ಸುದ್ದಿಗಳು

ಜಿಬಿಎ ಐದು ಪಾಲಿಕೆಗಳಿಗೆ ಚುನಾವಣೆ ನಡೆಸಲು ಆ.31ರ ಗಡುವು; ರಾಜ್ಯ ಸರ್ಕಾರದಿಂದ ವಿಳಂಬಗೊಳಿಸುವ ತಂತ್ರ: ಸುಪ್ರೀಂ ಕಿಡಿ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಚುನಾವಣೆ ನಡೆಸಲು ಡಿಸೆಂಬರ್‌ವರೆಗೆ ಕಾಲಾವಕಾಶ ಕೋರಿದ್ದಾರೆ ಎಂದು ಪೀಠದ ಗಮನಸೆಳೆದ ಆಯೋಗ. ಎಲ್ಲಾ ಮನವಿಗಳನ್ನು ವಜಾಗೊಳಿಸಲಾಗಿದೆ ಎಂದ ಸರ್ವೋಚ್ಚ ನ್ಯಾಯಾಲಯ.

Siddesh M S

“ರಾಜ್ಯ ಸರ್ಕಾರವು ಚುನಾವಣೆ ವಿಳಂಬಗೊಳಿಸಲು ಯತ್ನಿಸುತ್ತಿದೆ” ಎಂದು ಕಟುವಾಗಿ ನುಡಿದಿರುವ ಸುಪ್ರೀಂ ಕೋರ್ಟ್‌, ಆಗಸ್ಟ್‌ 31ರೊಳಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಡಿ ಬರುವ ಐದೂ ಪಾಲಿಕೆಗಳಿಗೆ ಚುನಾವಣೆ ನಡೆಸುವಂತೆ ಬುಧವಾರ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಡಿ ಬರುವ ಐದು ಪಾಲಿಕೆಗಳಿಗೆ ಚುನಾವಣೆ ಮುಂದೂಡಿಕೆ ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಮಧ್ಯಂತರ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ನ್ಯಾಯಮೂರ್ತಿಗಳಾದ ಜೋಯಮಲ್ಯ ಬಾಗ್ಚಿ ಮತ್ತು ವಿಪುಲ್‌ ಎಂ. ಪಾಂಚೋಲಿ ಅವರ ತ್ರಿಸದಸ್ಯ ಪೀಠ ನಡೆಸಿತು.

“ಈ ಪ್ರಕರಣವನ್ನು ನೋಡಿದರೆ ರಾಜ್ಯ ಸರ್ಕಾರವು ಪಾಲಿಕೆ ಚುನಾವಣೆ ಮುಂದೂಡಲು ಯತ್ನಿಸುತ್ತಿರುವಂತೆ ಕಾಣುತ್ತಿದೆ” ಎಂದು ನ್ಯಾಯಾಲಯ ಹೇಳಿತು.  ಅಂತಿಮವಾಗಿ, “ಪರಿಸ್ಥಿತಿಯನ್ನು ಸಂಪೂರ್ಣವಾಗಿ ಪರಿಗಣಿಸಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಡಿ ಬರುವ ಐದೂ ಪಾಲಿಕೆಗಳಿಗೆ ಚುನಾವಣೆ ನಡೆಸಲು ಕೊನೆಯ ಬಾರಿಗೆ ಆಗಸ್ಟ್‌ 31ರವರೆಗೆ ಕಾಲಾವಕಾಶ ನೀಡಲಾಗಿದೆ” ಎಂದು ಆದೇಶಿಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಡಾ. ಅಭಿಷೇಕ್‌ ಮನು ಸಿಂಘ್ವಿ ಅವರು “ಬೆಂಗಳೂರಿನ ಐದು ಪಾಲಿಕೆಗಳಿಗೆ ಜೂನ್‌ 30ರ ಒಳಗೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ ಈ ಹಿಂದೆ ನಿರ್ದೇಶಿಸಿತ್ತು. ಸಿಬ್ಬಂದಿಯ ಕೊರತೆಯಿರುವುದರಿಂದ 60 ದಿನಗಳು ಚುನಾವಣೆ ಮುಂದೂಡಬೇಕು. ಐದೂ ಪಾಲಿಕೆಗಳಿಗೆ ಚುನಾವಣೆ ನಡೆಸಲು ಬಜೆಟ್‌ನಲ್ಲಿ ಹಣ ಮೀಸಲಿರಿಸಲಾಗಿದೆ. ಸಿಬ್ಬಂದಿ ಕೊರತೆ ಇರುವುದರಿಂದ ಎರಡರಿಂದ ಮೂರು ತಿಂಗಳು ಕೇಳುತ್ತಿದ್ದೇವೆ ಅಷ್ಟೆ” ಎಂದರು.

ಚುನಾವಣೆ ಮುಂದೂಡಿಕೆ ವಿರೋಧಿಸಿ ವಕೀಲ ರಂಗನಾಥ್‌ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಪರಮೇಶ್ವರ್‌ ಅವರು “ನ್ಯಾಯಾಲಯವು ಹಲವು ಬಾರಿ ಕಾಲಾವಕಾಶ ನೀಡಿದ್ದು, ಸರ್ಕಾರ ಚುನಾವಣೆ ನಡೆಸಲು ಮೀನಮೇಷ ಎಣಿಸುತ್ತಿದೆ. 15 ದಿನ ಹೆಚ್ಚುವರಿ ಕಾಲಾವಕಾಶ ನೀಡಬಹುದು. ಅದರ ಮೇಲೆ ಸಮಯ ನೀಡಕೂಡದು” ಎಂದರು.

ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು “ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಚುನಾವಣೆ ನಡೆಸಲು ಡಿಸೆಂಬರ್‌ವರೆಗೆ ಕಾಲಾವಕಾಶ ಕೋರಿದ್ದಾರೆ. ಮತ್ತೊಮ್ಮೆ ನ್ಯಾಯಾಲಯದ ಮುಂದೆ ಬರಲು ಅವಕಾಶ ನೀಡಬಾರದು” ಎಂದು ಮನವಿ ಮಾಡಿದರು.

ಈ ನಡುವೆ, ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ಕನಿಷ್ಠ 15 ದಿನವಾದರೂ ಹೆಚ್ಚುವರಿಯಾಗಿ ನೀಡಬೇಕು ಎಂಬ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಚುನಾವಣೆ ಮುಂದೂಡಿಕೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ಆದೇಶಿಸಿತು.

2015ರಲ್ಲಿ ಕೊನೆಯ ಬಾರಿಗೆ ಬಿಬಿಎಂಪಿಗೆ ಚುನಾವಣೆ ನಡೆದಿತ್ತು. 2021ರಲ್ಲಿ ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳ ಆಡಳಿತ ಮುಗಿದಿದ್ದು, ಅಂದಿನಿಂದ ಮೀಸಲಾತಿ, ಕ್ಷೇತ್ರ ಪುನರ್‌ವಿಂಗಡಣೆ ಮತ್ತಿತರ ನೆಪವೊಡ್ಡಿ ರಾಜ್ಯ ಸರ್ಕಾರಗಳು ಚುನಾವಣೆಯನ್ನು ಮುಂದೂಡುತ್ತಾ ಬಂದಿವೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಡಿ ಬೆಂಗಳೂರು, ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಕೇಂದ್ರ ಪಾಲಿಕೆಗಳನ್ನು ರೂಪಿಸಲಾಗಿದೆ. ಈ ಎಲ್ಲಾ ಪಾಲಿಕೆಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನದ ಪ್ರಕಾರ ಆಗಸ್ಟ್‌ 31ರ ಒಳಗೆ ಚುನಾವಣೆ ನಡೆಯಬೇಕಿದೆ.

ಜನಗಣತಿ ಮತ್ತು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ (ಎಸ್‌ಐಆರ್) ಸಿಬ್ಬಂದಿ ನಿಯೋಜಿಸಿರುವುದರಿಂದ ಅವರು ಚುನಾವಣಾ ಕರ್ತವ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ, ಸೆಪ್ಟೆಂಬರ್‌ 30ರವರೆಗೆ ಚುನಾವಣಾ ಮುಂದೂಡಿಕೆ ಮಾಡಬೇಕು ಎಂದು ರಾಜ್ಯ ಚುನಾವಣಾ ಆಯೋಗವು ಮಧ್ಯಂತರ ಅರ್ಜಿ ಸಲ್ಲಿಸಿತ್ತು.