Supreme Court, Tripura 
ಸುದ್ದಿಗಳು

[ತ್ರಿಪುರ ಸ್ಥಳೀಯ ಸಂಸ್ಥೆ ಚುನಾವಣಾ ಹಿಂಸಾಚಾರ] ನ್ಯಾಯಸಮ್ಮತ ಚುನಾವಣೆ ನಡೆಸಲು ನಿರ್ದೇಶನ ನೀಡಿದ ಸುಪ್ರೀಂ ಕೋರ್ಟ್‌

ಚುನಾವಣೆ ಮತ್ತು ಮತ ಎಣಿಕೆಗೆ ಸಂಬಂಧಿಸಿದಂತೆ ಭದ್ರತೆ ಕಲ್ಪಿಸಿರುವುದರ ಕುರಿತು ಮಾಹಿತಿ ನೀಡುವಂತೆ ತ್ರಿಪುರಾ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

Bar & Bench

ತ್ರಿಪುರ ರಾಜ್ಯದಲ್ಲಿ ರಾಜಕೀಯ ಹಿಂಸಾಚಾರ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡುವ ಕೋರಿಕೆಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾಕರಿಸಿದೆ.

ತ್ರಿಪುರದಲ್ಲಿ ತಮ್ಮ ಕಾರ್ಯಕರ್ತರ ಮೇಲೆ ಅವಿರತ ದಾಳಿ ಮುಂದುವರೆದಿದ್ದು, ಆಡಳಿತಾರೂಢ ಬಿಜೆಪಿಯು ತನ್ನ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್‌ ಸಲ್ಲಿಸಿದ್ದ ನ್ಯಾಯಾಂಗ ನಿಂದನಾ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಮತ್ತು ವಿಕ್ರಮ್‌ನಾಥ್‌ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ಸ್ಥಳೀಯ ಸಂಸ್ಥೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಹಿಂಸಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೀಠವು ರಾಜ್ಯ ಸರ್ಕಾರ ಮತ್ತು ಪೊಲೀಸ್‌ ಇಲಾಖೆಗೆ ಹಲವು ನಿರ್ದೇಶನಗಳನ್ನು ನೀಡಿದೆ.

“ಚುನಾವಣೆ ಮುಂದೂಡುವುದು ಕೊನೆಯ ಹಾಗೂ ಆತ್ಯಂತಿಕ ನಿರ್ಧಾರವಾಗಿರಲಿದೆ. ಚುನಾವಣೆಯನ್ನು ಮುಂದೂಡುವುದಕ್ಕೆ ಬದಲಾಗಿ, ಬಾಕಿ ಉಳಿದಿರುವ ಹಂತದಲ್ಲಿ ನ್ಯಾಯಸಮ್ಮತವಾಗಿ ಚುನಾವಣೆ ನಡೆಸುವ ಸಂಬಂಧ ನಿರ್ದಿಷ್ಟ ಸೂಚನೆಗಳನ್ನು ತ್ರಿಪುರಾ ಸರ್ಕಾರಕ್ಕೆ ನೀಡುವ ಮೂಲಕ ಆತಂಕವನ್ನು ನಿವಾರಿಸಬಹುದು ಎಂದು ನಾವು ನಂಬಿದ್ದೇವೆ” ಎಂದು ನ್ಯಾಯಾಲಯ ಹೇಳಿತು.

ಮತದಾನ ಮತ್ತು ಮತ ಎಣಿಕೆಗೆ ಕಲ್ಪಿಸಲಾಗಿರುವ ಭದ್ರತಾ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಬೇಕು. ಚುನಾವಣಾ ಹಿಂಸಾಚಾರದ ಬಗ್ಗೆ ದೂರು ನೀಡಿರುವುದು ಮತ್ತು ಆ ಸಂಬಂಧ ಕ್ರಮಕೈಗೊಂಡಿರುವ ಕ್ರಮಗಳ ವಿವರ ಮತ್ತು ಎಫ್‌ಐಆರ್‌ ದಾಖಲಿಸಿರುವ ಬಗ್ಗೆ ಮಾಹಿತಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

“ಚುನಾವಣಾ ಪ್ರಕ್ರಿಯೆಯನ್ನು ಬೆಂಬಲಿಸುವಲ್ಲಿ ಕಾನೂನು ಜಾರಿ ಹೊಣೆ ಹೊತ್ತ ಸಂಸ್ಥೆಗಳ ವಿರುದ್ಧದ ಯಾವುದೇ ತಪ್ಪು ಕಲ್ಪನೆಯನ್ನು ನಿವಾರಿಸುವುದು ಡಿಜಿಪಿ, ಐಜಿಪಿ ಮತ್ತು ಗೃಹ ಕಾರ್ಯದರ್ಶಿಯವರ ಕರ್ತವ್ಯವಾಗಿದೆ. ಕಾನೂನು ಜಾರಿ ಸಂಸ್ಥೆಗಳು ಪಕ್ಷಾತೀತವಾಗಿ ಕರ್ತವ್ಯ ನಿರ್ವಹಿಸಬೇಕು ಮತ್ತು ರಾಜಕೀಯ ಎದುರಾಳಿಗಳನ್ನು ಗುರಿಯಾಗಿಸಲಾಗುತ್ತಿದೆ ಎಂಬ ಆತಂಕವನ್ನು ನಿವಾರಿಸಬೇಕು” ಎಂದು ಪೀಠವು ಭದ್ರತಾ ಪಡೆಗಳಿಗೆ ಕಿವಿಮಾತು ಹೇಳಿದೆ.