ಸುದ್ದಿಗಳು

ಆನ್‌ಲೈನ್‌ ಜೂಜಾಟ ನಿಷೇಧ ಕಾನೂನು ಜಾರಿಗೆ ತಮಿಳುನಾಡು ಸರ್ಕಾರದ ಚಿಂತನೆ; 'ಹೀರೊ' ಆರಾಧನೆಗೆ ಮದ್ರಾಸ್ ಹೈಕೋರ್ಟ್ ಕಳವಳ

Bar & Bench

ರಾಜ್ಯದಾದ್ಯಂತ ಹಲವು ಆತ್ಮಹತ್ಯೆಗಳು ವರದಿಯಾದ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರವು ಆನ್‌ಲೈನ್‌ ಜೂಜಾಟವನ್ನು ನಿಷೇಧಿಸುವ ಅಥವಾ ಅವುಗಳ ನಿಯಂತ್ರಣ ಹೇರುವ ಸಂಬಂಧ ಕಾನೂನು ಜಾರಿಗೆ ತರುವ ಆಲೋಚನೆಯಲ್ಲಿದೆ ಎಂದು ಬುಧವಾರ ಮದ್ರಾಸ್‌ ಹೈಕೋರ್ಟ್‌ಗೆ‌ ಮಾಹಿತಿ ನೀಡಿದೆ (ಎಸ್‌ ಮುತ್ತು ಕುಮಾರ್‌ ವರ್ಸಸ್‌ ಭಾರತ ಸರ್ಕಾರ ಮತ್ತು ಇತರರು).

ಆನ್‌ಲೈನ್‌ ರಮ್ಮಿ ವಿರುದ್ಧ ದಾಖಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎನ್‌ ಕಿರುಬಾಕರನ್‌ ಮತ್ತು ಬಿ ಪುಗಳೇಂದಿ ಅವರಿದ್ದ ವಿಭಾಗೀಯ ಪೀಠವು ನಡೆಸಿತು. ಆನ್‌ಲೈನ್‌ ಜೂಟಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಅವರು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎಂ ಶ್ರೀಚರಣ್‌ ರಂಗರಾಜನ್‌ ಅವರು ಹೇಳಿದರು.

“ಕಠಿಣ ಕ್ರಮಕೈಗೊಳ್ಳುವ ಆಲೋಚನೆಯನ್ನು ಸರ್ಕಾರ ನಡೆಸುತ್ತಿದೆ. ಆನ್‌ಲೈನ್‌ ಜೂಜಾಟದ ಮೇಲೆ ಸಂಪೂರ್ಣ ನಿಷೇಧ ಹೇರುವ ಸಂಬಂಧ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ” ಎಂದು ರಂಗರಾಜನ್‌ ಹೇಳಿದ್ದಾರೆ.

ಸದನ ನಡೆಯುತ್ತಿಲ್ಲವಾದ್ದರಿಂದ ಸುಗ್ರೀವಾಜ್ಞೆಯ ಮೂಲಕ ನಿರ್ದಿಷ್ಟ ಕಾನೂನು ಜಾರಿಗೊಳಿಸುವ ಸಂಬಂಧದ ಪ್ರಕ್ರಿಯೆಗಳಲ್ಲಿ ಸರ್ಕಾರ ತೊಡಗಿದೆ. ಈ ಸಂಬಂಧ ತಮ್ಮ ಹೇಳಿಕೆಯನ್ನು ಪೀಠವು ದಾಖಲಿಸಿಕೊಳ್ಳಬಹುದು ಎಂದು ರಂಗರಾಜನ್‌ ತಿಳಿಸಿದರು.

