ಚುನಾವಣಾ ಆಯೋಗವು ವಿದ್ಯುನ್ಮಾನ ರೂಪದಲ್ಲಿ ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳಿಗೆ ಅನುಮತಿಸಬೇಕು ಎಂದು ಗುರುವಾರ ತ್ರಿಪುರ ಹೈಕೋರ್ಟ್ ಹೇಳಿದೆ.
ಚುನಾವಣೆಯ ಸಾಚಾತನ ಕಾಪಾಡುವ ಚುನಾವಣಾ ಆಯೋಗದ ಶಾಸನಬದ್ಧ ಕರ್ತವ್ಯ ನಿಭಾಯಿಸುವ ನಿಟ್ಟಿನಲ್ಲಿ ಉಮೇದುವಾರಿಕೆಯನ್ನು ಆನ್‌ಲೈನ್ ಮೂಲಕ ಸಲ್ಲಿಸುವುದು ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ನ್ಯಾಯಮೂರ್ತಿಗಳಾದ ಅರಿಂದಮ್ ಲೋಧ್ ಮತ್ತು ಎಸ್ ಡಿ ಪುರಕಾಯಸ್ಥ ಅವರ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿದೆ.
“ಡಿಜಿಟಲ್ ತಂತ್ರಜ್ಞಾನದಲ್ಲಿ ಭಾರಿ ಸುಧಾರಣೆಯ ಜೊತೆಗೆ ರಾಜಕಾರಣದಲ್ಲಿ ಅಪರಾಧೀಕರಣ ಹೆಚ್ಚಾಗುತ್ತಿದೆ. ಹೀಗಾಗಿ, ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳು ವಿದ್ಯುನ್ಮಾನ ರೂಪದಲ್ಲಿ ಉಮೇದುವಾರಿಕೆ ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ಕಾನೂನಿಗೆ ಸೂಕ್ತ ತಿದ್ದುಪಡಿ ಮಾಡಲು ಇದು ಪ್ರಶಸ್ತ ಕಾಲವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಾಧಿಕಾರಗಳು ಮುಕ್ತ ಮತ್ತು ನ್ಯಾಯಯುತ ಚುನಾವಣೆಯನ್ನು ಖಾತರಿಪಡಿಸಬೇಕು. ನಮ್ಮ ಪ್ರಕಾರ, ಚುನಾವಣಾ ಪರಿಶುದ್ಧತೆಯನ್ನು ಕಾಪಾಡಿಕೊಳ್ಳಲು ಆಯೋಗದ ಶಾಸನಬದ್ಧ ಕರ್ತವ್ಯವನ್ನು ನಿಭಾಯಿಸಲು ಆನ್‌ಲೈನ್‌ನಲ್ಲಿ ಉಮೇದುವಾರಿಕೆ ಸಲ್ಲಿಸಲು ಅನುವು ಮಾಡುವುದು ಪ್ರಮುಖ ಪಾತ್ರ ವಹಿಸಲಿದೆ” ಎಂದು ನ್ಯಾಯಾಲಯ ಹೇಳಿದೆ.
ಈ ಅಂಶಗಳ ಮೇಲಿನ ಯಾವುದೇ ನಿರ್ಧಾರವು ನಿರ್ದಿಷ್ಟ ಕಾನೂನು ಚೌಕಟ್ಟು ಮತ್ತು ತಾಂತ್ರಿಕ ಕಾರ್ಯಸಾಧ್ಯತೆಯ ಮೇಲೆ ಅವಲಂಬಿತವಾಗಿದೆ. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಸೂಚಿಸಲಾದ ಬದಲಾವಣೆಗಳನ್ನು ತರಲು ತುಂಬಾ ಕಷ್ಟವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಆಗಸ್ಟ್ 8ರಂದು ತ್ರಿಪುರದಲ್ಲಿ ನಡೆಯಲಿರುವ ಪಂಚಾಯಿತಿ ಚುನಾವಣೆಗೆ ಉಮೇದುವಾರಿಕೆ ಪತ್ರಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಅನುಮತಿಸುವಂತೆ ಕೋರಿ ತ್ರಿಪುರ ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತು ಭಾರತೀಯ ಕಮ್ಯುನಿಸ್ಟ್ ಪಕ್ಷ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ನ್ಯಾಯಾಲಯ ಮೇಲಿನಂತೆ ಆದೇಶಿಸಿದೆ.
ಚುನಾವಣೆಯಲ್ಲಿ ಸ್ಪರ್ಧಿಸ ಬಯಸುವವರನ್ನು ಅಪಹರಣ ಅಥವಾ ಕೊಲೆ ಮಾಡದಂತೆ ಖಾತರಿಪಡಿಸುವ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಅಗತ್ಯವಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ.
“ಚುನಾವಣೆಯ ಸಂದರ್ಭದಲ್ಲಿ ಯಾವುದೇ ವ್ಯಕ್ತಿಯ ಚುನಾವಣಾ ಅಕ್ರಮ ನಿರ್ಬಂಧಿಸುವ ನಿಟ್ಟಿನಲ್ಲಿ ನ್ಯಾಯಾಲಯ ಯಾವುದೇ ಆದೇಶ ಮಾಡಲಾಗದು. ಚುನಾವಣಾ ಮುಗಿದ ಬಳಿಕ ಅಭ್ಯರ್ಥಿ ಅಥವಾ ಮತದಾರನಿಗೆ ಕಾನೂನಿನ ಪ್ರಕಾರ ಸೂಕ್ತ ಪ್ರಾಧಿಕಾರದ ಮುಂದೆ ಅಹವಾಲು ಎತ್ತಬಹುದಾಗಿದೆ. ಹೀಗಾಗಿ, ಉಮೇದುವಾರಿಕೆ ಸಲ್ಲಿಸುವವರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಭದ್ರತಾ ಪಡೆಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಸುವುದನ್ನು ಖಾತರಿಪಡಿಸಬೇಕು” ಎಂದು ನ್ಯಾಯಾಲಯ ಹೇಳಿದೆ.