IRDA and Karnataka HC
IRDA and Karnataka HC 
ಸುದ್ದಿಗಳು

ಪಾಲಿಸಿದಾರರು ಕ್ಲೇಮ್ ಮಾಡದ ಹಣ ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ ವರ್ಗಾವಣೆ: ಹೈಕೋರ್ಟ್‌ಗೆ ಐಆರ್‌ಡಿಎ ಮಾಹಿತಿ

Bar & Bench

ದೇಶದ ವಿವಿಧ ವಿಮಾ ಸಂಸ್ಥೆಗಳ ಪಾಲಿಸಿದಾರರು ಕ್ಲೇಮ್ ಮಾಡದೇ ಉಳಿದಿರುವ ಹಣವನ್ನು ಕಾಲಕಾಲಕ್ಕೆ ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ ವರ್ಗಾಯಿಸಲಾಗುತ್ತಿದೆ ಎಂದು ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ಕರ್ನಾಟಕ ಹೈಕೋರ್ಟ್‌ಗೆ ಬುಧವಾರ ಮಾಹಿತಿ ನೀಡಿದೆ.

ಭಾರತೀಯ ಭ್ರಷ್ಟಾಚಾರ ನಿಗ್ರಹ ದಳ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠಕ್ಕೆ ಐಆರ್‌ಡಿಎ ಪರ ವಕೀಲರು ಈ ಮಾಹಿತಿ ನೀಡಿದರು.

ಅರ್ಜಿದಾರರ ಪರ ವಕೀಲರು “ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಸೇರಿ ವಿವಿಧ ವಿಮಾ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯ ಜನ ಪಾಲಿಸಿ ಮಾಡಿಸಿದ್ದು, ಅದಕ್ಕಾಗಿ ಪ್ರೀಮಿಯಂ ಪಾವತಿಸುತ್ತಿದ್ದಾರೆ. ಮೆಚ್ಯೂರಿಟಿ ಅವಧಿ ಪೂರ್ಣಗೊಂಡ ಅಥವಾ ಪಾಲಿಸಿದಾರರು ಮೃತಪಟ್ಟ ನಂತರ ಕ್ಲೇಮ್ ಮಾಡದ ಕೋಟ್ಯಂತರ ರೂಪಾಯಿ ಪಾಲಿಸಿ ಮೊತ್ತ ವಿಮಾ ಸಂಸ್ಥೆಗಳಲ್ಲೇ ಉಳಿದಿವೆ. ಆ ಹಣವನ್ನು ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ ವರ್ಗಾಯಿಸಲು ನಿರ್ದೇಶಿಸಬೇಕು” ಎಂದು ಕೋರಿದರು.

ಐಆರ್‌ಡಿಎ ಪರ ಹಿರಿಯ ವಕೀಲ ಎಸ್ ಶ್ರೀರಂಗ ಅವರು “ದೇಶದ ವಿಮಾ ಸಂಸ್ಥೆಗಳ ಮೇಲೆ ಐಆರ್‌ಡಿಎ ನಿಯಂತ್ರಣ ಹೊಂದಿದೆ. ಜತೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಿರಿಯ ನಾಗರಿಕರ ಕಲ್ಯಾಣ ನಿಧಿ ಕಾಯಿದೆ 2015ರಲ್ಲಿ ವಿಮಾ ಸಂಸ್ಥೆಗಳಲ್ಲಿ ಕ್ಲೇಮ್ ಮಾಡದೇ ಉಳಿದಿರುವ ಹಣವನ್ನು 10 ವರ್ಷಗಳ ಬಳಿಕ ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ ವರ್ಗಾಯಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಅದರ ಪ್ರಕಾರ ಈಗಾಗಲೇ ವಿಮಾ ಸಂಸ್ಥೆಗಳು ಹಣ ವರ್ಗಾಯಿಸುತ್ತಿವೆ” ಎಂದು ಪೀಠಕ್ಕೆ ವಿವರಿಸಿದರು.

