<div class="paragraphs"><p>MP Ananthಕumar Hegde, MLA C T Ravi</p></div>

MP Ananthಕumar Hegde, MLA C T Ravi

 
ಸುದ್ದಿಗಳು

[ಟಿಪ್ಪು ಜಯಂತಿ ವಿವಾದ] ಸಂಸದ ಹೆಗಡೆ, ಶಾಸಕ ಸಿ ಟಿ ರವಿ ವಿರುದ್ಧ ದೂರು ದಾಖಲಿಕೆಗೆ ನಿರ್ದೇಶಿಸಲು ನ್ಯಾಯಾಲಯ ನಕಾರ

Siddesh M S

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವಿದ್ದಾಗ 2017ರಲ್ಲಿ ಟಿಪ್ಪು ಜಯಂತಿಗೆ ಸಂಬಂಧಿಸಿದಂತೆ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಮುದ್ರಿಸದಂತೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದ ಹಾಗೂ ಟಿಪ್ಪು ಸುಲ್ತಾನ್‌ ಬಗ್ಗೆ ವಿವಾದಾತ್ಮಕವಾಗಿ ಟ್ವೀಟ್‌ ಮಾಡಿದ್ದ ಸಂಸದ ಅನಂತ ಕುಮಾರ್‌ ಹೆಗಡೆ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವಿರುದ್ಧ ಪ್ರಕರಣ ದಾಖಲಿಸಲು ಆದೇಶಿಸುವಂತೆ ಕೋರಿದ್ದ ಖಾಸಗಿ ದೂರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈಚೆಗೆ ನಿರಾಕರಿಸಿದೆ.

ಬೆಂಗಳೂರಿನ ಇಂದಿರಾನಗರದ ನಿವಾಸಿಯಾದ ಎ ಆಲಂ ಪಾಷಾ ಎಂಬವರು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ್ದ 62ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಮತ್ತು ಹಾಲಿ ಹಾಗೂ ಮಾಜಿ ಸಂಸದರು, ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಪ್ರೀತ್‌ ಜೆ ಅವರು ದೂರನ್ನು ಅರ್ಜಿದಾರರಿಗೆ ಹಿಂದಿರುಗಿಸಲು ಆದೇಶಿಸಿದ್ದು, ಅರ್ಜಿದಾರರು ಸಿಆರ್‌ಪಿಸಿ ಸೆಕ್ಷನ್‌ 154(1) ಮತ್ತು (3) ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಅಫಿಡವಿಟ್‌ ಸಲ್ಲಿಸದಿದ್ದಲ್ಲಿ ಸಿಆರ್‌ಪಿಸಿ ಸೆಕ್ಷನ್‌ 156(3) ರ ಅಡಿ ಈ ನ್ಯಾಯಾಲಯವು ನಿರ್ದೇಶನ ನೀಡಲಾಗದು. ಹೀಗಾಗಿ, ಸರಿಯಾದ ರೀತಿಯಲ್ಲಿ ಆದೇಶ ಪಾಲಿಸಿದ ಬಳಿಕ ಅಗತ್ಯಬಿದ್ದಲ್ಲಿ ಈ ನ್ಯಾಯಾಲಯದ ಕದ ತಟ್ಟಬಹುದು ಎಂದು ಆದೇಶದಲ್ಲಿ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಘಟನೆಯ ಹಿನ್ನೆಲೆ

ರಾಜ್ಯ ಸರ್ಕಾರವು ಟಿಪ್ಪು ಜಯಂತಿ ಆಚರಿಸಲು ನಿರ್ಧರಿಸಿದ್ದಕ್ಕೆ ರಾಜ್ಯ ಬಿಜೆಪಿಯು 2017ರ ನವೆಂಬರ್‌ 10ರಂದು ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿತ್ತು. ರಾಜ್ಯ ಸರ್ಕಾರದ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಮುದ್ರಿಸದಂತೆ ಅನಂತ ಕುಮಾರ್‌ ಹೆಗಡೆ ಅವರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಅಲ್ಲದೇ, “ಸಾಮೂಹಿಕ ಕೊಲೆಗಾರ, ಅತ್ಯಾಚಾರಿಯನ್ನು ವಿಜೃಂಭವಿಸುವ ಅವಮಾನಕಾರಿ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಬೇಡಿ ಎಂದು ಕರ್ನಾಟಕ ಸರ್ಕಾರ ತಿಳಿಸಿದ್ದೇನೆ” ಎಂದು ಟ್ವೀಟ್‌ ಮಾಡಿದ್ದರು.

“ಸರ್ಕಾರವು ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಮುದ್ರಿಸಿದರೆ ಕಾರ್ಯಕ್ರಮಕ್ಕೆ ಹೋಗಿ ವೇದಿಕೆಯ ಮೇಲೆ ಟಿಪ್ಪು ವಿರುದ್ಧ ಘೋಷಣೆ ಹಾಕುತ್ತೇನೆ. ಸಿದ್ದರಾಮಯ್ಯಗೆ ತಾಕತ್ತು ಇದ್ದರೆ ನನ್ನನ್ನು ತಡೆಯಲಿ” ಎಂದು ಹೇಳಿದ್ದಾಗಿ ಪತ್ರಿಕೆಯೊಂದು ವರದಿ ಮಾಡಿತ್ತು.

