ಕರ್ನಾಟಕ ಹೈಕೋರ್ಟ್‌ನ ಮೂವರು ಹೆಚ್ಚುವರಿ ನ್ಯಾಯಮೂರ್ತಿಗಳ ಸೇವೆ ಕಾಯಂಗೊಂಡ ಹಿನ್ನೆಲೆಯಲ್ಲಿ ರಾಜ್ಯಪಾಲರು ಅವರಿಗೆ ಶುಕ್ರವಾರ ಪ್ರಮಾಣ ವಚನ ಬೋಧಿಸಿದರು.
ರಾಜಭವನದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿಗಳಾದ ಮೊಹಮ್ಮದ್ ಗೌಸ್ ಶುಕುರೆ ಕಮಾಲ್, ರಾಜೇಂದ್ರ ಬಾದಾಮಿಕರ್ ಹಾಗೂ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಹೈಕೋರ್ಟ್ ನ್ಯಾಯಮೂರ್ತಿಗಳು ಉಪಸ್ಥಿತರಿದ್ದರು.
ಎಂ ಜೆ ಎಸ್ ಕಮಾಲ್ 2021ರ ಮಾರ್ಚ್ 17ರಂದು ಹಾಗೂ ರಾಜೇಂದ್ರ ಬಾದಾಮಿಕರ್ ಮತ್ತು ಖಾಜಿ ಜೈಬುನ್ನೀಸಾ ಮೊಹಿದ್ದೀನ್ 2021ರ ಮಾರ್ಚ್ 25ರಂದು ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದರು. ಸಿಜೆಐ ಯು ಯು ಲಲಿತ್ ನೇತೃತ್ವದಲ್ಲಿ ಸೆಪ್ಟೆಂಬರ್ 7ರಂದು ನಡೆದಿದ್ದ ಸುಪ್ರೀಂ ಕೋರ್ಟ್ ಕೊಲಿಜಿಯಂ ಸಭೆಯಲ್ಲಿಈ ಮೂವರ ಸೇವಾ ಕಾಯಮಾತಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಸೆಪ್ಟೆಂಬರ್ 23ರಂದು ಈ ಮೂವರು ನ್ಯಾಯಮೂರ್ತಿಗಳ ಸೇವೆ ಕಾಯಂಗೊಳಿಸಿ ಕಾನೂನು ಇಲಾಖೆ ಅಧಿಸೂಚನೆ ಹೊರಡಿಸಿತ್ತು.