ಉಡುಪಿಯ ನೇತ್ರ ಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಗುಪ್ತ ವಿಡಿಯೋ ಚಿತ್ರೀಕರಣ ನಡೆಸಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿತ ವಿದ್ಯಾರ್ಥಿನಿಯರಿಗೆ ಉಡುಪಿಯ ನ್ಯಾಯಾಲಯವು ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆಯನ್ನು ಉಡುಪಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶ್ಯಾಮ್ ಪ್ರಕಾಶ್ ಅವರು ನಡೆಸಿದರು.
ಅರ್ಜಿದಾರ ವಿದ್ಯಾರ್ಥಿನಿಯರನ್ನು ಪ್ರತಿನಿಧಿಸಿದ್ದ ವಕೀಲ ಅಸದುಲ್ಲಾ ಕಟಪಾಡಿ ಅವರು "ರಾಜಕೀಯ ಪ್ರೇರಿತ ಕಾರಣಕ್ಕಾಗಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ. ಬಾದಿತರಾರೂ ದೂರು ನೀಡಿಲ್ಲ. ಆರೋಪಿಗಳು ಅಮಾಯಕರಾಗಿದ್ದು, ಅರ್ನೇಶ್ ಕುಮಾರ್ ವರ್ಸಸ್ ಬಿಹಾರ ರಾಜ್ಯ ಪ್ರಕರಣದ ಅನ್ವಯ ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಬೇಕು" ಎಂದು ಕೋರಿದರು.
ಈ ವಾದ ಪುರಸ್ಕರಿಸಿದ ನ್ಯಾಯಾಲಯವು ತಲಾ 20 ಸಾವಿರ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಸಲ್ಲಿಸಬೇಕು. ತನಿಖಾಧಿಕಾರಿಗಳಿಗೆ ಸಹಕರಿಸಬೇಕು. ವಿಚಾರಣೆ ದಿನ ನ್ಯಾಯಾಲಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕು. ಸಾಕ್ಷಿಗಳಿಗೆ ಬೆದರಿಕೆ ಒಡ್ಡಬಾರದು ಎಂಬ ಷರತ್ತುಗಳನ್ನು ವಿಧಿಸಿ, ಜಾಮೀನು ಮಂಜೂರು ಮಾಡಿದೆ.
ಇದಕ್ಕೂ ಮುನ್ನ, ಮೂವರು ವಿದ್ಯಾರ್ಥಿನಿಯರು ಮತ್ತು ಕಾಲೇಜಿನ ಸಿಬ್ಬಂದಿ ಒಬ್ಬರು ಸೇರಿ ನಾಲ್ವರ ವಿರುದ್ಧ ಮಲ್ಪೆ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 509, 204, 175 ಜೊತೆಗೆ 34 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66 (ಇ) ಅಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿತ ಮೂವರು ವಿದ್ಯಾರ್ಥಿನಿಯರು ಇಂದು ನ್ಯಾಯಾಲಯಕ್ಕೆ ಶರಣಾಗಿದ್ದರು. ಮಧ್ಯಾಹ್ನ ಜಾಮೀನು ಅರ್ಜಿ ವಿಚಾರಣೆ ನಡೆದು, ಜಾಮೀನು ಮಂಜೂರಾಗಿದೆ.