Sexual Assault 
ಸುದ್ದಿಗಳು

[ಫೋಕ್ಸೋ ಪ್ರಕರಣ] ಆರೋಪಿಯ ಬೆಂಬಲಿಸಿದ ಸಂತ್ರಸ್ತೆ, ಪ್ರಾಸಿಕ್ಯೂಷನ್‌ಗೆ ಮುಖಭಂಗ; ಸಂತ್ರಸ್ತೆ ಮೇಲೆ ಕ್ರಮಕ್ಕೆ ಸೂಚನೆ

ಸಾಮಾಜಿಕ ಸಂಕೀರ್ಣತೆಗಳಿಗೆ ಕನ್ನಡಿ ಹಿಡಿಯುವ ಪ್ರಕರಣ ಇದಾಗಿದೆ. ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ ಸಲ್ಲಿಸಿದ ಜನನ ಪ್ರಮಾಣ ಪತ್ರವನ್ನು ಖುದ್ದು ಸಂತ್ರಸ್ತೆಯೇ ಒಪ್ಪಿಲ್ಲ. ಆಕೆ ಅಪ್ರಾಪ್ತೆ ಎನ್ನುವ ವಾದವನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ.

Bar & Bench

ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸುವ ಕಾಯಿದೆ (ಪೋಕ್ಸೋ) ಅಡಿ ರಚಿಸಲಾದ ಮುಂಬೈನ ದಿಂಡೋಶಿಯ ವಿಶೇಷ ನ್ಯಾಯಾಲಯವೊಂದು ಇತ್ತೀಚೆಗೆ ಪೋಕ್ಸೋ ಪ್ರಕರಣವೊಂದರಲ್ಲಿ ಆರೋಪಿ ವ್ಯಕ್ತಿಯನ್ನು ಆರೋಪಗಳಿಂದ ಮುಕ್ತಮಾಡಿದೆ.

ಅರೋಪಿಯ ವಿರುದ್ಧ ಅಪ್ರಾಪ್ತ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ ಆಪಾದನೆಯನ್ನು ಫಿರ್ಯಾದಿ ಪಕ್ಷ (ಪ್ರಾಸಿಕ್ಯೂಷನ್‌) ಹೊರಿಸಿತ್ತು. ಆದರೆ, ಸ್ವತಃ ಸಂತ್ರಸ್ತೆಯೇ ತಾನು ಆರೋಪಿಯ ವಿರುದ್ಧ ಕ್ರಮಕ್ಕೆ ಮುಂದಾಗಲು ಬಯಸುವುದಿಲ್ಲ ಎಂದು ತಿಳಿಸಿದ ನಂತರ ಆರೋಪಿಯನ್ನು ನ್ಯಾಯಾಲಯವು ಆಪಾದನೆಗಳಿಂದ ಮುಕ್ತಗೊಳಿಸಿತು.

ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಚ್‌ ಸಿ ಶೆಂಡೆ ಅವರು ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ ಫಿರ್ಯಾದಿ ಪಕ್ಷಕ್ಕೆ ಸಂತ್ರಸ್ತೆಯೇ ಪ್ರಮುಖ ಸಾಕ್ಷಿಯಾಗಿರುತ್ತಾರೆ, “ಆರೋಪಿಗೆ ಶಿಕ್ಷೆ ವಿಧಿಸಲು ಸಂತ್ರಸ್ತೆಯ ನಂಬಲರ್ಹ ಹೇಳಿಕೆಯೊಂದನ್ನೇ ಅವಲಂಬಿಸಬಹುದಾಗಿದೆ” ಎಂದರು.

