ನ್ಯಾಯಾಂಗ ಮತ್ತು ಉನ್ನತ ನ್ಯಾಯಾಲಯ ಆಡಳಿತಾತ್ಮಕ ವರ್ಗ 2023ರಲ್ಲಿ ಸಾಕಷ್ಟು ವಿವಾದಗಳಿಗೆ ಸಾಕ್ಷಿಯಾಯಿತು.
ವಿವಿಧ ನ್ಯಾಯಾಂಗ ತೀರ್ಪುಗಳು ಉತ್ತಮ ರೀತಿಯಲ್ಲಿ ಸ್ವೀಕೃತವಾಗದೆ ಇರುವಂತೆಯೇ, ಪ್ರಕರಣಗಳನ್ನು ಪಟ್ಟಿ ಮಾಡುವ ಆಡಳಿತಾತ್ಮಕ ನಿರ್ಧಾರಗಳು ಕೂಡ ನಕಾರಾತ್ಮಕ ಅಭಿಪ್ರಾಯ ಪಡೆದವು.
2023ರಲ್ಲಿ ಸುಪ್ರೀಂ ಕೋರ್ಟ್ ನೀಡಿದ 10 ಪ್ರಮುಖ ತೀರ್ಪುಗಳ ಸಂಕ್ಷಿಪ್ತ ವಿವರ ಇಲ್ಲಿದೆ.
1. ಸರ್ಕಾರದ ವಿರುದ್ಧ ಮಾತ್ರವಲ್ಲ, ಸರ್ಕಾರೇತರ ವ್ಯಕ್ತಿಗಳ ವಿರುದ್ಧವೂ ಮೂಲಭೂತ ಹಕ್ಕು ಜಾರಿ
ಶೀರ್ಷಿಕೆ: ಕೌಶಲ್ ಕಿಶೋರ್ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ
ಮೂಲಭೂತ ಹಕ್ಕುಗಳ ವಿಚಾರದಲ್ಲಿ ಸರ್ಕಾರದ ವಿರುದ್ಧ ಮಾತ್ರವಲ್ಲದೆ, ಸರ್ಕಾರೇತರ ವ್ಯಕ್ತಿಗಳ ವಿರುದ್ಧವೂ ಜಾರಿಗೆ ಆಗ್ರಹಿಸಬಹುದು ಎಂದು ಐವರು ನ್ಯಾಯಮೂರ್ತಿಗಳ ನ್ಯಾಯಪೀಠ ಅಭಿಪ್ರಾಯಪಟ್ಟಿತು. .
ಅಪರಾಧದ ಸಂತ್ರಸ್ತರ ವಿರುದ್ಧ ಮಂತ್ರಿಗಳು ವಿವಾದಾತ್ಮಕ ಹೇಳಿಕೆ ನೀಡಿದ ಎರಡು ನಿದರ್ಶನಗಳಿಂದ ಈ ಪ್ರಕರಣ ಹುಟ್ಟಿಕೊಂಡಿತು. ಈ ಹೇಳಿಕೆಗಳು ಸಂವಿಧಾನದ 21ನೇ ವಿಧಿಯಡಿ ತಮ್ಮ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸಿವೆ ಎಂದು ಸಂತ್ರಸ್ತರು ದೂರಿದ್ದರು.
ಸಂವಿಧಾನದ 19 (2) ನೇ ವಿಧಿಯ ಅಡಿಯಲ್ಲಿ ವಿಧಿಸಲಾದ ಸಮಂಜಸವಾದ ನಿರ್ಬಂಧಗಳಿಂದ ಮಾತ್ರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಮೊಟಕುಗೊಳಿಸಬಹುದು ಎಂದು ನ್ಯಾಯಾಲಯವು 4:1 ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ. ಇದು ಆತ್ಯಂತಿಕ ಪಟ್ಟಿಯಾಗಿದ್ದು ಈ ಆಧಾರದ ಜೊತೆಗೆ ಹೊಸ ನಿರ್ಬಂಧಗಳನ್ನು ವಿಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
2. ಮುದ್ರಾಂಕ ರಹಿತ ಮಧ್ಯಸ್ಥಿಕೆ ಒಪ್ಪಂದ ಸ್ವೀಕಾರಾರ್ಹವಲ್ಲ ಆದರೆ ಅವು ಅನೂರ್ಜಿತವಲ್ಲ
ಶೀರ್ಷಿಕೆ: ಎನ್ಎನ್ ಗ್ಲೋಬಲ್ ಮರ್ಕಂಟೈಲ್ ಪ್ರೈವೇಟ್ ಲಿಮಿಟೆಡ್ ಮತ್ತು ಇಂಡೋ ಯುನಿಕ್ ಫ್ಲೇಮ್ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ ಮತ್ತು ಭಾರತೀಯ ಮುದ್ರಾಂಕ ಕಾಯಿದೆ ಮತ್ತು ಭಾರತೀಯ ಮಧ್ಯಸ್ಥಿಕೆ ಕಾಯಿದೆ ನಡುವಣ ಪರಸ್ಪರ ಕ್ರಿಯೆ
ಮುದ್ರಾಂಕ ರಹಿತ ಮಧ್ಯಸ್ಥಿಕೆ ಒಪ್ಪಂದಗಳಿಗೆ ಕಾನೂನು ಮಾನ್ಯತೆ ಇಲ್ಲ ಎಂದು ಐವರು ನ್ಯಾಯಮೂರ್ತಿಗಳ ಪೀಠ ಏಪ್ರಿಲ್‌ನಲ್ಲಿ ನೀಡಿದ್ದ ತೀರ್ಪನ್ನು ಕಳೆದ ಡಿ. ಏಳರಂದು ಏಳು ನ್ಯಾಯಮೂರ್ತಿಗಳ ವಿಸ್ತೃತ ಪೀಠ ರದ್ದುಗೊಳಿಸಿತು.
ಮುದ್ರಾಂಕ ರಹಿತ ಮಧ್ಯಸ್ಥಿಕೆ ಒಪ್ಪಂದಗಳು ಸ್ವೀಕಾರಾರ್ಹವಲ್ಲವಾದರೂ ಮುದ್ರಾಂಕ ರಹಿತವಾದ ಕಾರಣಕ್ಕೆ ಅವುಗಳನ್ನು ಆರಂಭದಿಂದಲೂ ಅನೂರ್ಜಿತ ಎಂದು ಹೇಳಲಾಗದು ಎಂಬುದಾಗಿ ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಅಭಿಪ್ರಾಯಪಟ್ಟಿತು.
ಮುದ್ರಾಂಕ ಶುಲ್ಕ ಪಾವತಿಸದ ಪರಿಣಾಮ ಒಪ್ಪಂದ ಸ್ವೀಕಾರಾರ್ಹವಾಗುವುದಿಲ್ಲ ಆದರೆ ಹಾಗೆಂದು ಅದು ಅನೂರ್ಜಿತವಾಗದು ಮತ್ತು ಮುದ್ರಾಂಕ ಶುಲ್ಕ ಪಾವತಿಸದಿರುವುದಕ್ಕೆ ಕಾನೂನಾತ್ಮಕ ಪರಿಹಾರ ಕಂಡುಕೊಳ್ಳಬಹುದು ಎಂದು ಅದು ಹೇಳಿತು.
ಮಧ್ಯಸ್ಥಿಕೆ ಒಪ್ಪಂದಕ್ಕೆ ಮುದ್ರಾಂಕಯುತವೇ ಅಥವಾ ಅಲ್ಲವೇ ಎಂಬ ಅಂಶದ ನಿರ್ಣಯವು ಮಧ್ಯಸ್ಥಿಕೆ ನ್ಯಾಯಮಂಡಳಿಗೆ ಬಿಟ್ಟಿದ್ದೇ ವಿನಾ ನ್ಯಾಯಾಲಯಗಳಿಗಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತು.