“ಮುಖ್ಯಮಂತ್ರಿಯ ಹೇಳಿಕೆಯನ್ನು ನಾವು ಪ್ರಶಂಸಿಸುತ್ತೇವೆ. ಆದರೆ, ಅದನ್ನು ಜಾರಿಗೊಳಿಸಲು ಇನ್ನೆಷ್ಟು ಸಮಯ ಬೇಕು? ಪ್ರತಿದಿನವೂ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಯಾವ ಕ್ರಮಗಳನ್ನು ಕೈಗೊಳ್ಳಲು ಆಲೋಚಿಸಲಾಗಿದೆ ಎನ್ನುವ ಕುರಿತು ಮೆಮೊವನ್ನು ನೀವೇಕೆ ಸಲ್ಲಿಸಬಾರದು? ನಮಗೆ ಬದ್ಧತೆ ಕಾಣಬೇಕು. ಮುಖ್ಯಮಂತ್ರಿ ಹೇಳಿದ ಮೇಲೆ ಅದು ಅಂತಿಮ. ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಯಾವಾಗ?” ಎಂದು ನ್ಯಾ. ಕಿರುಬಾಕರನ್‌ ಪ್ರಶ್ನಿಸಿದರು.

“… ಇಂಥ ವಿಚಾರಗಳ ರಾಯಭಾರಿಗಳಾಗಿ ಸೆಲೆಬ್ರೆಟಿಗಳು ಗುರುತಿಸಿಕೊಳ್ಳುತ್ತಾರೆ. ಕ್ರಿಕೆಟಿಗೊಬ್ಬರಿಗೆ ಅಸಂಖ್ಯಾತ ಬೆಂಬಲಿಗರಿದ್ದು, ಅವರು ಜಾಹೀರಾತಿನಲ್ಲಿ ಕಾಣಿಸಿಕೊಂಡರೆ ಹತ್ತು ಸಾವಿರ ಮಂದಿ ಅದನ್ನು ಅನುಸರಿಸುತ್ತಾರೆ ಎಂದು ನಮಗೆ ಹೇಳಲಾಗಿದೆ. ನಮ್ಮ ದೇಶದಲ್ಲಿ ಹೀರೊ ಆರಾಧನೆಯಿದೆ… ತಮಿಳುನಾಡಿನಲ್ಲಂತೂ ಸಿನಿಮಾ ಅಂದರೆ ಮುಗಿಯಿತು.. ಒಂದೇ ಒಂದು ಸಿನಿಮಾದಲ್ಲಿ ನಟಿಸಿರುವ ವ್ಯಕ್ತಿ ಕೂಡ ಇಂಥದನ್ನು ಅನುಮೋದಿಸಿದರೂ ತಕ್ಷಣವೇ ಅವರು ತಮಿಳುನಾಡಿನ ಭವಿಷ್ಯವಾಗಿ ಬಿಡುತ್ತಾರೆ” ಎಂದು ಪೀಠವು ವಿಷಾದಿಸಿತು.

ಆನ್‌ಲೈನ್‌ ಜೂಜಾಟಗಳನ್ನು ನಿಷೇಧಿಸುವುದಕ್ಕೂ ಮುನ್ನ ಶಾಸನಬದ್ಧವಾದ ಆನ್‌ಲೈನ್‌ ಜೂಜಾಟ ಕಂಪೆನಿಗಳ ಮನವಿಗಳನ್ನೂ ಆಲಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿರುವುದಾಗಿ ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಆನ್‌ಲೈನ್‌ ಜೂಜಾಟ ವೇದಿಕೆಯನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಪಿ ಎಸ್‌ ರಮಣ ಪೀಠಕ್ಕೆ ವಿವರಿಸಿದರು.

ಇಂಥ ಪ್ರಕರಣಗಳಲ್ಲಿ ಭಾರತವನ್ನು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಕೆ ಮಾಡಬಾರದು. ಇಂಥ ವಿಚಾರಗಳ ಕುರಿತು ಜನರಿಗೆ ಹೆಚ್ಚಿನ ಅರಿವಿಲ್ಲ ಎಂದು ಈ ವೇಳೆ ಪೀಠ ಹೇಳಿತು.