“ಎಲ್‌ಐಸಿಯೂ ಸೇರಿ ವಿವಿಧ ವಿಮಾ ಸಂಸ್ಥೆಗಳು 2018ನೇ ಸಾಲಿನಲ್ಲಿ 81.65 ಕೋಟಿ ರೂಪಾಯಿ ಹಾಗೂ 2019ನೇ ಸಾಲಿನಲ್ಲಿ 398.66 ಕೋಟಿ ರೂಪಾಯಿಯನ್ನು ನಿಧಿಗೆ ವರ್ಗಾಯಿಸಿವೆ. ಇದೊಂದು ನಿರಂತರ ಪ್ರಕ್ರಿಯೆಯಾಗಿದ್ದು, ಭವಿಷ್ಯದಲ್ಲೂ ಮುಂದುವರಿಯಲಿದೆ. ಹಣ ವರ್ಗಾವಣೆ ಪ್ರಕ್ರಿಯೆ ಮೇಲ್ವಿಚಾರಣೆಗೆಂದೇ ವ್ಯವಸ್ಥೆಯೊಂದನ್ನು ರೂಪಿಸಲಾಗಿದ್ದು, ಅದಕ್ಕಾಗಿ ಐಆರ್‌ಡಿಎ ಮಾಸ್ಟರ್ ಸುತ್ತೋಲೆ ಹೊರಡಿಸಿದೆ” ಎಂದು ವಿವರಿಸಿದರು.

ಎಲ್‌ಐಸಿ ಪರ ವಕೀಲರು “ಐಆರ್‌ಡಿಎ ನಿರ್ದೇಶನದ ಅನುಸಾರ ಕ್ಲೇಮ್ ಆಗದೇ ಉಳಿದ ಹಣವನ್ನು ಕಾಲ ಕಾಲಕ್ಕೆ ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ ವರ್ಗಾಯಿಸಲಾಗುತ್ತಿದೆ. ಹಣ ವರ್ಗಾವಣೆಗೆ ಸಂಬಂಧಿಸಿದ ಮಾಹಿತಿ ನಿಗಮದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ” ಎಂದು ತಿಳಿಸಿದರು.

ಆಗ ಪೀಠವು “ಕ್ಲೇಮ್ ಮಾಡದೇ ಉಳಿದಿರುವ ಹಣವನ್ನು ವಿಮಾ ಸಂಸ್ಥೆಗಳು ಕಾಲ ಕಾಲಕ್ಕೆ ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ ವರ್ಗಾಯಿಸುತ್ತಿವೆ. ಈ ಪ್ರಕ್ರಿಯೆಯನ್ನು ಐಆರ್‌ಡಿಎ ಮೇಲ್ವಿಚಾರಣೆ ನಡೆಸುತ್ತಿದ್ದು, ಅದಕ್ಕಾಗಿ ಮಾಸ್ಟರ್ ಸುತ್ತೋಲೆಯನ್ನೂ ಹೊರಡಿಸಿದೆ. ಸುತ್ತೋಲೆಯಲ್ಲಿರುವ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ದಂಡನಾ ಕ್ರಮಗಳನ್ನೂ ಜರುಗಿಸಬಹುದಾಗಿದೆ. ಕ್ಲೇಮ್ ಆಗದ ಹಣ ವರ್ಗಾವಣೆಗೆ ಈಗಾಗಲೇ ವ್ಯವಸ್ಥೆ ಜಾರಿಯಲ್ಲಿರುವ ಕಾರಣ ಪಿಐಎಲ್ ಇತ್ಯರ್ಥಪಡಿಸಲಾಗುವುದು. ಸುತ್ತೋಲೆಯ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಕಾಲ ಕಾಲಕ್ಕೆ ವರದಿ ತರಿಸಿಕೊಂಡು ಪರಿಶೀಲನೆ ನಡೆಸಬೇಕು” ಎಂದು ಐಆರ್‌ಡಿಎಗೆ ಪೀಠ ನಿರ್ದೇಶಿಸಿತು.