“ಟಿಪ್ಪು ಜಯಂತಿ ನಡೆಸುವ ಮೂಲಕ ಹಿಂದೂಗಳಿಗೆ ಕಾಂಗ್ರೆಸ್‌ ಅವಮಾನಿಸುತ್ತದೆ” ಎಂದು ಬಿಜೆಪಿ ಶಾಸಕ ಸಿ ಟಿ ರವಿ ಹೇಳಿದ್ದನ್ನು ಪತ್ರಿಕೆಯೊಂದು ವರದಿ ಮಾಡಿತ್ತು. ಅಲ್ಲದೇ, “ಭಾರಿ ವಿರೋಧದ ನಡುವೆಯೂ ಕೋಮುವಾದಿ ಕಾಂಗ್ರೆಸ್‌ ಮತ್ತು ದುರಹಂಕಾರಿ ಸಿದ್ದರಾಮಯ್ಯ ಅವರು ದೇಶದ್ರೋಹಿ ಟಿಪ್ಪು ಜಯಂತಿ ನಡೆಸುವ ಮೂಲಕ ಹಿಂದೂಗಳಿಗೆ ಅವಮಾನ ಮಾಡುತ್ತಿದ್ದಾರೆ. ಇದು ಹಿಂದೂ ವಿರೋಧಿಗಳನ್ನು ಓಲೈಸುವ ನೀತಿಯಾಗಿದೆ” ಎಂದು ಬಿಜೆಪಿ ವಕ್ತಾರ ಸಿ ಟಿ ರವಿ ಟ್ವೀಟ್‌ ಮಾಡಿದ್ದರು. ಉಭಯ ನಾಯಕರ ಈ ಹೇಳಿಕೆಗಳು ಆಧಾರರಹಿತ, ಪ್ರಚೋದನಾಕಾರಿ, ದೋಷಪೂರಿತ ಹೇಳಿಕೆಗಳಾಗಿದ್ದು, ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 153-ಎ, 153-ಬಿ, 295-ಎ ಮತ್ತು 505(2) ಅಡಿ ಪ್ರಕರಣ ದಾಖಲಿಸಬೇಕು ಎಂದು ಇಂದಿರಾನಗರ ಪೊಲೀಸರಿಗೆ 2017ರ ಅಕ್ಟೋಬರ್‌ 22ರಂದು ಪಾಷಾ ಅವರು ದೂರು ನೀಡಿದ್ದರು.

ಠಾಣಾಧಿಕಾರಿ ದೂರು ಸ್ವೀಕರಿಸಿದ ಹಿನ್ನೆಲೆಯಲ್ಲಿ ಅರ್ಜಿದಾರ ಪಾಷಾ ಅವರು ಹಲಸೂರು ಸಹಾಯಕ ಪೊಲೀಸ್‌ ಆಯುಕ್ತ (ಎಸಿಪಿ), ಉಪ ಪೊಲೀಸ್‌ ಆಯುಕ್ತರನ್ನು (ಡಿಸಿಪಿ) ಸಂಪರ್ಕಿಸಿ ದೂರು ನೀಡಲು ಯತ್ನಿಸಿದ್ದರು. ಅವರಾರೂ ದೂರು ಸ್ವೀಕರಿಸಿದ ಹಿನ್ನೆಲೆಯಲ್ಲಿ ಸಿಆರ್‌ಪಿಸಿ ಸೆಕ್ಷನ್‌ 156(3) ಅಡಿ ಪ್ರಕರಣ ದಾಖಲಿಸಲು ಇಂದಿರಾನಗರ ಠಾಣಾಧಿಕಾರಿಗೆ ಆದೇಶಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.

“ದೂರು ಮತ್ತು ಆರೋಪಿಗಳ ಹೇಳಿಕೆಗಳನ್ನು ಒಳಗೊಂಡ ಪತ್ರಿಕೆಯ ತುಣುಕುಗಳ ಜೆರಾಕ್ಸ್‌ ಪ್ರತಿಯನ್ನು ಹೊರತುಪಡಿಸಿ ಅರ್ಜಿದಾರರು ಇಂದಿರಾನಗರ ಠಾಣಾಧಿಕಾರಿ ಮತ್ತು ಎಸಿಪಿಗೆ ದೂರು ನೀಡಿದ್ದಕ್ಕೆ ಸಂಬಂಧಿಸಿದ ಸ್ವೀಕೃತಿ ದಾಖಲೆಯನ್ನು ಸಲ್ಲಿಸಿಲ್ಲ. ಅಧಿಕಾರಿಗಳು ದೂರು ಸ್ವೀಕರಿಸದಿದ್ದಾಗ ಅದನ್ನು ಅಂಚೆ ಮೂಲಕವಾದರೂ ಕಳುಹಿಸಿಕೊಡಬೇಕಿತ್ತು. ಅದನ್ನೂ ದೂರುದಾರರು ಮಾಡಿಲ್ಲ. ಸಿಆರ್‌ಪಿಸಿ ಸೆಕ್ಷನ್‌ 154 ಅನುಪಾಲನೆಗೆ ಸಂಬಂಧಿಸಿದಂತೆ ಅರ್ಜಿದಾರರು ಯಾವುದೇ ದಾಖಲೆ ಸಲ್ಲಿಸಿಲ್ಲ. ಹೀಗಾಗಿ, ಸಿಆರ್‌ಪಿಸಿ ಸೆಕ್ಷನ್‌ 156(3) ಅಡಿ ಈ ನ್ಯಾಯಾಲಯವು ಯಾಂತ್ರಿಕವಾಗಿ ಅಧಿಕಾರ ಚಲಾಯಿಸಲಾಗದು” ಎಂದು ಪೀಠವು ಹೇಳಿದ್ದು, ದೂರನ್ನು ಅರ್ಜಿದಾರರಿಗೆ ವಾಪಸ್‌ ಕಳುಹಿಸುವಂತೆ ಆದೇಶ ಮಾಡಿದೆ.

A Alam Pasha versus Ananth Kumar Hegde.pdf
Preview