Praful Patel, ED logo  Praful Patel (Facebook)
ಸುದ್ದಿಗಳು

ಪ್ರಫುಲ್ ಪಟೇಲ್ ಆಸ್ತಿ ಮುಟ್ಟುಗೋಲು: ಇ ಡಿ ಆದೇಶ ರದ್ದುಗೊಳಿಸಿದ ಮೇಲ್ಮನವಿ ನ್ಯಾಯಮಂಡಳಿ

Bar & Bench

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಅಜಿತ್ ಪವಾರ್ ಬಣ) ನಾಯಕ ಪ್ರಫುಲ್ ಪಟೇಲ್, ಅವರ ಪತ್ನಿ ವರ್ಷಾ ಪಟೇಲ್ ಹಾಗೂ ಅವರ ಕಂಪನಿಯಾದ ಮುಂಬೈನಲ್ಲಿರುವ ಮಿಲೇನಿಯಮ್ ಡೆವಲಪರ್ಸ್‌ಗೆ ಸೇರಿದ ಏಳು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ನಿರ್ಧಾರವನ್ನು ದೆಹಲಿಯ ಮೇಲ್ಮನವಿ ನ್ಯಾಯಮಂಡಳಿ ಈಚೆಗೆ ಬದಿಗೆ ಸರಿಸಿದೆ.

ಮಾದಕವಸ್ತು ದೊರೆ ದಿವಂಗತ ಇಕ್ಬಾಲ್‌ ಮಿರ್ಚಿ ಪತ್ನಿಯಿಂದ ಆಸ್ತಿ ಖರೀದಿಸಿದ ಆರೋಪದ ಮೇಲೆ ಮುಂಬೈನ ವಾರ್ಲಿಯಲ್ಲಿರುವ ಸೀಜೆ ಹೌಸ್ ಅಪಾರ್ಟ್‌ಮೆಂಟ್‌ನ ಅಂದಾಜು ₹180 ಕೋಟಿ ಮೌಲ್ಯದ ಏಳು ಫ್ಲಾಟ್‌ಗಳನ್ನು 2022 ರಲ್ಲಿ ಇ ಡಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿತ್ತು.

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯ ಜನವರಿ 5, 2023 ರಂದು ಈ ತಾತ್ಕಾಲಿಕ ಮುಟ್ಟುಗೋಲನ್ನು ಎತ್ತಿಹಿಡಿದಿತ್ತು. ಈ ಆದೇಶವನ್ನು ಪಟೇಲ್‌ ದಂಪತಿ ಕಳ್ಳಸಾಗಾಣಿಕೆದಾರರು ಮತ್ತು ವಿದೇಶಿ ವಿನಿಮಯ ವಂಚಕರ (ಆಸ್ತಿ ಮುಟ್ಟುಗೋಲು) ಕಾಯಿದೆ (SAFEMA) ಅಡಿಯಲ್ಲಿ ರೂಪಿಸಲಾದ ದೆಹಲಿಯ ಮೇಲ್ಮನವಿ ನ್ಯಾಯಮಂಡಳಿಯ ಎದುರು ಪಟೇಲ್‌ ದಂಪತಿ ಈ ನಿರ್ಧಾರವನ್ನು  ಪ್ರಶ್ನಿಸಿದ್ದರು. ಜೂನ್‌  3ರಂದು ಈ ಮುಟ್ಟುಗೋಲು ಆದೇಶವನ್ನು ಅದು ರದ್ದುಗೊಳಿಸಿದೆ.

ಇ ಡಿಯ ಕ್ರಮ ಕಿರುಕುಳಕ್ಕೆ ಸಮನಾಗಿದ್ದು ರಹಸ್ಯ ಉದ್ದೇಶಗಳನ್ನು ಸೂಚಿಸುತ್ತದೆ. ಇ ಡಿ ತನ್ನ ಜಾರಿ ಪ್ರಕರಣ ಮಾಹಿತಿ ವರದಿ (ಇಸಿಐಆರ್) ಪ್ರಕಾರ ದಾಖಲಿಸಿದ ಎಫ್‌ಐಆರ್‌ನಲ್ಲಿ ಪಟೇಲ್ ಅಥವಾ ಅವರ ಕಂಪನಿಯನ್ನು ಹೆಸರಿಸಲಾಗಿಲ್ಲ. ಅಪರಾಧದಲ್ಲಿ ಪ್ರಫುಲ್‌ ದಂಪತಿಯ ನಂಟಿದೆ ಎಂಬುದನ್ನು ಸಾಬೀತುಪಡಿಸುವ ಯಾವ ವಿಚಾರವನ್ನೂ ದಾಖಲೆಯಲ್ಲಿ ಒದಗಿಸಿಲ್ಲ ಎಂದು  ನ್ಯಾಯಮಂಡಳಿ ಹೇಳಿದೆ.