3. 370ನೇ ವಿಧಿ ರದ್ದತಿ ಸಿಂಧು
ಶೀರ್ಷಿಕೆ: ಭಾರತೀಯ ಸಂವಿಧಾನದ 370 ನೇ ವಿಧಿಗೆ ಸಂಬಂಧಿಸಿದ ಪ್ರಕರಣ
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ 2019 ರ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಡಿಸೆಂಬರ್ 11ರಂದು ಸರ್ವಾನುಮತದಿಂದ ಎತ್ತಿಹಿಡಿಯಿತು.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ.ಆರ್.ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿತು.
ವಿಧಿ 370 ಜಮ್ಮು ಮತ್ತು ಕಾಶ್ಮೀರದಲ್ಲಿ ಯುದ್ಧಕಾಲದ ಪರಿಸ್ಥಿತಿಗಳಿಂದಾಗಿ ಜಾರಿಗೆ ಬಂದ ತಾತ್ಕಾಲಿಕ ನಿಬಂಧನೆಯಾಗಿದೆ . ಆದ್ದರಿಂದ ಅದನ್ನು ರದ್ದುಗೊಳಿಸಲು ರಾಷ್ಟ್ರಪತಿಗಳಿಗೆ ಅಧಿಕಾರವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಜಮ್ಮು ಮತ್ತು ಕಾಶ್ಮೀರವು ಭಾರತ ಒಕ್ಕೂಟಕ್ಕೆ ಸೇರಿದ ನಂತರ ಯಾವುದೇ ಆಂತರಿಕ ಸಾರ್ವಭೌಮತ್ವ ಹೊಂದಿಲ್ಲ ಎಂದು ಅದು ಹೇಳಿತು.
4. ಸಲಿಂಗ ವಿವಾಹ ಅಥವಾ ಸಿವಿಲ್ ಯೂನಿಯನ್‌ಗೆ ಕಾನೂನು ಮಾನ್ಯತೆ ಇಲ್ಲ
ಶೀರ್ಷಿಕೆ: ಸುಪ್ರಿಯೋ ಅಲಿಯಾಸ್ ಸುಪ್ರಿಯಾ ಚಕ್ರವರ್ತಿ ಮತ್ತಿತರರು ಹಾಗೂ ಭಾರತ ಒಕ್ಕೂಟ ನಡುವಣ ಪ್ರಕರಣ.
ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಲು ಸುಪ್ರೀಂ ಕೋರ್ಟ್ ಕಳೆದ ಅಕ್ಟೋಬರ್‌ನಲ್ಲಿ ನಿರಾಕರಿಸಿತು.
ಭಿನ್ನಲಿಂಗೀಯರಲ್ಲದ ದಂಪತಿಗೆ ಕಾನೂನುಬದ್ಧವಾಗಿ ಮಾನ್ಯತೆ ಪಡೆದ ಮದುವೆ, ಸಿವಿಲ್ ಯೂನಿಯನ್ ಅಥವಾ ಮಗುವನ್ನು ದತ್ತು ತೆಗೆದುಕೊಳ್ಳುವ ಹಕ್ಕನ್ನು ನೀಡುವುದು ಶಾಸಕಾಂಗಕ್ಕೆಬಿಟ್ಟ ವಿಚಾರ ಎಂದು ಅದು ನುಡಿಯಿತು.
ಸಲಿಂಗ ದಂಪತಿಗಳು ಇದನ್ನು ಮೂಲಭೂತ ಹಕ್ಕು ಎಂದು ಪ್ರತಿಪಾದಿಸಲು ಸಾಧ್ಯವಿಲ್ಲ ಎಂದು ಎಲ್ಲಾ ನ್ಯಾಯಮೂರ್ತಿಗಳು ಸರ್ವಾನುಮತದಿಂದ ಅಭಿಪ್ರಾಯಪಟ್ಟರು.
ವಿಶೇಷ ವಿವಾಹ ಕಾಯಿದೆಯ ನಿಯಮಾವಳಿ ಪ್ರಶ್ನಿಸಿದ್ದನ್ನು ಕೂಡ ನ್ಯಾಯಾಲಯ ಸರ್ವಾನುಮತದಿಂದ ತಿರಸ್ಕರಿಸಿತು.
5. ಡಿಎಸ್ಪಿಇ ಕಾಯ್ದೆಯ ಸೆಕ್ಷನ್ 6 ಎ ಅನ್ನು ರದ್ದುಗೊಳಿಸಿದ 2014 ರ ತೀರ್ಪು ಪೂರ್ವಾನ್ವಯವಾಗುತ್ತದೆ
ಶೀರ್ಷಿಕೆ: ಸಿಬಿಐ ಮತ್ತು ಆರ್.ಆರ್.ಕಿಶೋರ್ ನಡುವಣ ಪ್ರಕರಣ
ದೆಹಲಿ ವಿಶೇಷ ಪೊಲೀಸ್ ಸ್ಥಾಪನಾ ಕಾಯಿದೆ- 1946ರ (ಡಿಎಸ್‌ಪಿಇ ಕಾಯಿದೆ) ಸೆಕ್ಷನ್ 6ಎ ಅನ್ನು ರದ್ದುಗೊಳಿಸಿ ಸುಬ್ರಮಣಿಯನ್ ಸ್ವಾಮಿ ಮತ್ತು ಸಿಬಿಐ ನಿರ್ದೇಶಕರ ನಡುವಣ ಪ್ರಕರಣದಲ್ಲಿ ನೀಡಲಾದ ತೀರ್ಪು ಪೂರ್ವಾನ್ವಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸೆಪ್ಟೆಂಬರ್‌ನಲ್ಲಿ ತೀರ್ಪು ನೀಡಿತ್ತು.
ಜಂಟಿ ಕಾರ್ಯದರ್ಶಿ ಹುದ್ದೆಯಿಂದ ಮೇಲ್ಪಟ್ಟ ಕೇಂದ್ರ ಸರ್ಕಾರಿ ಅಧಿಕಾರಿಗಳ ವಿರುದ್ಧದ ಸಿಬಿಐ ತನಿಖೆಗೆ ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯುವುದನ್ನು ಸೆಕ್ಷನ್ 6ಎ ಕಡ್ಡಾಯಗೊಳಿಸಿತ್ತು.
ಆದರೆ ಸೆಕ್ಷನ್ 6ಎ (1), ಪ್ರಜೆಗಳಿಗೆ ಸಮಾನತೆಯ ಹಕ್ಕನ್ನು ಒದಗಿಸುವ 14ನೇ ವಿಧಿಯ ಉಲ್ಲಂಘಿಸುತ್ತದೆ ಎಂದು ಸುಬ್ರಮಣಿಯನ್ ಸ್ವಾಮಿ ಮತ್ತು ಸಿಬಿಐ ನಿರ್ದೇಶಕರನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ 2014ರಲ್ಲಿ ನೀಡಲಾದ ತೀರ್ಪಿನಲ್ಲಿ ಹೇಳಿದ್ದ ಸುಪ್ರೀಂ ಕೋರ್ಟ್ ಅದನ್ನು ರದ್ದುಗೊಳಿಸಿತು. ಆ ತೀರ್ಪಿನಲ್ಲಿ ಸ್ಥಾನಮಾನ ಮತ್ತು ಶ್ರೇಣಿಯ ಆಧಾರದ ಮೇಲೆ ಅಧಿಕಾರಿಗಳ ನಡುವೆ ತಾರತಮ್ಯ ಇರಬಾರದು ಎಂದು ತಿಳಿಸಲಾಗಿತ್ತು.
6. ನೋಟು ಅಮಾನ್ಯೀಕರಣ ಕ್ರಮ ಎತ್ತಿಹಿಡಿದ ಸುಪ್ರೀಂ ಕೋರ್ಟ್
ಶೀರ್ಷಿಕೆ: ವಿವೇಕ್ ನಾರಾಯಣ ಶರ್ಮಾ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ
ಕೇಂದ್ರ ಸರ್ಕಾರವು 2016ರಲ್ಲಿ ಕೈಗೊಂಡಿದ್ದ ರೂ.500 ಮತ್ತು ರೂ.1000 ಮುಖಬೆಲೆಯ ನೋಟುಗಳ ರದ್ದತಿ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠ ಕಳೆದ ಜನವರಿಯಲ್ಲಿ ವಜಾಗೊಳಿಸಿತು.
