Justice Ujjal Bhuyan 
ಸುದ್ದಿಗಳು

ನ್ಯಾಯಾಧೀಶರ ವರ್ಗಾವಣೆ ನ್ಯಾಯಾಂಗದ ಆಂತರಿಕ ವಿಚಾರ, ಸರ್ಕಾರದ ಪಾತ್ರ ಇರಬಾರದು: ನ್ಯಾ. ಭುಯಾನ್

ಸರ್ಕಾರದ ಕೋರಿಕೆಯ ಮೇರೆಗೆ ವರ್ಗಾವಣೆ ಮಾಡಲಾಗಿದೆ ಎಂದು ಕೆಲ ಸಂದರ್ಭಗಳಲ್ಲಿ ಕೊಲೆಜಿಯಂ ನಿರ್ಣಯಗಳಲ್ಲೇ ಉಲ್ಲೇಖವಾಗಿರುವುದು ಅತ್ಯಂತ ಆತಂಕಕಾರಿ ವಿಷಯ ಎಂದು ಅವರು ಆತಂಕ ವ್ಯಕ್ತಪಡಿಸಿದರು.

Bar & Bench

ನ್ಯಾಯಾಧೀಶರ ವರ್ಗಾವಣೆ ನ್ಯಾಯಾಂಗದ ಆಂತರಿಕ ವಿಚಾರವಾಗಿದ್ದು ಈ ಪ್ರಕ್ರಿಯೆಯಲ್ಲಿ ಸರ್ಕಾರಕ್ಕೆ ಯಾವುದೇ ಪಾತ್ರ ಇರುವಂತಿಲ್ಲ. ಅಂತಹ ವರ್ಗಾವಣೆ ನ್ಯಾಯದ ಉಯಯತ್ತಮ ಆಡಳಿತಕ್ಕಾಗಿ ಮಾತ್ರವೇ ನಡೆಯಬೇಕಿದ್ದು ಬೇರಾವುದೇ ಉದ್ದೇಶಕ್ಕಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ತಿಳಿಸಿದರು.

ಪುಣೆಯ ಐಎಲ್‌ಎಸ್ (ಐಎಲ್‌ಎಸ್‌) ಕಾನೂನು ಕಾಲೇಜಿನಲ್ಲಿ ಪ್ರಾಂಶುಪಾಲ ಜಿವಿ ಪಂಡಿತ್ ಸ್ಮಾರಕ ಉಪನ್ಯಾಸ ಮಾಲಿಕೆಯ ಅಂಗವಾಗಿ ಶನಿವಾರ ಆಯೋಜಿಸಿದ್ದ ‘ಸಾಂವಿಧಾನಿಕ ನೈತಿಕತೆ ಮತ್ತು ಪ್ರಜಾಪ್ರಭುತ್ವ ಆಡಳಿತ’ ಹೆಸರಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನ್ಯಾ. ಭುಯಾನ್‌ ಅವರ ಉಪನ್ಯಾಸದ ಪ್ರಮುಖಾಂಶಗಳು

# ನ್ಯಾಯಮೂರ್ತಿಯ ವರ್ಗಾವಣೆ ಯಾವಾಗಲೂ ನ್ಯಾಯದ ಉತ್ತಮ ಆಡಳಿತಕ್ಕಾಗಿ ಮಾತ್ರ. ಇದು ನ್ಯಾಯಾಂಗದ ಆಂತರಿಕ ವಿಷಯ. ಇದರಲ್ಲಿ ಸರ್ಕಾರಕ್ಕೆ ಯಾವುದೇ ಹೇಳಿಕೆ ಅಥವಾ ಹಸ್ತಕ್ಷೇಪದ ಹಕ್ಕಿಲ್ಲ.

# ಈ ತತ್ವದಲ್ಲಿ ಏರುಪೇರಾದರೆ ಅದು ನ್ಯಾಯಾಂಗ ಸ್ವಾತಂತ್ರ್ಯವನ್ನು ಹಾಳುಗೆಡವುತ್ತದೆ ಹಾಗೂ ನ್ಯಾಯಾಂಗವನ್ನು ಅನ್ಯ ಪ್ರಭಾವದಿಂದ ರಕ್ಷಿಸುವ ಉದ್ದೇಶವೇ ಮುಕ್ಕಾಗುತ್ತದೆ.

# ಕೊಲೆಜಿಯಂ ಸ್ವತಃ, ಹೈಕೋರ್ಟ್ ನ್ಯಾಯಮೂರ್ತಿಯ ವರ್ಗಾವಣೆಯು ಸರ್ಕಾರದ ಮನವಿಯ ಮೇರೆಗೆ ನಡೆಯಿತು ಎಂದು ದಾಖಲಿಸಿದಾಗ, ಅದು ಸಂವಿಧಾನಾತ್ಮಕವಾಗಿ ಸ್ವತಂತ್ರವಾಗಿರಬೇಕಾದ ಪ್ರಕ್ರಿಯೆಯೊಳಗೆ ನಡೆದಿರುವ ಗಂಭೀರ ಹಸ್ತಕ್ಷೇಪವನ್ನು ಬಹಿರಂಗಪಡಿಸುತ್ತದೆ.

