿಯನ್ನು ತ್ರಿಸದಸ್ಯ ಪೀಠದ ಮುಂದೆ ಪಟ್ಟಿ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.

ಫೌಂಡೇಶನ್ ಫಾರ್ ಮೀಡಿಯಾ ಪ್ರೊಫೆಷನಲ್ಸ್‌ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಯು ಯು ಲಲಿತ್ ಮತ್ತು ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಅವರಿದ್ದ ಪೀಠದೆದುರು ಪ್ರಸ್ತಾಪಿಸಲಾಯಿತು.

ಅನುರಾಧಾ ಭಾಸಿನ್‌ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನ ಪಾಲಿಸದಿರುವುದನ್ನು ಉಲ್ಲೇಖಿಸಿ ಅರ್ಜಿದಾರರು ಪ್ರಕರಣ ಆಲಿಸುವಂತೆ ಇಂದು ಕೋರಿದರು.

"ಅನುರಾಧಾ ಭಾಸಿನ್ ಪ್ರಕರಣದ ಬಳಿಕ ವ್ಯಾಪಕವಾಗಿ ಅಂತರ್ಜಾಲ ಸೇವೆ ಸ್ಥಗಿತಗೊಳಿಸಬಾರದೆಂದು ಹೇಳಲಾಗಿದೆ. ಆದರೆ ನಾವು ಭಾರತದಾದ್ಯಂತ ಸಾಕಷ್ಟು ಬಾರಿ ಇಂಟರ್‌ನೆಟ್‌ ಸ್ಥಗಿತಗೊಂಡಿರುವುದನ್ನು ಕಂಡಿದ್ದೇವೆ" ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು. ಆಗ ತ್ರಿಸದಸ್ಯ ಪೀಠದ ಮುಂದೆ ಪ್ರಕರಣ ಪಟ್ಟಿ ಮಾಡುವುದಾಗಿ ಸಿಜೆಐ ಲಲಿತ್‌ ಉತ್ತರಿಸಿದರು.

ಅನುರಾಧಾ ಭಾಸಿನ್ ಪ್ರಕರಣದ ತೀರ್ಪಿನ ವೇಳೆ ಸುಪ್ರೀಂ ಕೋರ್ಟ್‌ ಅಸಾಧಾರಣ ಸಂದರ್ಭಗಳಲ್ಲಿ ಅಳವಡಿಸಿಕೊಳ್ಳಬೇಕಾದ ಕಠಿಣ ಕ್ರಮವಾಗಿ ಮಾತ್ರ ಅಂತರ್ಜಾಲ ಸೇವೆ ಸ್ಥಗಿತಗೊಳಿಸಬಹುದು ಎಂದಿತ್ತು. ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಅದು ಈ ತೀರ್ಪು ನೀಡಿತ್ತು. ಆನಂತರವೂ ವಿವಿಧ ರಾಜ್ಯಗಳಲ್ಲಿ ಅಂತರ್ಜಾಲ ಸೇವೆ ಸ್ಥಗಿತಗೊಳಿಸಿದ್ದನ್ನು ಪ್ರಶಿಸಿ ಹಲವು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿದೆ.