ಎಲ್ಜಿಬಿಟಿಕ್ಯೂ, ಮದ್ರಾಸ್ ಹೈಕೋರ್ಟ್  
ಸುದ್ದಿಗಳು

ತೃತೀಯ ಲಿಂಗಿಗಳಿಗೆ ಗುರುತಿನ ಚೀಟಿ, 5 ಮಂದಿ ಪೊಲೀಸ್‌ ಇಲಾಖೆಗೆ ನೇಮಕ: ಮದ್ರಾಸ್ ಹೈಕೋರ್ಟ್‌ಗೆ ಮಾಹಿತಿ

ತೃತೀಯ ಲಿಂಗಿ ವ್ಯಕ್ತಿಗಳನ್ನು ಗುರುತಿಸುವ ವ್ಯವಸ್ಥೆಯನ್ನು 2015ರಿಂದ ಅನುಸರಿಸುತ್ತಿದ್ದು ತಮ್ಮನ್ನು ಪುರುಷ, ಮಹಿಳೆ ಅಥವಾ ತೃತೀಯ ಲಿಂಗಿ ಎಂದು ನಿರ್ಬಂಧವಿಲ್ಲದೆ ಗುರುತಿಸಿಕೊಳ್ಳಲು ಅನುವು ಮಾಡಲಾಗಿದೆ ಎಂದು ಮಾಹಿತಿ ನೀಡಿದ ಸರ್ಕಾರ.

Bar & Bench

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಎನ್ಎಎಲ್ಎಸ್ಎ- ನಾಲ್ಸಾ) ಮತ್ತು ಭಾರತ ಒಕ್ಕೂಟ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ಐತಿಹಾಸಿಕ ತೀರ್ಪಿಗೆ ಅನುಗುಣವಾಗಿ, ತೃತೀಯ ಲಿಂಗಿ ಸಮುದಾಯಕ್ಕೆ ಮತ್ತು ತಮ್ಮನ್ನು ತೃತೀಯ ಲಿಂಗಿ ವರ್ಗಕ್ಕೆ ಸೇರಿದವರು ಎಂದು ಗುರುತಿಸಿಕೊಳ್ಳುವವರಿಗೆ ಕಲ್ಯಾಣ ಕ್ರಮಗಳನ್ನು ಜಾರಿಗೆ ತರುವಲ್ಲಿ ತಾನು ಮುಂದಿರುವುದಾಗಿ ತಮಿಳುನಾಡು ಸರ್ಕಾರ ಇತ್ತೀಚೆಗೆ ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ವಿ.ಗಂಗಾಪುರ್‌ವಾಲಾ ಮತ್ತು ಕೆ ಕೆ ರಾಮಕೃಷ್ಣನ್ ಅವರಿದ್ದ ಪೀಠಕ್ಕೆ ಈ ವಿಚಾರ ತಿಳಿಸಿರುವ ತಮಿಳುನಾಡು ಸರ್ಕಾರ ʼಅಧಿಕಾರಿಗಳು 7,547 ವ್ಯಕ್ತಿಗಳನ್ನು ತೃತೀಯ ಲಿಂಗಿ ವರ್ಗಕ್ಕೆ ಸೇರಿದವರು ಎಂದು ಗುರುತಿಸಿದ್ದು ಮತ್ತು 6,553 ಜನರಿಗೆ ಗುರುತಿನ ಚೀಟಿ ನೀಡಲಾಗಿದೆʼ ಎಂದಿದೆ. ತೃತೀಯ ಲಿಂಗಿ ವರ್ಗಕ್ಕೆ ಸೇರಿದ ಐವರನ್ನು ತಮಿಳುನಾಡು ಪೊಲೀಸ್‌ ಇಲಾಖೆಗೂ ನೇಮಕ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ.

ನಾಲ್ಸಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ 2014ರಲ್ಲಿ ನೀಡಿದ್ದ ತೀರ್ಪಿನಲ್ಲಿ ಒದಗಿಸಲಾಗಿದ್ದ ನಿರ್ದೇಶನಗಳನ್ನು ವಿಳಂಬವಿಲ್ಲದೆ ಜಾರಿಗೆ ತರಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯೆಯಾಗಿ ಸಲ್ಲಿಸಲಾದ ಪ್ರತಿ- ಅಫಿಡವಿಟ್‌ನಲ್ಲಿ ಈ ವಿವರ ಒದಗಿಸಲಾಗಿದೆ.

ತೃತೀಯ ಲಿಂಗಿ ವ್ಯಕ್ತಿಗಳನ್ನು ಗುರುತಿಸುವ ವ್ಯವಸ್ಥೆಯನ್ನು 2015ರಿಂದ ಅನುಸರಿಸುತ್ತಿದ್ದು ತಮ್ಮನ್ನು ಪುರುಷ, ಮಹಿಳೆ ಅಥವಾ ತೃತೀಯ ಲಿಂಗಿ ಎಂದು ನಿರ್ಬಂಧವಿಲ್ಲದೆ ಗುರುತಿಸಿಕೊಳ್ಳಲು ಅನುವು ಮಾಡಲಾಗಿದೆ ಎಂದು ಹೈಕೋರ್ಟ್‌ ಮಧುರೈ ಪೀಠಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ರಾಜ್ಯ ಸರ್ಕಾರದ ವಾದ ದಾಖಲಿಸಿಕೊಂಡ ನ್ಯಾಯಾಲಯ ಪ್ರಕರಣ ವಿಲೇವಾರಿ ಮಾಡಿದೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

S Muthu Kumar vs The Cabinet Secretary.pdf
Preview