# “ಇದು ಸರ್ಕಾರ ಕೊಲೆಜಿಯಂ ನಿರ್ಣಯಗಳ ಮೇಲೆ ಪ್ರಭಾವ ಬೀರುತ್ತಿರುವುದರ ಸ್ಪಷ್ಟ ಒಪ್ಪಿಗೆ. ಕೊಲೆಜಿಯಂ ವ್ಯವಸ್ಥೆ ತಡೆಯಲು ಉದ್ದೇಶಿಸಿದ್ದು ಇದೇ ಇದಾಗಿತ್ತು. ಇದು ಅತ್ಯಂತ ದುರದೃಷ್ಟಕರ.

# ನ್ಯಾಯಮೂರ್ತಿಗಳ ನೇಮಕಾತಿ ಹಾಗೂ ವರ್ಗಾವಣೆಗಳಲ್ಲಿ ರಾಜಕೀಯ ಮತ್ತು ಸರ್ಕಾರಿ ಪ್ರಭಾವವನ್ನು ತಡೆಯುವ ಉದ್ದೇಶದಿಂದ ರೂಪುಗೊಂಡ ಕೊಲೆಜಿಯಂ ವ್ಯವಸ್ಥೆಯ ಅಖಂಡತೆಯೇ ಇಂತಹ ಮಧ್ಯಪ್ರವೇಶದಿಂದ ಕುಸಿಯುತ್ತದೆ.

# ವರ್ಗಾವಣೆಯನ್ನು ನ್ಯಾಯಾಧೀಶರು ಶಿಕ್ಷೆಯಂತೆ ಪರಿಭಾವಿಸಬಾರದು,. ವರ್ಗಾವಣೆ ಎಂಬುದು ನ್ಯಾಯದ ಉತ್ತಮ ಆಡಳಿತಕ್ಕಾಗಿ ಇದೆ.

# ನ್ಯಾಯಮೂರ್ತಿಗಳ ವರ್ಗಾವಣೆ ಮತ್ತು ನಿಯೋಜನೆಗೆ ಸಂಬಂಧಿಸಿದ ನಿರ್ಣಯಗಳು ಸಂಪೂರ್ಣ ನ್ಯಾಯಾಂಗದ್ದೇ ಆಗಿರಬೇಕು.

# ಹಿಂದೆ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರಗಳ ಅತಿಯಾದ ಹಸ್ತಕ್ಷೇಪ ಗಂಭೀರ ಕಳವಳ ಉಂಟುಮಾಡಿದ ಸಂದರ್ಭದಲ್ಲಿಯೇ ಕೊಲಿಜಿಯಂ ವ್ಯವಸ್ಥೆ ರೂಪುಗೊಂಡಿತು.

# ಕೊಲೆಜಿಯಂ ವ್ಯವಸ್ಥೆ ಪರಿಪೂರ್ಣವೆಂದು ನಾನು ಹೇಳುವುದಿಲ್ಲ. ಆದರೆ ಪ್ರಸ್ತುತ ಇರುವ ಪರ್ಯಾಯಗಳಿಗಿಂತ ಇದು ಬಹಳ ಉತ್ತಮ.

# ನ್ಯಾಯಾಲಯಗಳ ಮೇಲೆ ಯಾರೂ ಭೌತಿಕ ದಾಳಿ ಯಾರೂ ಮಾಡುವುದಿಲ್ಲ. ಅನೇಕರು ಹೇಳುವಂತೆ, ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಅತಿದೊಡ್ಡ ಅಪಾಯ ಒಳಗಿನಿಂದಲೇ ತಲೆದೋರುತ್ತದೆ.

# ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಲೇ ಇದ್ದರೂ, ವಿಶ್ವಾಸಾರ್ಹತೆ ಕಳೆದುಹೋದರೆ ಆ ಸಂಸ್ಥೆಯ ಆತ್ಮವೇ ನಾಶವಾಗುತ್ತದೆ.

# ನ್ಯಾಯಂಗ ಸ್ವಾತಂತ್ರ್ಯಕ್ಕೂ ಸಾಂವಿಧಾನಿಕ ನೈತಿಕತೆಗೂ ನಂಟಿದೆ. ಜನಪ್ರಿಯವಲ್ಲದ ನಿರ್ಧಾರಗಳಾದರೂ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ರಕ್ಷಿಸುವುದೇ ಸಂವಿಧಾನಾತ್ಮಕ ನ್ಯಾಯಾಲಯಗಳ ಕರ್ತವ್ಯ.