Transgender pride
Transgender pride  flagrefinery29.com
ಸುದ್ದಿಗಳು

ಲಿಂಗ ಆಯ್ಕೆ ಮಾಡಿಕೊಳ್ಳುವ ಎಲ್ಲಾ ಹಕ್ಕು ತೃತೀಯ ಲಿಂಗಿಗೆ ಇದೆ: ಒಡಿಶಾ ಹೈಕೋರ್ಟ್

Bar & Bench

ತೃತೀಯ ಲಿಂಗಿಗಳಿಗೆ ತಮ್ಮಿಚ್ಚೆಯ ಲಿಂಗ ಆಯ್ಕೆ ಮಾಡುವ ಹಕ್ಕು ಇದ್ದು ಅದಕ್ಕೆ ಅನುಗುಣವಾಗಿ ಪಿಂಚಣಿ ಸೌಲಭ್ಯ ಪಡೆಯಲು ಅವರು ಅರ್ಹರು ಎಂದು ಒಡಿಶಾ ಹೈಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಿದೆ [ಕಾಂತಾರೊ ಕೊಂಡಗಾರಿ ಅಲಿಯಾಸ್‌ ಕಾಜೋಲ್‌ ಮತ್ತುಒಡಿಶಾ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಎನ್‌ಎಎಲ್‌ಎಸ್‌ಎ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ತೃತೀಯ ಲಿಂಗಿ ಸಮುದಾಯದ ಹಕ್ಕುಗಳನ್ನು ಗುರುತಿಸಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನನ್ವಯ ನ್ಯಾ. ಎ ಕೆ ಮೊಹಾಪಾತ್ರ ಈ ಆದೇಶ ನೀಡಿದ್ದಾರೆ.

ತನಗೆ ಕೌಟುಂಬಿಕ ಪಿಂಚಣಿ ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಕೋರಿ ತೃತೀಯ ಲಿಂಗಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಈಕೆಯ ತಂದೆ ಒಡಿಶಾ ಸರ್ಕಾರದ ಉದ್ಯೋಗಿಯಾಗಿದ್ದು ಅವರ ಮರಣಾನಂತರ ಅರ್ಜಿದಾರರ ತಾಯಿಗೆ ಕೌಟುಂಬಿಕ ಪಿಂಚಣಿಯನ್ನು ನೀಡಲಾಗಿತ್ತು. ತಾಯಿಯ ಮರಣಾನಂತರ ಸರ್ಕಾರದ ನಿಯಮಾವಳಿಗಳ ಅನ್ವಯ ಅವಿವಾಹಿತ ಪುತ್ರಿಗೆ ಕೌಟುಂಬಿಕ ಪಿಂಚಣಿ ಲಭ್ಯತೆ ಇದ್ದು ಅದನ್ನು ತನಗೆ ನೀಡಬೇಕು ಎನ್ನುವುದು ಅರ್ಜಿದಾರ ತೃತೀಯ ಲಿಂಗಿ ಮಹಿಳೆಯ ಕೋರಿಕೆಯಾಗಿತ್ತು.

ಎನ್‌ಎಎಲ್‌ಎಸ್‌ಎ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಆದೇಶ, ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ ಹಾಗೂ ನಾಗರಿಕ ಮತ್ತುರಾಜಕೀಯ ಹಕ್ಕುಗಳ ಅಂತರರಾಷ್ಟ್ರೀಯ ಒಪ್ಪಂದದ ನಿಬಂಧನೆಗಳಿಗೆ ಅನುಗುಣವಾಗಿ ಆರು ವಾರದೊಳಗೆ ಕೌಟುಂಬಿಕ ಪಿಂಚಣಿ ನೀಡಲು ಪ್ರಕ್ರಿಯೆ ಆರಂಭಿಸುವಂತೆ ನ್ಯಾಯಾಲಯ ಪ್ರಧಾನ ಅಕೌಂಟೆಂಟ್‌ ಜನರಲ್‌ಗೆ ನಿರ್ದೇಶಿಸಿತು