ಆದರೆ, ಪ್ರಸಕ್ತ ಪ್ರಕರಣದಲ್ಲಿ ಅತ್ಯಾಚಾರವನ್ನು ಎಸಗಲಾಗಿದೆ ಎನ್ನುವ ಪ್ರಾಸಿಕ್ಯೂಷನ್‌ ವಾದವನ್ನು ಸಂತ್ರಸ್ತೆಯು ಒಪ್ಪುತ್ತಿಲ್ಲ. “ಹೀಗಿರುವಾಗ, ಸಂತ್ರಸ್ತ ಹುಡುಗಿಯ ಮೇಲೆ ಆರೋಪಿಯು ಅತ್ಯಾಚಾರ ಅಥವಾ ಕೂಡುವಂತಹ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಒಪ್ಪುವುದು ಅಸುರಕ್ಷಿತ ಮತ್ತು ಅನ್ಯಾಯುತ ಮಾತ್ರವೇ ಅಲ್ಲದೆ ಕಾನೂನುಬಾಹಿರವೂ ಆಗುತ್ತದೆ” ಎಂದು ಪೀಠವು ಅಭಿಪ್ರಾಯಪಟ್ಟಿತು. ಪ್ರಕರಣದಲ್ಲಿ ಆರೋಪಿಯ ವಿರುದ್ಧದ ಆಪಾದನೆಯನ್ನು ಸಾಬೀತು ಪಡಿಸುವಂತಹ ಯಾವುದೇ ಅಧಿಕೃತ ಸಂಗತಿಗಳು ದೊರೆತಿಲ್ಲ ಎಂದು ಹೇಳಿದ ನ್ಯಾಯಾಲಯವು ಆರೋಪಿಯನ್ನು ಅಪಾದನೆಯಿಂದ ಮುಕ್ತಗೊಳಿಸಿತು. ಇದೇ ವೇಳೆ, ತಮ್ಮ ಪ್ರಕರಣವನ್ನು ಸಮರ್ಥಿಸದ ಸಂತ್ರಸ್ತೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನ್ಯಾಯಾಧೀಶರು ಪ್ರಾಸಿಕ್ಯೂಷನ್‌ಗೆ ನಿರ್ದೇಶನ ನೀಡಿದರು.

ಪ್ರಕರಣದ ಹಿನ್ನೆಲೆ:

ಸಂತ್ರಸ್ತ ಯುವತಿಯು 2019ರಲ್ಲಿ ಆರೋಪಿಯನ್ನು ಭೇಟಿ ಮಾಡಿದ್ದಳು. ಆಗ ಆಕೆ ಹದಿನೇಳು ವರ್ಷ ವಯೋಮಾನದವಳಾಗಿದ್ದಳು. ಕೆಲ ಭೇಟಿಗಳು, ಸ್ನೇಹದ ನಂತರ ಆರೋಪಿಯು ಆಕೆಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದ. ಆಕೆಯನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿದ್ದ. ಆನಂತರ ಜೋಡಿಯ ನಡುವೆ ದೈಹಿಕ ಸಂಪರ್ಕ ಏರ್ಪಟ್ಟಿತ್ತು. 2019ರ ಮಾರ್ಚ್‌ನಲ್ಲಿ ಸಂತ್ರಸ್ತೆಯು ಋತುಮತಿಯಾಗಿರಲಿಲ್ಲ. ಇದಕ್ಕೆ ಬಹುಶಃ ತನಗಿರುವ ಜಾಂಡೀಸ್‌ ಕಾಯಿಲೆಯು ಕಾರಣವಿರಬೇಕು ಎಂದು ಆಕೆ ಭಾವಿಸಿದಳು. ಮುಂದೆ ಜೂನ್‌ನಲ್ಲಿ ಅಕೆಗೆ ತಾನು 24 ವಾರದ ಗರ್ಭಿಣಿಯಾಗಿರುವುದು ದೃಢಪಟ್ಟಿತು.

ಈ ವೇಳೆ ಸಂತ್ರಸ್ತೆಯ ತಾಯಿಯು ಆರೋಪಿಯ ವಿರುದ್ಧ ಸಾಂತಾಕ್ರೂಜ್‌ನ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದರು. ಆದರೆ, ಆರೋಪಿಯು ತನ್ನನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ. ತನ್ನ ಮತ್ತು ಸಂತ್ರಸ್ತೆಯ ನಡುವಿನ ಮನಸ್ತಾಪವನ್ನು ತಪ್ಪಾಗಿ ಬಳಸಿಕೊಳ್ಳಲಾಗಿದೆ. ತಾವಿಬ್ಬರೂ ಮದುವೆಯಾಗಿದ್ದು ತಮ್ಮ ಮಗುವಿನೊಟ್ಟಿಗೆ ಸಂತಸದಿಂದ ಇದ್ದೇವೆ ಎಂದು ಹೇಳಿಕೆ ನೀಡಿದ್ದರು.

