ಸುದ್ದಿಗಳು

ತ್ರಿಪುರ ಹಿಂಸಾಚಾರ ತನಿಖೆ ಎಸ್ಐಟಿಗೆ ಒಪ್ಪಿಸುವಂತೆ ಕೋರಿದ್ದ ಅರ್ಜಿ: ಕೇಂದ್ರ, ರಾಜ್ಯ ಸರ್ಕಾರಕ್ಕೆ ಸುಪ್ರೀಂ ನೋಟಿಸ್

Bar & Bench

ತ್ರಿಪುರದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ನಡೆದ ಹಿಂಸಾಚಾರ ಘಟನೆ ಬಗ್ಗೆ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಮತ್ತು ತ್ರಿಪುರ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.

ತ್ರಿಪುರದಲ್ಲಿ ಅಕ್ಟೋಬರ್‌ನಲ್ಲಿ ನಡೆದಿತ್ತೆನ್ನಲಾದ ಗಲಭೆಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ತಕ್ಷಣವೇ ಮಧ್ಯಪ್ರವೇಶಿಸಬೇಕೆಂದು ಕೋರಿ ವಕೀಲ ಎಹ್ತೇಷಾಮ್ ಹಶ್ಮಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಪೀಠ ವಿಚಾರಣೆ ನಡೆಸುತ್ತಿದೆ.

ದೆಹಲಿ ಮೂಲದ ಇತರ ವಕೀಲರೊಂದಿಗೆ ರಾಜ್ಯದ ಗಲಭೆ ಪೀಡಿತ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿದ್ದೇನೆ ಮತ್ತು ಭೇಟಿಯ ಕುರಿತ ಸತ್ಯಶೋಧನಾ ವರದಿಯನ್ನು ಪ್ರಕಟಿಸಿದ್ದೇನೆ ಎಂದು ಹಶ್ಮಿ ತಿಳಿಸಿದರು. ಗಲಭೆಯಲ್ಲಿ 12 ಮಸೀದಿಗಳಿಗೆ ಹಾನಿಯಾಗಿದೆ, ಮುಸ್ಲಿಂ ಉದ್ಯಮಿಗಳ ಒಡೆತನದ 9 ಅಂಗಡಿಗಳನ್ನು ನಾಶ ಮಾಡಲಾಗಿದೆ, ಆ ಸಮುದಾಯಕ್ಕೆ ಸೇರಿದ 3 ಮನೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಅವರು ವಿವರಿಸಿದರು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್ ಹಿಂಸಾಚಾರ ತಡೆಗಟ್ಟುವ ಬದಲಿಗೆ ಸತ್ಯಶೋಧನೆಯಲ್ಲಿ ತೊಡಗಿದ್ದ ವಕೀಲರಿಗೆ ನೋಟಿಸ್‌ ಕಳುಹಿಸಲಾಗಿದೆ. ಯುಎಪಿಎ ಕಾಯಿದೆಯಡಿ ಪತ್ರಕರ್ತರ ವಿರುದ್ಧ ಮೊಕದ್ದಮೆ ಹೂಡಲಾಗಿದೆ. ಪೊಲೀಸರ ನಡವಳಿಕೆ ಸ್ವೇಚ್ಛೆ, ದುರುದ್ದೇಶದಿಂದ ಕೂಡಿದ್ದು ಸಂವಿಧಾನದ 14 ಮತ್ತು 21ನೇ ವಿಧಿಯನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.