NDPS Act 
ಸುದ್ದಿಗಳು

₹14.69 ಕೋಟಿ ಮೌಲ್ಯದ ಎಂಫಿಟಮೀನ್ ಜಫ್ತಿ: ಈಶಾನ್ಯ ರಾಜ್ಯಗಳ ಇಬ್ಬರು ಮಹಿಳೆಯರು ನ್ಯಾಯಾಂಗ ಬಂಧನಕ್ಕೆ

ಆರೋಪಿಗಳನ್ನು ತನಿಖೆಗೆ ಒಳಪಡಿಸಿದಾಗ ಸುಮಾರು ₹14.69 ಕೋಟಿ ಮೌಲ್ಯದ 7,371 ಗ್ರಾಂ ಹರಳಿನಾಕಾರದ ವಸ್ತುಗಳು ಪತ್ತೆಯಾಗಿವೆ. ಈ ಮಾದಕ ವಸ್ತುಗಳನ್ನು 10 ಕಪ್ಪು ಪ್ಯಾಕೆಟ್‌ ಮತ್ತು 22 ಸೋಪಿನ ಬಾಕ್ಸ್‌ಗಳಲ್ಲಿ ಇಡಲಾಗಿತ್ತು ಎನ್ನಲಾಗಿದೆ.

Bar & Bench

ಈಶಾನ್ಯ ರಾಜ್ಯಗಳ ಇಬ್ಬರು ಮಹಿಳೆಯರನ್ನು ಅಂದಾಜು ₹14.69 ಕೋಟಿ ಮೌಲ್ಯದ ಮಾದಕದ್ರವ್ಯ ಎಂಫಿಟಮೀನ್‌ ಹೊಂದಿದ್ದ ಆರೋಪದ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯವು ಈಚೆಗೆ ಬಂಧಿಸಿದ್ದು, ಆರೋಪಿಗಳನ್ನು ಜುಲೈ 25ರವರೆಗೆ ವಿಶೇಷ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಬಂಧಿತರಾದ ಮಣಿಪುರದ ಲಾಲ್ಜಮ್ಲುವೈ ಮತ್ತು ಮಿಜೋರಾಂನ ಲಾಲ್‌ಥಾಂಗ್ಲಿಯಾನಿ ಅವರನ್ನು ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ (ಎನ್‌ಡಿಪಿಎಸ್‌) ಕಾಯಿದೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾಗಿರುವ ನ್ಯಾಯಾಲಯ ನ್ಯಾಯಾಧೀಶೆ ಲತಾ ಅವರ ಮುಂದೆ ಹಾಜರುಪಡಿಸಲಾಗಿತ್ತು.

ಪ್ರಕರಣದ ಮಾಹಿತಿ ಪಡೆದ ನ್ಯಾಯಾಲಯವು ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಮಾದಕ ವಸ್ತುಗಳಿದ್ದ ಕಪ್ಪು ಮತ್ತು ಹಸಿರು ಬ್ಯಾಗ್‌ಗಳನ್ನು ಬದಲಾಯಿಸಿಕೊಳ್ಳುವಾಗ ಬೆಂಗಳೂರಿನ ಕಾಟನ್‌ ಪೇಟೆಯಲ್ಲಿ ಡಿಆರ್‌ಐ ಅಧಿಕಾರಿಗಳು ಜುಲೈ 11ರಂದು ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.

ಆರೋಪಿಗಳನ್ನು ವಶಕ್ಕೆ ಪಡೆದು ಶೋಧ ನಡೆಸಿದಾಗ ಸುಮಾರು ₹14.69 ಕೋಟಿ ಮೌಲ್ಯದ 7,371 ಗ್ರಾಂನ ಹರಳಿನಾಕಾರದ ವಸ್ತುಗಳು ಪತ್ತೆಯಾಗಿದ್ದವು. ಈ ಮಾದಕ ವಸ್ತುಗಳನ್ನು 10 ಕಪ್ಪು ಪ್ಯಾಕೆಟ್‌ ಮತ್ತು 22 ಸೋಪಿನ ಬಾಕ್ಸ್‌ಗಳಲ್ಲಿ ಇಡಲಾಗಿತ್ತು ಎನ್ನಲಾಗಿದೆ.

ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ (ಎನ್‌ಡಿಪಿಎಸ್‌) ಕಾಯಿದೆಯ ಸೆಕ್ಷನ್‌ 67ರ ಅಡಿ ಇಬ್ಬರೂ ಆರೋಪಿಗಳ ಹೇಳಿಕೆ ಪಡೆಯಲಾಗಿದೆ. ತನಿಖೆಯು ಪ್ರಗತಿಯಲ್ಲಿದ್ದು, ಜಫ್ತಿ ಮಾಡಿರುವ ಉತ್ಪನ್ನದ ರಾಸಾಯನಿಕ ವಿಶ್ಲೇಷಣೆ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ತಿಳಿಸಲಾಗಿದೆ.