ಸುದ್ದಿಗಳು

ಅವಧಿ ಮೀರಿದ ಸಾಲ ಮರುವಸೂಲಿ ಸಾಧ್ಯವೇ? ತ್ರಿಸದಸ್ಯ ಪೀಠಕ್ಕೆ ಪ್ರಕರಣ ವರ್ಗಾಯಿಸಿದ ಸುಪ್ರೀಂ ಕೋರ್ಟ್

Bar & Bench

ಅವಧಿ ಮೀರಿದ ಸಾಲ ಮರುವಸೂಲಿ (ಗಡುವಿನ ಮಿತಿ ಇರುವುದರಿಂದ ಈ ಸಾಲಗಳ ಕುರಿತು ಸಿವಿಲ್‌ ಮೊಕದ್ದಮೆ ಹೂಡಲಾಗುತ್ತಿಲ್ಲ) ಸಾಧ್ಯವೇ? ಸಾಲ ವಸೂಲಾತಿ ಕಾಯಿದೆಗಳನ್ನು ಬಳಸಿ ಇಂತಹ ಸಾಲ ವಸೂಲಿ ಮಾಡಬಹುದೇ ಎನ್ನುವ ಕುರಿತಂತೆ ತ್ರಿಸದಸ್ಯ ಪೀಠಕ್ಕೆ ಸುಪ್ರೀಂ ಕೋರ್ಟ್‌ ಬುಧವಾರ ಪ್ರಕರಣ ವರ್ಗಾಯಿಸಿದೆ [ಕೆಪಿ ಖೇಮ್ಕಾ ಮತ್ತಿತರರು ಹಾಗೂ ಹರಿಯಾಣ ಸರ್ಕಾರ ಕೈರಿಕಾ ಮತ್ತು ಮೂಲಸೌಕರ್ಯ ನಿಗಮ ನಿಯಮಿತ ಇನ್ನಿತರರ ನಡುವಣ ಪ್ರಕರಣ].

ನಿರ್ದಿಷ್ಟ ವರ್ಷಗಳು ಕಳೆದಿರುವುದರಿಂದ ಇನ್ನು ಮುಂದೆ ಕಾನೂನುಬದ್ಧವಾಗಿ ಮರಳಿ ಪಡೆಯಲಾಗದ ಎರವಲು ಪಡೆದ ಮತ್ತು ಮರುಪಾವತಿ ಮಾಡದ ಹಣವೇ ಅವಧಿ ಮೀರಿದ ಸಾಲ.

ಪ್ರಕರಣದ ಬಗ್ಗೆ ವ್ಯತಿರಿಕ್ತ ತೀರ್ಪುಗಳು ಹೊರಬಿದ್ದಿರುವುದರಿಂದ ಪ್ರಕರಣವನ್ನು ವಿಸೃತ ಪೀಠಕ್ಕೆ ವರ್ಗಾಯಿಸುವ ಅಗತ್ಯವಿದೆ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಹೇಳಿತು.

 ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ಏಪ್ರಿಲ್ 2015ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿವಿಧ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ವಿಚಾರ ತಿಳಿಸಿತು.

ಲಿಮಿಟೇಷನ್‌ ಕಾಯಿದೆ- 1963ರ ಅಡಿಯಲ್ಲಿ ಅವಧಿ ಮೀರಿದ ಸಾಲವನ್ನು ಹರಿಯಾಣ ಸಾರ್ವಜನಿಕ ಹಣ (ಬಾಕಿಗಳ ವಸೂಲಾತಿ) ಕಾಯಿದೆ-1979 ಅಥವಾ ರಾಜ್ಯ ಹಣಕಾಸು ನಿಗಮ ಕಾಯಿದೆ- 1951ನ್ನು ಆಶ್ರಯಿಸಿ ವಸೂಲಿ ಮಾಡುವಂತಿಲ್ಲ ಎಂಬ ವಾದವನ್ನು 2015 ರ ತೀರ್ಪಿನಲ್ಲಿ ಹೈಕೋರ್ಟ್‌ ತಿರಸ್ಕರಿಸಿತ್ತು.

ಲಿಮಿಟೇಷನ್‌ ಕಾಯಿದೆ ಪರಿಹಾರವನ್ನು ಮಾತ್ರ ನಿರ್ಬಂಧಿಸುತ್ತದೆಯೇ ವಿನಾ ಸಾಲವನ್ನು ಖುದ್ದು ರದ್ದುಪಡಿಸುವುದಿಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿತು. ಅಂದರೆ  ಸಾಲ ವಸೂಲಾತಿ ಕಾಯಿದೆಗಳ ಮೂಲಕ ಅವಧಿ ಮೀರಿದ ಸಾಲ ವಸೂಲಿ ಮಾಡಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

ಕೇರಳ ಕಂದಾಯ ವಸೂಲಾತಿ ಕಾಯಿದೆಯು ಸಾಲಗಾರರಿಗೆ ಬಾಕಿ ಮೊತ್ತವನ್ನು ಮರುಪಡೆಯಲು ಯಾವುದೇ ಹೆಚ್ಚುವರಿ ಹಕ್ಕನ್ನು ಸೃಷ್ಟಿಸಿಲ್ಲ ಎಂದು ತಿಳಿಸಿ ಕೇರಳ ಸರ್ಕಾರ ಮತ್ತಿತರರು ಹಾಗೂ ವಿ ಆರ್‌ ಕಲ್ಯಾಣಿಕುಟ್ಟಿ ಇನ್ನಿತರರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಮೇಲ್ಮನವಿದಾರರು ಅವಲಂಬಿಸಿದ್ದರು.

ಕೇರಳ ರೆವಿನ್ಯೂ ರಿಕವರಿ ಕಾಯಿದೆ ಅಡಿಯಲ್ಲಿ ಬಾಕಿ ಇರುವ ಮೊತ್ತವು ಕಾನೂನುಬದ್ಧವಾಗಿ ಮರುಪಾವತಿಸಬಹುದಾದ ಸಾಲ ಅಥವಾ ಅವಧಿ ಮೀರಿದ ಸಾಲಗಳನ್ನು ಮಾತ್ರ ಒಳಗೊಂಡಿರುತ್ತದೆ ಎಂದು ಆ ತೀರ್ಪಿನಲ್ಲಿ ವಿವರಿಸಲಾಗಿತ್ತು.

ಆದರೆ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಬಾಂಬೆ ಡೈಯಿಂಗ್ ಪ್ರಕರಣ ಮತ್ತು ತಿಲೋಕ್‌ಚಂದ್ ಮತ್ತು ಮೋತಿಚಂದ್ ಇನ್ನಿತರರು ಮತ್ತು ಎಚ್‌ಬಿ ಮುನ್ಷಿ ಮತ್ತಿತರರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪುಗಳನ್ನು ಅವಲಂಬಿಸಿ ಈ ಪ್ರಕರಣದ ತೀರ್ಪು ನೀಡಿತ್ತು.

ಈ ಹಿಂದೆ ನೀಡಿದ್ದ ಎರಡು ತೀರ್ಪುಗಳನ್ನು 1999ರ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಪೀಠದ ಮುಂದೆ ಇರಿಸಿರಲಿಲ್ಲ ಎಂದು ಹೈಕೋರ್ಟ್ ಗಮನಿಸಿದೆ.

ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ವಿಭಾಗೀಯ ಪೀಠ ಬುಧವಾರದ ಆದೇಶದಲ್ಲಿ ವಿವಿಧ ಪ್ರಶ್ನೆಗಳನ್ನು ರೂಪಿಸಿದ್ದು ಅವುಗಳ ಕುರಿತಂತೆ ಅಧಿಕೃತ ಘೋಷಣೆಗಾಗಿ ನ್ಯಾಯಾಲಯ  ತ್ರಿಸದಸ್ಯ ಪೀಠಕ್ಕೆ ಪ್ರಕರಣ ವರ್ಗಾಯಿಸಿದೆ.