Transgender persons 
ಸುದ್ದಿಗಳು

ಶಿಕ್ಷಣ, ಉದ್ಯೋಗದಲ್ಲಿ ತೃತೀಯಲಿಂಗಿಗಳಿಗೆ ಪ್ರತ್ಯೇಕ ಮೀಸಲಾತಿ ಬೇಡ: ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಅಫಿಡವಿಟ್‌

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಾಗೂ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳು ಅಥವಾ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದವರಾಗಿದ್ದರೆ ಮಾತ್ರ ತೃತೀಯಲಿಂಗಿಗಳು ಮೀಸಲಾತಿ ಸೌಲಭ್ಯ ಪಡೆಯಬಹುದು ಎಂದು ಸರ್ಕಾರ ಹೇಳಿದೆ.

Bar & Bench

ಜಾರಿಯಲ್ಲಿರುವ ಮೀಸಲಾತಿ ವ್ಯಾಪ್ತಿಗೆ ಒಳಪಟ್ಟಿದ್ದರೆ ಮಾತ್ರ ತೃತೀಯಲಿಂಗಿ ವ್ಯಕ್ತಿಗಳು ಮೀಸಲಾತಿ ಸೌಲಭ್ಯ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ನಾಲ್ಸಾ) ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ನಿರ್ದೇಶನಗಳನ್ನು ಪಾಲಿಸದಿರುವ ಹಿನ್ನೆಲೆಯಲ್ಲಿ ಸಲ್ಲಿಸಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಗೆ ಪ್ರತಿಕ್ರಿಯೆಯಾಗಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಕೇಂದ್ರ ಈ ಅಂಶವನ್ನು ವಿವರಿಸಿದೆ.

ಶಿಕ್ಷಣ ಅಥವಾ ಉದ್ಯೋಗದಲ್ಲಿ ತೃತೀಯಲಿಂಗಿಗಳಿಗೆ ಪ್ರತ್ಯೇಕ ಮೀಸಲಾತಿ ನೀಡುತ್ತಿಲ್ಲ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳು ಅಥವಾ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದವರಾಗಿದ್ದರೆ ಮಾತ್ರ  ತೃತೀಯಲಿಂಗಿಗಳು ಮೀಸಲಾತಿ ಸೌಲಭ್ಯ ಪಡೆಯಬಹುದು ಎಂದು ಸರ್ಕಾರ ಹೇಳಿದೆ.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ನಾಲ್ಸಾ) ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ತೃತೀಯಲಿಂಗಿ ವ್ಯಕ್ತಿಗಳನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ನಾಗರಿಕರೆಂದು ಪರಿಗಣಿಸಿ ಶಿಕ್ಷಣ ಹಾಗೂ ಸಾರ್ವಜನಿಕ ಉದ್ಯೋಗಗಳಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.

ನಾಲ್ಸಾ ತೀರ್ಪಿನಲ್ಲಿ ನೀಡಲಾಗಿದ್ದ ನಿರ್ದೇಶನಗಳನ್ನು ಪಾಲಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿ ತೃತೀಯ ಲಿಂಗಿ ವ್ಯಕ್ತಿಗಳ ಗುಂಪೊಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮಾರ್ಚ್‌ನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿತ್ತು.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮೂಲಕ ಸಲ್ಲಿಸಲಾಗಿರುವ ಪ್ರಸ್ತುತ ಅಫಿಡವಿಟ್‌ನಲ್ಲಿ, 2014ರ ತೀರ್ಪಿನ ನಂತರ, ಕೇಂದ್ರ ಸರ್ಕಾರ ತೃತೀಯಲಿಂಗಿ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅವರು ಗೌರವಯುತ ಬದುಕುವಂತಾಗಲು, ರಾಷ್ಟ್ರೀಯ ಪೋರ್ಟಲ್, ರಾಷ್ಟ್ರೀಯ ಮಂಡಳಿ ರಚನೆಯಂತಹ  ಹಲವು ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 18ರಂದು ನಡೆಯಲಿದ್ದು ನಾಲ್ಸಾ ತೀರ್ಪನ್ನು ಪಾಲಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೈಗೊಂಡ ಕ್ರಮ ಪರಿಶೀಲನೆಗೆ ಸರ್ವೋಚ್ಚ ನ್ಯಾಯಾಲಯ ನಿರ್ಧರಿಸಿದೆ.