ಸಾರ್ವಜನಿಕರು ಕಷ್ಟ ಎದುರಿಸುತ್ತಿರುವುದು ಈ ಪ್ರಕ್ರಿಯೆ ಬದಿಗೆ ಸರಿಸಲು ಆಧಾರವಾಗದು ಎಂದು ಬಹುಮತದ ತೀರ್ಪು ಅಭಿಪ್ರಾಯಪಟ್ಟಿತು.
ಅಮಾನ್ಯೀಕರಣದ ಕುರಿತು ವ್ಯತಿರಿಕ್ತ ತೀರ್ಪು ನೀಡಿದ ನ್ಯಾ. ಬಿ ವಿ ನಾಗರತ್ನ ಅವರು ನೋಟು ಅಮಾನ್ಯೀಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರರು ಎತ್ತಿದ್ದ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದರು. ನೋಟು ಅಮಾನ್ಯೀಕರಣದ ವೇಳೆ ಆರ್‌ಬಿಐ ಸ್ವಂತ ವಿವೇಚನೆಯನ್ನು ಬಳಸಿಲ್ಲ ಎಂದರು.
ಆ ಸಮಯದಲ್ಲಿ ಚಲಾವಣೆಯಲ್ಲಿದ್ದ ನೋಟುಗಳ ಶೇಕಡಾ 86 ರಷ್ಟಿದ್ದ ₹ 500 ಮತ್ತು ₹ 1,000 ನೋಟುಗಳನ್ನು ಹಿಂತೆಗೆದುಕೊಳ್ಳುವ ವಿಚಾರದಲ್ಲಿ ಆರ್‌ಬಿಐ ಯಾವುದೇ ಅರ್ಥಪೂರ್ಣ ವಿವೇಚನೆಗೆ ಮುಂದಾಗಲಿಲ್ಲ, ಇದು ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ಸಮಾಜೋ-ಆರ್ಥಿಕ ಹತಾಶೆಗೆ ಕಾರಣವಾಯಿತು ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು.
7. ನಿಷ್ಕ್ರಿಯ ದಯಾಮರಣ: ಜೀವಂತ ಉಯಿಲಿಗೆ ಮ್ಯಾಜಿಸ್ಟ್ರೇಟ್ ಅನುಮತಿ ಅಗತ್ಯವಿಲ್ಲ
ಶೀರ್ಷಿಕೆ: ಕಾಮನ್ ಕಾಸ್ ಮತ್ತು ಭಾರತ ಸರ್ಕಾರ ನಡುವಣ ಪ್ರಕರಣ
ವ್ಯಕ್ತಿಯೊಬ್ಬರು ನೀಡಿದ ದಯಾಮರಣದ ಇಚ್ಛೆಯ ಜೀವಂತ ಉಯಿಲಿಗೆ ಪ್ರಥಮ ದರ್ಜೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅನುಮತಿಸುವ ಮತ್ತು ಅದನ್ನು ಸಿಂಧುಗೊಳಿಸುವ ಅಗತ್ಯವನ್ನು ಕೈಬಿಡುವ ಮೂಲಕ ನಿಷ್ಕ್ರಿಯ ದಯಾಮರಣ ಮತ್ತು ಜೀವಂತ ಉಯಿಲಿನ ವಿಚಾರವಾಗಿ 2018ರಲ್ಲಿ ತಾನು ನೀಡಿದ್ದ ತೀರ್ಪಿಗೆ ಜನವರಿ 24 ರಂದು ಸುಪ್ರೀಂ ಕೋರ್ಟ್ ಮಾರ್ಪಾಡು ಮಾಡಿತು.
