Vikram Simha
Vikram Simha 
ಸುದ್ದಿಗಳು

ಮರ ಕಡಿದ ಪ್ರಕರಣ: ಸಂಸದ ಪ್ರತಾಸ್‌ ಸಿಂಹ ಸಹೋದರ ವಿಕ್ರಮ್‌ಗೆ ಬೇಲೂರು ನ್ಯಾಯಾಲಯದಿಂದ ಜಾಮೀನು ಮಂಜೂರು

Bar & Bench

ಹಾಸನ ಜಿಲ್ಲೆಯ ನಂದಗೋಡನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಅಕ್ರಮವಾಗಿ 126 ಮರಗಳನ್ನು ಕಡಿದ ಆರೋಪಕ್ಕೆ ಸಂಬಂಧಿಸಿದಂತೆ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಸಹೋದರ ವಿಕ್ರಮ್‌ ಸಿಂಹ ಅವರಿಗೆ ಭಾನುವಾರ ಬೇಲೂರಿನ ಹಿರಿಯ ಸಿವಿಲ್‌ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ವಿಕ್ರಮ್‌ ಪರವಾಗಿ ವಕೀಲರಾದ ಚಂದ್ರೇಗೌಡ ಮತ್ತು ಧರ್ಮೇಗೌಡ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ತಮ್ಮ ನಿವಾಸದಲ್ಲಿ ಬೇಲೂರಿನ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಪ್ರಕಾಶ್‌ ನಾಯಕ್‌ ಅವರು ನಡೆಸಿ, ಜಾಮೀನು ಮಂಜೂರು ಮಾಡಿದರು.

ಮರಗಳ್ಳತನ ಆರೋಪದ ಮೇಲೆ ಬೇಲೂರು ತಹಶೀಲ್ದಾರ್‌ ಮಮತಾ ಅವರು ಸಲ್ಲಿಸಿದ್ದ ದೂರಿನ ಆಧಾರದಲ್ಲಿ ರಾಕೇಶ್‌ ಶೆಟ್ಟಿ, ಜಯಮ್ಮ, ರವಿ ಮತ್ತು ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು.

ನಂದಗೋಡನಹಳ್ಳಿಯ ಸರ್ವೆ ನಂಬರ್‌ 16/ಪಿ2ನಲ್ಲಿ 3 ಎಕರೆ 17 ಗುಂಟೆ ಜಮೀನನ್ನು ಶುಂಠಿ ಬೆಳೆಯುವುದಕ್ಕಾಗಿ ವಿಕ್ರಮ್‌ ಸಿಂಹ ಲೀಸ್‌ಗೆ ಪಡೆದಿದ್ದರು. ನಂತರ 3 ಎಕರೆ 17 ಗುಂಟೆ ಜಮೀನು ಸೇರಿದಂತೆ ಸುತ್ತಲಿನ 10 ಎಕರೆ ಸರ್ಕಾರ ಗೋಮಾಳ ಜಾಗದಲ್ಲಿ 126 ಮರಗಳನ್ನು ಕಡಿದು ಹಾಕಲಾಗಿತ್ತು. ವಿಕ್ರಮ್‌ ಸಿಂಹ ಅವರೇ ಮರಗಳನ್ನು ಕಡಿದು ಸಾಗಿಸಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಅರಣ್ಯ ಇಲಾಖೆಯ ತನಿಖಾಧಿಕಾರಿಗಳು ವಿಕ್ರಮ್‌ಗೆ ನೋಟಿಸ್‌ ನೀಡಿದ್ದರು. ವಿಚಾರಣೆಗೆ ಅನುಮತಿ ಕೋರಿ ಬೇಲೂರು ಜೆಎಂಎಫ್‌ಸಿ ನ್ಯಾಯಾಲಯಕ್ಕೂ ಅರ್ಜಿ ಸಲ್ಲಿಸಲಾಗಿತ್ತು. ಈ ನಡುವೆ, ವಿಕ್ರಮ್‌ ಅವರನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆಯಲಾಗಿತ್ತು.