Kerala High Court and Transgender 
ಸುದ್ದಿಗಳು

ಕ್ರೀಡಾಕೂಟದಲ್ಲಿ ಇಚ್ಛೆಯ ವಿಭಾಗದಲ್ಲಿ ಭಾಗವಹಿಸುವ ಹಕ್ಕು ತೃತೀಯ ಲಿಂಗಿಗಳಿಗಿದೆ: ಕೇರಳ ಹೈಕೋರ್ಟ್‌

ಕ್ರೀಡಾಕೂಟದಲ್ಲಿ ಭಾಗವಹಿಸುವ ಹಕ್ಕು ಎಲ್ಲಾ ತೃತೀಯ ಲಿಂಗಿಗಳಿಗಿದೆ. ಪ್ರತ್ಯೇಕ ವಿಭಾಗ ಇಲ್ಲದಿರುವುದರಿಂದ ಅವರ ಇಚ್ಛೆಯ ಲಿಂಗತ್ವ ವಿಭಾಗದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಲು ತೃತೀಯ ಲಿಂಗಿಗಳಿಗೆ ಅನುಮತಿಸಬೇಕು ಎಂದು ಪೀಠ ಹೇಳಿದೆ.

Bar & Bench

ತೃತೀಯ ಲಿಂಗಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಲು ಪ್ರತ್ಯೇಕ ವಿಭಾಗ ಇಲ್ಲದಿರುವುದರಿಂದ ಅವರ ಇಚ್ಛೆಯ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಶುಕ್ರವಾರ ಕೇರಳ ಹೈಕೋರ್ಟ್‌ ಹೇಳಿದೆ.

ಜಿಲ್ಲಾ ಮಟ್ಟದ ಜೂಡೊ ಸ್ಪರ್ಧೆಯಲ್ಲಿ ಭಾಗವಹಿಸಲು ಸಂಘಟಕರು ಅನುಮತಿ ನಿರಾಕರಿಸಿದ್ದಾರೆ ಎಂದು ಆಕ್ಷೇಪಿಸಿ ತೃತೀಯ ಲಿಂಗಿ ಮಹಿಳೆ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ವಿ ಜಿ ಅರುಣ್‌ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

“ಎಲ್ಲಾ ತೃತೀಯ ಲಿಂಗಿಗಳು ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಸಮಾನ ಹಕ್ಕು ಹೊಂದಿದ್ದಾರೆ. ಪ್ರತ್ಯೇಕ ವಿಭಾಗ ಇಲ್ಲದಿರುವುದರಿಂದ ಅರ್ಜಿದಾರರು ಮಹಿಳೆ ವಿಭಾಗದಲ್ಲಿ ಸ್ಪರ್ಧಿಸಲು ಬಯಸಿದ್ದಾರೆ. ತೃತೀಯ ಲಿಂಗಿಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಸಂಘಟಕರು ವ್ಯವಸ್ಥೆ ಮಾಡದಿದ್ದರೆ ತನ್ನ ಆಯ್ಕೆಯ ವಿಭಾಗದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಲು ಅನುಮತಿಸಬೇಕು” ಎಂಬುದು ತಮ್ಮ ಖಚಿತ ಅಭಿಪ್ರಾಯವಾಗಿದೆ ಎಂದು ನ್ಯಾ. ಅರುಣ್‌ ಆದೇಶದಲ್ಲಿ ಹೇಳಿದ್ದಾರೆ.

ಅರ್ಜಿದಾರರ ಕೋರಿಕೆಯನ್ನು ಪರಿಗಣಿಸಿ ಆಕೆ ಸ್ಪರ್ಧೆಯಲ್ಲಿ ಭಾಗವಹಿಸಲು ತಾತ್ಕಾಲಿಕವಾಗಿ ಅನುಮತಿಸಬೇಕು. ಈ ಆದೇಶವು ಅರ್ಜಿಯ ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತದೆ ಎಂದು ಪೀಠವು ನಿರ್ದೇಶನ ನೀಡಿದೆ.