ನೋಟರಿ ಅಥವಾ ಗೆಜೆಟೆಡ್ ಅಧಿಕಾರಿಯು ದಯಾಮರಣದ ಇಚ್ಛೆಯ ಜೀವಂತ ಉಯಿಲಿಗೆ ಇಚ್ಛಾಪೂರ್ವಕವಾಗಿ ಸಹಿ ಹಾಕಲಾಗಿದೆ ಎಂಬುದನ್ನು ಖಾತರಿಪಡಿಸಬೇಕು ಎಂದು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್, ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಷ್ ರಾಯ್ ಮತ್ತು ಸಿ ಟಿ ರವಿಕುಮಾರ್ ಅವರ ನೇತೃತ್ವದ ಸಾಂವಿಧಾನಿಕ ಪೀಠ ಸ್ಪಷ್ಟಪಡಿಸಿತು.
8. ವಿವಾಹ ಸರಿಪಡಿಸಲಾಗದಷ್ಟು ಮುರಿದುಬಿದ್ದಿದ್ದರೆ 142ನೇ ವಿಧಿ ಬಳಸಿ ಸುಪ್ರೀಂ ವಿಚ್ಛೇದನ ನೀಡಬಹುದು
ಶೀರ್ಷಿಕೆ: ಶಿಲ್ಪಾ ಶೈಲೇಶ್ ಮತ್ತು ವರುಣ್ ಶ್ರೀನಿವಾಸನ್ ನಡುವಣ ಪ್ರಕರಣ
ವಿಚ್ಛೇದನ ಪಡೆಯಲಿಚ್ಛಿಸಿದವರು ಪರಸ್ಪರ ಬಾಳಲು ಸಾಧ್ಯವೇ ಇಲ್ಲ ಎಂಬ ಸಂದರ್ಭದಲ್ಲಿ ಸಹಮತದ ವಿಚ್ಛೇದನ ನೀಡಲು ಸಂವಿಧಾನದ 142ನೇ ವಿಧಿ ಬಳಸಿ ಸುಪ್ರೀಂ ಕೋರ್ಟ್ ತನ್ನ ಪೂರ್ಣ ಅಧಿಕಾರ ಚಲಾಯಿಸಬಹುದು ಎಂದು ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠ ಕಳೆದ ಮೇನಲ್ಲಿ ತೀರ್ಪು ನೀಡಿತು.
ಮೇಲೆ ಹೇಳಿದಂತಹ ಸಂದರ್ಭದಲ್ಲಿ ಹಿಂದೂ ವಿವಾಹ ಕಾಯಿದೆಯಡಿ ವಿಚ್ಛೇದನಕ್ಕಾಗಿ ನಿಗದಿಪಡಿಸಿದ ಆರು ತಿಂಗಳ ಅವಧಿಯನ್ನು ಕೈಬಿಡಬಹುದು ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಅಭಯ್ ಎಸ್ ಓಕಾ, ವಿಕ್ರಮ್ ನಾಥ್ ಹಾಗೂ ಜೆ ಕೆ ಮಾಹೇಶ್ವರಿ ಎಂದು ಅವರಿದ್ದ ಸಾಂವಿಧಾನಿಕ ಪೀಠ ನುಡಿಯಿತು.
ಅಂತಹ ಆದೇಶವನ್ನು ಪಕ್ಷಕಾರರಲ್ಲಿ ಒಬ್ಬರು ವಿರೋಧಿಸಿದರೂ ಸಹ ಆ ಮಾರ್ಗದ ಮೂಲಕ ವಿಚ್ಛೇದನ ನೀಡಬಹುದು ಎಂದು ನ್ಯಾಯಾಲಯ ಹೇಳಿತು. ಆದರೂ, ತಮ್ಮ ವಿವಾಹ ವಿಸರ್ಜಿಸುವಂತೆ ಕೋರಿ ಪಕ್ಷಗಳು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಅನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಿಲ್ಲ ಎಂಬ ಈ ಹಿಂದಿನ ತೀರ್ಪನ್ನು ನ್ಯಾಯಪೀಠ ಎತ್ತಿಹಿಡಿಯಿತು.
