Sadhguru, Supreme Court 
ಸುದ್ದಿಗಳು

ಇಶಾ ಫೌಂಡೇಷನ್‌ ವಿರುದ್ಧದ ಶೋಕಾಸ್‌ ನೋಟಿಸ್‌: ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ

ಇಶಾ ಫೌಂಡೇಶನ್ ಶಿಕ್ಷಣ ಸಂಸ್ಥೆಯಾಗಿದ್ದು, ಪರಿಸರದ ನಿಯಮಗಳಿಂದ ಕೆಲವು ಸಡಿಲಿಕೆಗಳನ್ನು ಪಡೆಯಲು ಅರ್ಹತೆ ಹೊಂದಿದೆ ಎನ್ನುವ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಟಿಎನ್‌ಪಿಸಿಬಿ ಪ್ರಶ್ನಿಸಿದೆ.

Bar & Bench

ಯೋಗ ಗುರು ಜಗ್ಗಿ ವಾಸುದೇವ್ ಅವರು ನಡೆಸುತ್ತಿರುವ ಇಶಾ ಫೌಂಡೇಶನ್‌ನ ಕೊಯಮತ್ತೂರು ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ನಿರ್ಮಾಣಗಳ ಕುರಿತು ನೀಡಲಾದ ಶೋಕಾಸ್ ನೋಟಿಸ್ ಅನ್ನು ರದ್ದುಗೊಳಿಸಿರುವ 2022 ರ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ (ಟಿಎನ್‌ಪಿಸಿಬಿ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ [ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಇಶಾ ಫೌಂಡೇಶನ್].

ಕೊಯಮತ್ತೂರಿನಲ್ಲಿ 2006 ರಿಂದ 2014 ರ ನಡುವೆ ಅನೇಕ ಪರಿಸರ ಅನುಮತಿಗಳನ್ನು ಪಡೆಯದೆ ನಿರ್ಮಾಣ ಚಟುವಟಿಕೆಗಳನ್ನು ಕೈಗೊಂಡಿದ್ದಕ್ಕಾಗಿ 2021 ರಲ್ಲಿ ಇಶಾ ಫೌಂಡೇಶನ್‌ಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು.

ಮದ್ರಾಸ್ ಹೈಕೋರ್ಟ್ ತನ್ನ ಡಿಸೆಂಬರ್ 2022 ರ ತೀರ್ಪಿನಲ್ಲಿ, ಇಶಾ ಫೌಂಡೇಶನ್ ಸಾಮೂಹಿಕ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದು, ಯೋಗ ಕೇಂದ್ರವನ್ನು ನಡೆಸುವುದರಿಂದ, ಅದನ್ನು ಶಿಕ್ಷಣ ಸಂಸ್ಥೆ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ, ನಿರ್ಮಾಣ ಚಟುವಟಿಕೆಗಳಿಗೆ ಪೂರ್ವಭಾವಿ ಪರಿಸರ ಅನುಮತಿಯನ್ನು ಕೋರುವ ನಿಯಮಾವಳಿಗಳಿಗೆ ಕೇಂದ್ರವು ಸರ್ಕಾರವು ನೀಡಿರುವ ವಿನಾಯತಿಗೆ ಅರ್ಹವಾಗಿದೆ ಎಂದು ಹೇಳಿತ್ತು.

ಈ ತೀರ್ಪಿನ ವಿರುದ್ಧ ಟಿಎನ್‌ಪಿಸಿಬಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್‌ ಕೆ ಸಿಂಗ್ ಅವರ ಪೀಠ ಇಂದು ಸಂಕ್ಷಿಪ್ತವಾಗಿ ವಿಚಾರಣೆ ನಡೆಸಿತು.

ವಿಚಾರಣೆಯ ಸಂದರ್ಭದಲ್ಲಿ, ಕೆಲವು ಯೋಜನೆಗಳಿಗೆ ಪರಿಸರ ಅನುಮತಿಗಳನ್ನು ಸಡಿಲಿಸುವ ಕೇಂದ್ರದ ಅಧಿಸೂಚನೆಗೆ ತಡೆ ನೀಡುವ ಕೇರಳ ಹೈಕೋರ್ಟ್‌ನ ತೀರ್ಪಿಗೆ ತಾನು ಬದ್ಧವಾಗಿಲ್ಲ ಎಂಬ ಮದ್ರಾಸ್ ಹೈಕೋರ್ಟ್‌ನ ದೃಷ್ಟಿಕೋನದಲ್ಲಿ ಯಾವುದೇ ತಪ್ಪಿಲ್ಲ ಎಂದು ಪೀಠವು ಮೌಖಿಕವಾಗಿ ಹೇಳಿತು.

"ಕೇರಳ ಹೈಕೋರ್ಟ್ ನೀಡಿರುವ ತಡೆ ಮತ್ತೊಂದು ನ್ಯಾಯಾಲಯದ ಅಧಿಕಾರವನ್ನು ಹೇಗೆ ಮೊಟಕುಗೊಳಿಸುತ್ತದೆ? ಮದ್ರಾಸ್ ಹೈಕೋರ್ಟ್ ಸರಿಯಾಗಿದೆ" ಎಂದು ಕೋರ್ಟ್ ಸ್ಪಷ್ಟಪಡಿಸಿತು.

ಈ ವೇಳೆ ಟಿಎನ್‌ಸಿಪಿಬಿಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ವಿ ಗಿರಿ ಅವರು "ನಾವು ಮತ್ತೊಂದು ಉತ್ತಮ ಅಫಿಡವಿಟ್ ಸಲ್ಲಿಸುತ್ತೇವೆ" ಎಂದು ಉತ್ತರಿಸಿದರು.

ಈ ವೇಳೆ ಕಿವಿಹಿಂಡಿದ ನ್ಯಾಯಮೂರ್ತಿ ಕಾಂತ್‌ ಅವರು, "ನಾವು ಈ ರೀತಿಯಲ್ಲಿ ಉತ್ತಮ ಅಫಿಡವಿಟ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದರೆ ಹಾಗೂ ಮೇಲ್ಮನವಿ ಸಲ್ಲಿಸಲು ಆಗಿರುವ 633 ಪ್ಲಸ್ ದಿನಗಳ ವಿಳಂಬವನ್ನು ಸ್ವೀಕರಿಸಿದರೆ, ಬಡ ದಾವೆದಾರರು ಇಂತಹ ಸೌಲಭ್ಯದಿಂದ ಏಕೆ ವಂಚಿತರಾಗಬೇಕು? ಶ್ರೀಮಂತರ ವ್ಯಾಜ್ಯಗಳನ್ನು ಮಾತ್ರ ಏಕೆ ಕೇಳಬೇಕು, ಬಡ ದಾವೆದಾರರು ಎಲ್ಲಿಗೆ ಹೋಗಬೇಕು? ಎನ್ನುವ ಪ್ರಶ್ನೆಗಳು ಏಳುತ್ತವೆ. ರಾಜ್ಯವು ಇಷ್ಟು ತಡವಾಗಿ ಮೆಟ್ಟಿಲೇರಿದಾಗಲೂ ನಾವು ಸಮ್ಮತಿಸಿಬಿಡುತ್ತೇವೆ," ಎಂದು ಪರಿಸ್ಥಿತಿಗೆ ಕನ್ನಡಿ ಹಿಡಿದರು.

ಈ ಹಂತದಲ್ಲಿ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಪಿ ಎಸ್ ರಾಮನ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ವಿಳಂಬ ಉದ್ದೇಶಪೂರ್ವಕವಾಗಿಲ್ಲ ಎಂದು ಪೀಠಕ್ಕೆ ಭರವಸೆ ನೀಡಿದರು. "ವಿವಿಧ ಇಲಾಖೆಗಳ ನಡುವೆ ಈ ಕುರಿತ ಒಂದಿಲ್ಲೊಂದು ಸಂವಹನ ನಡೆಯುತ್ತಲೇ ಇತ್ತು. ಅದು ನನ್ನ ಗಮನಕ್ಕೆ ಬಂದಾಗ, ನಾನು ಅದನ್ನು ತಕ್ಷಣವೇ ಅನುಮತಿಸಿದ್ದೇನೆ" ಎಂದು ಹೇಳಿದರು.

ಈ ವೇಳೆ ನ್ಯಾಯಮೂರ್ತಿ ಕಾಂತ್ ಅವರು ಹರಿಯಾಣ ರಾಜ್ಯದ ಅಡ್ವೊಕೇಟ್ ಜನರಲ್ (ಎಜಿ) ಆಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ತಾವು ಸಹ ಇದೇ ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದನ್ನು ನೆನೆದರು.

ಅಂತಿಮವಾಗಿ ಹಿರಿಯ ವಕೀಲ ಗಿರಿ ಅವರು ಕೋರಿದ ಕಾಲಾವಕಾಶ ನೀಡಲು ಸಮ್ಮತಿಸಿದ ನ್ಯಾಯಾಲಯವು ಪ್ರಕರಣವನ್ನು ಫೆಬ್ರವರಿ 28ಕ್ಕೆ ಮುಂದೂಡಿತು.