Madras High Court and PM ModiPM Modi (Facebook)  PM Modi (Facebook)
ಸುದ್ದಿಗಳು

ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನದ ಮಾಧ್ಯಮ ಪ್ರಸಾರವು ನೀತಿ ಸಂಹಿತೆ ಉಲ್ಲಂಘನೆ: ನ್ಯಾಯಾಲಯದ ಮೆಟ್ಟಿಲೇರಿದ ಕಾಂಗ್ರೆಸ್

Bar & Bench

ವ್ಯಾಪಕ ಪ್ರಚಾರಪಡೆದಿರುವ ತಮಿಳುನಾಡಿನ ಕನ್ಯಾಕುಮಾರಿಯ ವಿವೇಕಾನಂದ ಶಿಲಾ ಸ್ಮಾರಕದಲ್ಲಿನ ಪ್ರಧಾನಿ ನರೇಂದ್ರ ಮೋದಿಯವರ ಧ್ಯಾನ ಕಾರ್ಯಕ್ರಮವು ಬಿಜೆಪಿ ಪಾಲಿಗೆ ಮತ ಸೆಳೆಯುವ ಸೋಗಿನ ಯತ್ನವಾಗಿದೆ ಎಂದು ದೂರಿ ತಮಿಳುನಾಡು ಕಾಂಗ್ರೆಸ್ ಸಮಿತಿ (ಟಿಎನ್‌ಸಿಸಿ) ಮದ್ರಾಸ್ ಹೈಕೋರ್ಟ್‌ ಮೆಟ್ಟಿಲೇರಿದೆ.

ಮೋದಿ ತಮ್ಮ ಅಧಿಕೃತ ಸ್ಥಾನ ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಎ ಪಿ ಸೂರ್ಯಪ್ರಕಾಶ್ ಸೇರಿದಂತೆ ಟಿಎನ್‌ಸಿಸಿ ಸದಸ್ಯರೂ ಆಗಿರುವ ಆರು ಮಂದಿ ವಕೀಲರು ಕೋರಿದ್ದಾರೆ.

ಮೇ 30 ರಂದು ಪ್ರಾರಂಭವಾದ ಮೋದಿಯವರ ಮೂರು ದಿನಗಳ ದೀರ್ಘ ಧ್ಯಾನ ಕಾರ್ಯಕ್ರಮವನ್ನು ಟಿವಿಯಲ್ಲಿ  ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದ್ದು ಇದು ವಿರೋಧ ಪಕ್ಷಗಳಿಗೆ ಅನನುಕೂಲಕರವಾಗಿ ಪರಿಣಮಿಸಿದ್ದು ನೀತಿ ಸಂಹಿತೆಯನ್ನು ಉಲ್ಲಂಘನೆಯಾಗಿದೆ ಎಂದು ಮನವಿ ಮಾಡಲಾಗಿದೆ. ಅರ್ಜಿಯನ್ನು ಹೈಕೋರ್ಟ್‌ ರಿಜಿಸ್ಟ್ರಿ ಇನ್ನಷ್ಟೇ  ಪರಿಗಣಿಸಬೇಕಿದೆ.

7ನೇ ಹಂತದ ಮತದಾನ ಇಂದು (ಜೂನ್ 1, 2024 ರಂದು) ನಡೆಯುತ್ತಿದೆ. ಬಹಿರಂಗ ಪ್ರಚಾರದ ಅವಧಿ ಈಗಾಗಲೇ ಕೊನೆಗೊಂಡಿದ್ದು ಯಾವುದೇ ಬಗೆಯ ಪ್ರಚಾರವನ್ನು 30 ಮೇ 2024 ರ ಸಂಜೆಯಿಂದ ನಡೆಸುವಂತಿಲ್ಲ. ಪ್ರಧಾನಿ ಸೇರಿದಂತೆ ಯಾವುದೇ ರಾಜಕೀಯ ಪಕ್ಷ ಯಾವುದೇ ರೂಪದಲ್ಲಿ ಪ್ರಚಾರ ಮಾಡಲು ಅವಕಾಶವಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಏಳನೇ ಹಂತದ ಮತದಾನದ ವೇಳೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಸಲುವಾಗಿ ಅಧಿಕೃತ ಸ್ಥಾನದ ದುರ್ಬಳಕೆ ತಡೆಯಲು ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಭಾರತದ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವುದು ಸೂಕ್ತ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಪ್ರಧಾನಿ ಭೇಟಿಯ ಸಂದರ್ಭದಲ್ಲಿ ವಿವೇಕಾನಂದ ಶಿಲಾ ಸ್ಮಾರಕಕ್ಕೆ ಪ್ರವಾಸಿಗರು ಮತ್ತು ಹಿಂದೂ ಭಕ್ತರು ಭೇಟಿ ನೀಡುವುದನ್ನು ತಡೆಯದಂತೆ ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಮಧ್ಯಂತರ ನಿರ್ದೇಶನ ನೀಡಬೇಕೆಂದೂ ಮನವಿಯಲ್ಲಿ ಕೋರಲಾಗಿದೆ.