ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಎಂ ಬಿ ರಾಜೇಶ್ ಗೌಡ ಅವರನ್ನು ವರ್ಗಾವಣೆ ಮಾಡಿರುವ ಹಿನ್ನೆಲೆಯಲ್ಲಿ ಅವರ ನೇಮಕಾತಿ ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಗುರುವಾರ ಇತ್ಯರ್ಥಪಡಿಸಿತು.
ರಾಜೇಶ್ ಗೌಡ ಅವರನ್ನು ಬಿಡಿಎ ಆಯುಕ್ತರಾಗಿ ನೇಮಕ ಮಾಡಿ 2021ರ ಏಪ್ರಿಲ್ 30ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ರದ್ದು ಕೋರಿ ವಕೀಲ ಜಿ ಮೋಹನ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠವು ಅರ್ಜಿ ವಿಲೇವಾರಿ ಮಾಡಿತು.
“ರಾಜೇಶ್‌ಗೌಡ ಅವರನ್ನು ಆಗಸ್ಟ್ 26ರಂದು ವರ್ಗಾವಣೆ ಮಾಡಲಾಗಿದೆ. ಹೀಗಾಗಿ, ಅರ್ಜಿಯಲ್ಲಿನ ವಿಚಾರವನ್ನು ಪರಿಶೀಲಿಸುವ ಅಗತ್ಯವಿಲ್ಲ” ಎಂದು ಪೀಠ ಹೇಳಿದೆ.
ಸರ್ಕಾರದ ಪರ ವಕೀಲರು “ರಾಜೇಶ್ ಗೌಡ ಅವರನ್ನು ಈಗಾಗಲೇ ಬಿಡಿಎ ಆಯುಕ್ತ ಹುದ್ದೆಯಿಂದ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಆದೇಶ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಅರ್ಜಿ ವಿಚಾರಣಾ ಮಾನ್ಯತೆ ಕಳೆದುಕೊಂಡಿದೆ” ಎಂದು ತಿಳಿಸಿದರು.
ಅರ್ಜಿದಾರರ ಪರ ವಕೀಲ ಎಕ್ಸ್ ಎಂ ಜೋಸೆಫ್ ಅವರು “ರಾಜ್ಯ ಸರ್ಕಾರ ತಾನಾಗಿಯೇ ಅಧಿಕಾರಿಯನ್ನು ವರ್ಗಾವಣೆ ಮಾಡಿಲ್ಲ. ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದ ನಂತರವಷ್ಟೇ ವರ್ಗಾವಣೆ ಮಾಡಲಾಗಿದೆ” ಎಂದು ಪೀಠದ ಗಮನಕ್ಕೆ ತಂದರು.
ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ಹಲವರಿಗೆ ಪರ್ಯಾಯ ನಿವೇಶನ ಹಂಚಿಕೆ ಮಾಡಿದ್ದ ಬಿಡಿಎ ಆಯುಕ್ತರಾಗಿದ್ದ ರಾಜೇಶ್ ಗೌಡ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ನ್ಯಾಯಾಲಯದ ಆದೇಶಕ್ಕೆ ಅವಿಧೇಯರಾಗಿ ನಡೆದುಕೊಂಡಿದ್ದ ರಾಜೇಶ್ ಗೌಡರನ್ನು ವರ್ಗಾವಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.
ಅರ್ಜಿದಾರರ ಕೋರಿಕೆ: ಬೆಂಗಳೂರು ಅಭಿವೃದ್ಧಿ ಕಾಯಿದೆ-1976ರ ಸೆಕ್ಷನ್ 12ರ ಪ್ರಕಾರ ವಿಭಾಗೀಯ ಆಯುಕ್ತರಿಗಿಂತ ಕಡಿಮೆ ಇರದ ಶ್ರೇಣಿಯ ಅಧಿಕಾರಿಯನ್ನು ಬಿಡಿಎ ಆಯುಕ್ತರ ಹುದ್ದೆಗೆ ನೇಮಕ ಮಾಡಬೇಕಿದೆ. ಆದರೆ, ಪ್ರಾದೇಶಿಕ ಆಯುಕ್ತರಿಗಿಂತ ಕಡಿಮೆ ಶ್ರೇಣಿಯ ಅಧಿಕಾರಿಯಾಗಿರುವ ಎಂ ಬಿ ರಾಜೇಶ್ ಗೌಡ ಅವರನ್ನು ಆಯುಕ್ತರಾಗಿ ನೇಮಿಸಿ ಸರ್ಕಾರ ಆದೇಶಿಸಿದೆ. ಅರ್ಹತೆ ಇಲ್ಲದವರನ್ನು ನೇಮಿಸುವುದರಿಂದ ಆ ಹುದ್ದೆಯ ಕರ್ತವ್ಯಗಳನ್ನು ಪರಿಣಾಮಕಾರಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಆಕ್ಷೇಪಿಸಿದ್ದ ಅರ್ಜಿದಾರರು, ರಾಜೇಶ್ ಗೌಡ ಅವರನ್ನು ಬಿಡಿಎ ಆಯುಕ್ತರಾಗಿ ನೇಮಿಸಿ 2021ರ ಏಪ್ರಿಲ್ 30ರಂದು ಹೊರಡಿಸಿರುವ ಆದೇಶ ಹಿಂಪಡೆಯಬೇಕು ಹಾಗೂ ಅರ್ಹ ಅಧಿಕಾರಿಯನ್ನು ಬಿಡಿಎ ಆಯುಕ್ತರ ಹುದ್ದೆಗೆ ನೇಮಕ ಮಾಡಬೇಕು ಎಂದು ನವೆಂಬರ್ 30ರಂದು ಸಲ್ಲಿಸಿರುವ ಮನವಿ ಪರಿಗಣಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದರು.