ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು, ಬೆಂಗಳೂರು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಕಾನೂನು ಅಕಾಡೆಮಿ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ವರ್ಚುವಲ್ ಅಣಕು ನ್ಯಾಯಾಲಯ ಸ್ಪರ್ಧೆ ಏರ್ಪಡಿಸಿದೆ.
ನಗರದ ಕ್ರೈಸ್ಟ್ ವಿಶ್ವವಿದ್ಯಾಲಯ ಕಾನೂನು ಶಾಲೆ ಕಾರ್ಯಕ್ರಮಕ್ಕೆ ತಾಂತ್ರಿಕ ನೆರವು ನೀಡಿದ್ದು ಕೆಎಸ್‌ಎಲ್‌ಎಸ್‌ಎ ಅಧ್ಯಕ್ಷರಾಗಿರುವ ನ್ಯಾಯಮೂರ್ತಿ ಬಿ ವೀರಪ್ಪ ಅವರು ವರ್ಚುವಲ್ ವಿಧಾನದಲ್ಲಿ ನಾಳೆ (ನವೆಂಬರ್ 8) ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೆಎಎಸ್‌ಬಿಸಿ ಅಧ್ಯಕ್ಷರಾದ ಎಲ್ ಶ್ರೀನಿವಾಸಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.
ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ ವೆಂಕಟೇಶ್ ನಾಯಕ್, ಕ್ರೈಸ್ಟ್ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಫಾದರ್ ವಿ ಎಂ ಅಬ್ರಾಹಂ, ಹಾಗೂ ಕಾನೂನು ಶಾಲೆಯ ನಿರ್ದೇಶಕ ಡಾ. ಫಾದರ್ ಬೆನ್ನಿ ಥಾಮಸ್ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಎನ್‌ಎಸ್‌ಎಲ್‌ಎ ಅಖಿಲ ಭಾರತ ಕಾನೂನು ಜಾಗೃತಿ ಮತ್ತು ಅಭಿಯಾನದ ಭಾಗವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ನಾಳೆ ಪೂರ್ವಭಾವಿ ಸ್ಪರ್ಧೆಗಳು ನಡೆಯಲಿವೆ. ನವೆಂಬರ್ 9ರಂದು ಸೆಮಿ ಫೈನಲ್ ಹಾಗೂ ಫೈನಲ್ ಸ್ಪರ್ಧೆಗಳು ನಡೆಯಲಿವೆ.
ಸ್ಪರ್ಧೆಗೆ ಸಂಬಂಧಿಸಿದಂತೆ ಕಾಲ್ಪನಿಕ ಪ್ರಕರಣವೊಂದನ್ನು ನೀಡಲಾಗಿದೆ. ಅದನ್ನು ಅಧ್ಯಯನ ಮಾಡಿ ಅಣಕು ನ್ಯಾಯಾಲಯ ಕಲಾಪದಲ್ಲಿ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಸ್ಪರ್ಧೆ ಇಂಗ್ಲಿಷ್‌ನಲ್ಲಿ ಮಾತ್ರ ನಡೆಯಲಿದೆ. ಎಲ್ಲಾ ಕಾನೂನು ಕಾಲೇಜುಗಳು, ವಕೀಲರ ಪರಿಷತ್ತಿನಿಂದ ಮಾನ್ಯತೆ ಪಡೆದ ದೇಶದ ಎಲ್ಲಾ ಕಾನೂನು ಕಾಲೇಜುಗಳು/ಸಂಸ್ಥೆಗಳು/ವಿಶ್ವವಿದ್ಯಾಲಯಗಳು ಇದರಲ್ಲಿ ಭಾಗವಹಿಸಬಹುದಾಗಿದೆ. ಕಾನೂನಿನಲ್ಲಿ ಮೂರು ವರ್ಷ ಅಥವಾ ಐದು ವರ್ಷಗಳ ಪದವಿ ಪಡೆದವರು ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ನವೆಂಬರ್ 6ರಂದು ಸ್ಪರ್ಧೆಯ ಆನ್‌ಲೈನ್ ನೋಂದಣಿ ಕೊನೆಗೊಂಡಿದೆ.
ಸ್ಪರ್ಧೆಯ ವಿವರಗಳನ್ನು ಇಲ್ಲಿ ಓದಿ: