ಸುದ್ದಿಗಳು

ನ್ಯಾಯಾಧೀಶರು ಸುಳ್ಳು ಸಾಕ್ಷಿ ವಿರುದ್ಧ ಕ್ರಮ ಕೈಗೊಳ್ಳದೆ ಇದ್ದರೆ ನ್ಯಾಯಾಂಗ ಅಪ್ರಸ್ತುತವಾಗಲಿದೆ: ಮೇಘಾಲಯ ಹೈಕೋರ್ಟ್

ಭಾರತೀಯ ನ್ಯಾಯಾಧೀಶರು ದಾವೆದಾರರು ಮತ್ತು ಸಾಕ್ಷಿಗಳೊಂದಿಗೆ ಗಂಭೀರವಾಗಿ ನಡೆದುಕೊಳ್ಳದೇ ಇದ್ದರೆ ಸುಳ್ಳು ಸಾಕ್ಷ್ಯ ನೀಡುವ ಈಗಿನ ಪ್ರವೃತ್ತಿ ಒಂದು ದಿನ ನ್ಯಾಯಾಂಗವನ್ನು ಅಪ್ರಸ್ತುತಗೊಳಿಸಬಹುದು ಎಂದಿದೆ ಪೀಠ.

Bar & Bench

ಕ್ರಿಮಿನಲ್ ಮೊಕದ್ದಮೆಗಳಲ್ಲಿ ಸುಳ್ಳು ಸಾಕ್ಷ್ಯ ನೀಡುವ ದಾವೆದಾರರು ಮತ್ತು ಸಾಕ್ಷಿಗಳ ವಿರುದ್ಧ ಗಂಭೀರ ಕ್ರಮ ಕೈಗೊಳ್ಳುವಂತೆ ಮೇಘಾಲಯ ಹೈಕೋರ್ಟ್ ಇತ್ತೀಚೆಗೆ ವಿಚಾರಣಾ ನ್ಯಾಯಾಲಯಗಳಿಗೆ ಕರೆ ನೀಡಿದೆ. [ಕಿಂಗ್ ವಿಕ್ಟರ್ ಚಿ ಮರಕ್ ಮತ್ತು ಮೇಘಾಲಯ ಹೈಕೋರ್ಟ್‌ ನಡುವಣ ಪ್ರಕರಣ].

ಸಾಕ್ಷ್ಯವನ್ನು ನಂಬದೆ ಇರಲು ಸೂಕ್ತ ಆಧಾರಗಳಿದ್ದಾಗ ವಿಚಾರಣಾ ನ್ಯಾಯಾಲಯಗಳು ಸುಳ್ಳು ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಡಬ್ಲ್ಯೂ. ಡಿಯೆಂಗ್‌ಡೋ ಅವರಿದ್ದ ಪೀಠ ತಿಳಿಸಿತು.

" ಅಸಮರ್ಥನೀಯ ಆಧಾರದ ಮೇಲೆ ವಿಚಾರಣಾ ನ್ಯಾಯಾಲಯ ವ್ಯಕ್ತಿಯ ಸಾಕ್ಷ್ಯ ನಂಬದೆ ಹೋದರೆ, ಸುಳ್ಳುಸಾಕ್ಷಿ ನೀಡಿದ್ದಕ್ಕಾಗಿ ಕ್ರಮಕೈಗೊಳ್ಳಬೇಕು. ದಾವೆದಾರರು ಮತ್ತು ಸಾಕ್ಷಿಗಳೊಂದಿಗೆ ಭಾರತೀಯ ನ್ಯಾಯಾಧೀಶರು ಗಂಭೀರವಾಗಿ ನಡೆದುಕೊಳ್ಳದೇ ಇದ್ದರೆ ಸುಳ್ಳು ಅಫಿಡವಿಟ್‌ ಸಲ್ಲಿಸುವ ಮತ್ತು ಸುಳ್ಳು ಪುರಾವೆಗಳನ್ನು ನೀಡುವ ಈಗಿನ ಪ್ರವೃತ್ತಿ ಒಂದು ದಿನ ನ್ಯಾಯಾಂಗವನ್ನು ಅಪ್ರಸ್ತುತಗೊಳಿಸಬಹುದು” ಎಂದು ಜೂನ್ 8ರಂದು ನೀಡಿದ ತೀರ್ಪಿನಲ್ಲಿ ಹೈಕೋರ್ಟ್ ಹೇಳಿದೆ.

2014ರಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಗೊಳಗಾದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸುವ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಐಪಿಸಿ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗೆ ಜುಲೈ 2022ರಲ್ಲಿ, 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿತ್ತು. ಕುಟುಂಬಗಳ ನಡುವಿನ ಆಸ್ತಿ ವಿವಾದದಿಂದ ಅತ್ಯಾಚಾರ ಆರೋಪ ಮಾಡಲಾಗಿದೆ ಎಂಬುದು ಅರ್ಜಿದಾರರ ಪರ ವಕೀಲರ ವಾದವಾಗಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದ ವಿಚಾರಣಾ ನ್ಯಾಯಾಲಯ ಈ ವಾದವನ್ನು ವಜಾಗೊಳಿಸಿತ್ತು.

ತನ್ನ ಮಗನನ್ನು ರಕ್ಷಿಸುವ ಹತಾಶ ಯತ್ನದಲ್ಲಿ ತಾಯಿ ಈ ಕತೆ ಕಟ್ಟಿದ್ದಾರೆ ಎಂಬುದನ್ನು ಗಮನಿಸಿದ ಹೈಕೋರ್ಟ್‌ ವಿಚಾರಣಾ ನ್ಯಾಯಾಲಯದ ನಿಲುವನ್ನು ಒಪ್ಪಿತು. ಪ್ರಕರಣದ ಮತ್ತೋರ್ವ ಪ್ರತಿವಾದ ಸಾಕ್ಷಿಯಾಗಿರುವ ಅಪರಾಧಿಯ ಸೋದರ ಸಂಬಂಧಿ ನೀಡಿರುವ ಸಾಕ್ಷಿ ವಿಶ್ವಾಸ ಮೂಡಿಸುವುದಿಲ್ಲ  ಎಂದ ನ್ಯಾಯಾಲಯ ಮೇಲ್ಮನವಿದಾರರಿಗೆ ವಿಧಿಸಲಾಗಿದ್ದ ಶಿಕ್ಷೆ ಎತ್ತಿ ಹಿಡಿದು ಅರ್ಜಿಯನ್ನು ವಜಾಗೊಳಿಸಿತು.