9. ಮಧ್ಯಸ್ಥಿಕೆ ಪ್ರಕ್ರಿಯೆಗಳಿಗೆ ಕಂಪನಿ ಸಮೂಹ ತತ್ವ ಅನ್ವಯ
ಕಂಪನಿಗಳ ಸಮೂಹ ತತ್ವವು (ಗ್ರೂಪ್ ಆಫ್ ಕಂಪೆನೀಸ್) ಭಾರತದಲ್ಲಿನ ಮಧ್ಯಸ್ಥಿಕೆ ಪ್ರಕ್ರಿಯೆಗಳಿಗೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಡಿಸೆಂಬರ್‌ನಲ್ಲಿ ತೀರ್ಪು ನೀಡಿತು.
ಮಧ್ಯಸ್ಥಿಕೆ ಒಪ್ಪಂದಕ್ಕೆ ಸಹಿ ಹಾಕದ ಕಂಪನಿಯು ಒಪ್ಪಂದಕ್ಕೆ ಸಹಿ ಹಾಕಿದ ಅದೇ ಕಂಪನಿಗಳ ಗುಂಪಿನ ಸದಸ್ಯನಾಗಿದ್ದರೆ ಒಪ್ಪಂದಕ್ಕೆ ಬದ್ಧವಾಗಿರುತ್ತದೆ ಎಂದು ಕಂಪನಿ ಸಮೂಹ ಸಿದ್ಧಾಂತ ಹೇಳುತ್ತದೆ.
ಸಹಿ ಹಾಕದ ಪಕ್ಷಕಾರರು, ಸಹಿ ಹಾಕಿದವರೊಂದಿಗೆ ನಂಟು ಹೊಂದಿರುವುದು ಮತ್ತು ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿವುದರಿಂದಾಗಿ ಮಧ್ಯಸ್ಥಿಕೆ ವಿವಾದಕ್ಕೆ ಅಪರಿಚಿತರೆಂದು ಪರಿಗಣಿಸಲಾಗುವುದಿಲ್ಲ ಎಂದು ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಪಿ ಎಸ್ ನರಸಿಂಹ, ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಸಾಂವಿಧಾನಿಕ ಪೀಠ ತೀರ್ಪು ನೀಡಿದೆ.
10. ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೇರ್ಪಡೆ ಮಾಡಬೇಕು
ಶೀರ್ಷಿಕೆ: ಅನೂಪ್ ಬರನ್ವಾಲ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ
ಸಂಸತ್ತು ಕಾನೂನು ರೂಪಿಸುವವರೆಗೆ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರನ್ನು ಪ್ರಧಾನಿ, ಲೋಕಸಭಾ ವಿರೋಧ ಪಕ್ಷದ ನಾಯಕ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಒಳಗೊಂಡ ಸಮಿತಿ ಆಯ್ಕೆ ಮಾಡಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಮಾರ್ಚ್‌ನಲ್ಲಿ ತೀರ್ಪು ನೀಡಿತು.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಅನುಪಸ್ಥಿತಿಯಲ್ಲಿ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಸಮಿತಿಯಲ್ಲಿ ಏಕೈಕ ಅತಿದೊಡ್ಡ ವಿರೋಧ ಪಕ್ಷದ ನಾಯಕ ಇರಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಆದರೆ ವರ್ಷಾಂತ್ಯದಲ್ಲಿ ಆಯ್ಕೆ ಸಮಿತಿಯಿಂದ ಸಿಜೆಐ ಅವರನ್ನು ಹೊರಗಿಡುವ ಮಸೂದೆಯನ್ನು ಸಂಸತ್ತು ಅಂಗೀಕರಿಸಿತು.
ಹೊಸ ಕಾಯಿದೆ ಪ್ರಕಾರ, ಆಯ್ಕೆ ಸಮಿತಿಯಲ್ಲಿ ಪ್ರಧಾನಿ, ಸಂಪುಟ ಸಚಿವರು ಮತ್ತು ವಿರೋಧ ಪಕ್ಷದ ನಾಯಕರು ಇರಲಿದ್ದಾರೆ.