ಮುಂದೆ ಸಂತ್ರಸ್ತ ಯುವತಿಯೂ ಸಹ ತಾನು ದೂರು ದಾಖಲಿಸಲು ಪೊಲೀಸ್‌ ಠಾಣೆಗೆ ಹೋಗಿರಲಿಲ್ಲ. ತಾನು ಆರೋಪಿಯನ್ನು 2019ರ ಅಕ್ಟೋಬರ್‌ನಲ್ಲಿ ಮದುವೆಯಾಗಿರುವುದಾಗಿ ಹೇಳಿದಳು. ಆರೋಪಿಯ ವಿರುದ್ಧ ತನಗೆ ಯಾವುದೇ ದೂರುಗಳಿಲ್ಲ. ತಾನು ಆತನ ವಿರುದ್ಧ ಕ್ರಮಕ್ಕೆ ಮುಂದಾಗಲು ಬಯಸುವುದಿಲ್ಲ ಎಂದು ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿದಳು.

ಘಟನೆ ವೇಳೆ ಯುವತಿ ಅಪ್ರಾಪ್ತೆಯಾಗಿದ್ದಳು ಎನ್ನುವುದಕ್ಕೆ ಪ್ರಾಸಿಕ್ಯೂಷನ್‌ ಆಕೆಯ ಜನನ ಪ್ರಮಾಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಆದರೆ, ಅದನ್ನು ಪ್ರಕರಣದ ಪ್ರಮುಖ ಸಾಕ್ಷಿಯಾದ ಸಂತ್ರಸ್ತೆಯೇ ಒಪ್ಪಿರಲಿಲ್ಲ. ಇದನ್ನು ಪರಿಗಣಿಸಿದ ನ್ಯಾಯಾಲಯವು, "ಘಟನೆಯ ವೇಳೆ ಸಂತ್ರಸ್ತೆಯು ಅಪ್ರಾಪ್ತೆಯಾಗಿದ್ದಳು ಎನ್ನುವುದನ್ನು ನಿರೂಪಿಸಲು ಸಲ್ಲಿಸಲಾಗಿರುವ ಆ ಜನನ ಪ್ರಮಾಣ ಪತ್ರವನ್ನು ಸ್ವತಃ ಸಂತ್ರಸ್ತೆಯೇ ನಿರಾಕರಿಸುವಾಗ ಅದನ್ನು ಪೂರ್ಣ ಪ್ರಮಾಣದ ಸಾಕ್ಷ್ಯವಾಗಿ ಪರಿಗಣಿಸಲು ಸಾಧ್ಯವಿಲ್ಲ" ಎಂದು ಹೇಳಿತು.

ಅಲ್ಲದೆ, ಸಂತ್ರಸ್ತೆಯು ಘಟನೆ ವೇಳೆ ಅಪ್ರಾಪ್ತೆಯಾಗಿದ್ದಳು ಎನ್ನುವುದನ್ನು ಶಂಕೆಗೆ ಆಸ್ಪದವಿಲ್ಲದಂತೆ ನಿರೂಪಿಸುವಲ್ಲಿ ಪ್ರಾಸಿಕ್ಯೂಷನ್ ಸೋತಿದೆ. ಈ ಕಾರಣದಿಂದಾಗಿ ಪ್ರಕರಣದಲ್ಲಿ ಪೋಕ್ಸೋ ಕಾಯಿದೆಯನ್ನು ಅನ್ವಯಿಸಲಾಗದು ಎಂದು ನ್ಯಾಯಾಲಯವು ಹೇಳಿತು. ಮುಂದುವರೆದು, ತನ್ನ ವಾದವನ್ನು ಬೆಂಬಲಿಸದ ಸಂತ್ರಸ್ತೆಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವಂತೆ ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಿತು.