ದೋಷಿಗೆ ಕ್ಷಮಾಪಣೆಗೆ ಅವಕಾಶವಾಗದಂಥ ‘ಬದುಕಿರುವವರೆಗೂ’ ಜೀವಾವಧಿ ಶಿಕ್ಷೆ ಎಂಬ ವಿಶೇಷ ವಿಭಾಗದ ಶಿಕ್ಷೆಯನ್ನು ವಿಚಾರಣಾಧೀನ ನ್ಯಾಯಾಲಯಗಳು ವಿಧಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಪುನರುಚ್ಚರಿಸಿದೆ [ಹರೀಶ್ ವರ್ಸಸ್ ಕರ್ನಾಟಕ ರಾಜ್ಯ].
ಪ್ರೇಯಸಿಯ ಪತಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ದೋಷಿ ಎಂದು ಘೋಷಿತನಾಗಿ ಶಿಕ್ಷೆಗೆ ಗುರಿಯಾಗಿದ್ದಾತ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ಕೆ ರಾಜೇಶ್ ರೈ ಅವರ ನೇತೃತ್ವದ ವಿಭಾಗೀಯ ಪೀಠವು ಭಾಗಶಃ ಪುರಸ್ಕರಿಸಿದೆ. ಆರೋಪಿಯನ್ನು ದೋಷಿ ಎಂದು ಘೋಷಿಸಿದ್ದ ವಿಚಾರಣಾಧೀನ ನ್ಯಾಯಾಲಯವು ಆತ ಬದುಕಿರುವವರೆಗೂ ಜೀವಾವಧಿ ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿತ್ತು.
ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿಗಳ ಕ್ಷಮಾಪಣೆಗೆ ಸಂಬಂಧಿಸಿದ ಭಾರತ ಸರ್ಕಾರ ವರ್ಸಸ್ ವಿ ಶ್ರೀಹರನ್ ಅಲಿಯಾಸ್ ಮುರುಗನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ನ್ಯಾಯಾಲಯ ಉಲ್ಲೇಖಿಸಿದೆ. ಘೋರ ಅಪರಾಧಗಳ ಹೆಚ್ಚಳದ ಹಿನ್ನೆಲೆಯಲ್ಲಿ ಪ್ರಕರಣಗಳ ಇತ್ಯರ್ಥ ವಿಳಂಬವಾಗುತ್ತಿರುವುದು ಮತ್ತು ಸಂತ್ರಸ್ತರ ಹಿತಾಸಕ್ತಿಯಿಂದ ಕೆಲವು ಸಂದರ್ಭದಲ್ಲಿ ವಿಶೇಷ ವಿಭಾಗದ ಶಿಕ್ಷೆಯು ಅಗತ್ಯವಾಗಿದೆ ಎಂದು ಆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ ಎಂದು ವಿವರಿಸಲಾಗಿದೆ.
“ಇಂಥ ವಿಶೇಷ ವಿಭಾಗದ ಶಿಕ್ಷೆಯನ್ನು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮಾತ್ರ ವಿಧಿಸಬಹುದೇ ವಿನಾ ವಿಚಾರಣಾಧೀನ ನ್ಯಾಯಾಲಯವಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ” ಎಂದು ಹೈಕೋರ್ಟ್ ವಿವರಿಸಿದೆ.
ಮೇಲ್ಮನವಿ ವಿಚಾರಣೆ ನಡೆಸಿರುವ ಹೈಕೋರ್ಟ್ ಆರೋಪಿಗೆ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿದ್ದು, ಬದುಕಿರುವವರೆಗೂ ಶಿಕ್ಷೆ ಅನುಭವಿಸಬೇಕು ಎಂಬ ಸತ್ರ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಿದೆ. ಈ ಮೂಲಕ ವಿಚಾರಣಾಧೀನ ನ್ಯಾಯಾಲಯ ಅಂಥ ವಿಶೇಷ ವಿಭಾಗದ ಶಿಕ್ಷೆ ವಿಧಿಸಲಾಗದು ಎಂದಿದೆ.
“ಅಂಥ ಸಂದರ್ಭದಲ್ಲಿ ಒಂದನೇ ಆರೋಪಿ ಬದುಕಿರುವವರೆಗೂ ಜೀವಾವಧಿ ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸುವ ಅಧಿಕಾರವನ್ನು ಸತ್ರ ನ್ಯಾಯಾಲಯ ಚಲಾಯಿಸಲಾಗದು. ಈ ವಿಚಾರದಲ್ಲಿ ಸತ್ರ ನ್ಯಾಯಾಧೀಶರು ಪ್ರಮಾದ ಎಸಗಿದ್ದಾರೆ” ಎಂದು ಹೈಕೋರ್ಟ್ ಹೇಳಿದೆ.
ಹಾಲಿ ಪ್ರಕರಣವು ವಿಶೇಷ ವಿಭಾಗದ ಶಿಕ್ಷೆ ವಿಧಿಸುವಂಥ ವಿರಳಾತಿವಿರಳ ಪ್ರಕರಣವೇನಲ್ಲ ಎಂದಿರುವ ಹೈಕೋರ್ಟ್, ಬದುಕಿರುವವರೆಗೂ ಜೀವಾವಧಿ ಶಿಕ್ಷೆ ಅನುಭವಿಸಬೇಕು ಎಂಬುದನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಡಿಸಿದೆ (ಇದರಿಂದ 14 ವರ್ಷದ ಬಳಿಕ ದೋಷಿಯನ್ನು ಸನ್ನಡತೆಯ ಮೇಲೆ ಬಿಡುಗಡೆ ಮಾಡುವ ಸಾಧ್ಯತೆ ಇರುತ್ತದೆ).
ಇದೇ ತೀರ್ಪಿನಲ್ಲಿ ಶವವನ್ನು ಸ್ಥಳಾಂತರಿಸಲು ಸಹಕರಿಸಿದ ಆರೋಪದ ಮೇಲೆ ಸಹ ಆರೋಪಿಯಾಗಿದ್ದಾತನನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ.
ಪ್ರಧಾನ ಆರೋಪಿಯನ್ನು ವಕೀಲ ವೀರಣ್ಣ ತಿಗಡಿ, ಸಹ ಆರೋಪಿಯನ್ನು ವಕೀಲರಾದ ಬುದುರುನ್ನೀಸಾ ಪ್ರತಿನಿಧಿಸಿದ್ದರು. ರಾಜ್ಯ ಸರ್ಕಾರವನ್ನು ವಿಶೇಷ ಸರ್ಕಾರಿ ಅಭಿಯೋಜಕ-2 ಆದ ವಿಜಯಕುಮಾರ್ ಮಜಗೆ ಪ್ರತಿನಿಧಿಸಿದ್ದರು.