ಸಿಜೆಐ ಚಂದ್ರಚೂಡ್, ಸುಪ್ರೀಂ ಕೋರ್ಟ್
ಸಿಜೆಐ ಚಂದ್ರಚೂಡ್, ಸುಪ್ರೀಂ ಕೋರ್ಟ್ 
ಸುದ್ದಿಗಳು

ಮಾಧ್ಯಮಗಳ ಮೂಲಕ ನ್ಯಾಯಾಧೀಶರ ಮೇಲೆ ರಹಸ್ಯ ಪ್ರಭಾವ: ಕೆಲ ವಕೀಲರ ವಿರುದ್ಧ ಸಿಜೆಐಗೆ ಪತ್ರ

Bar & Bench

ಹಗಲಿನಲ್ಲಿ ರಾಜಕಾರಣಿಗಳ ಪರ ವಾದ ಮಂಡಿಸುವ ಕೆಲ ವಕೀಲರು ಇರುಳಿನಲ್ಲಿ ಮಾಧ್ಯಮಗಳ ಮೂಲಕ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಾರೆ ಎಂದು ಕಳವಳ ವ್ಯಕ್ತಪಡಿಸಿ ಸುಮಾರು 600 ವಕೀಲರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರಿಗೆ ಪತ್ರ ಬರೆದಿದ್ದಾರೆ.

ನ್ಯಾಯಾಂಗದ ಸಮಗ್ರತೆಯನ್ನು ದುರ್ಬಲಗೊಳಿಸುವ ಯತ್ನಗಳ ಬಗ್ಗೆ ಹಿರಿಯ ವಕೀಲರಾದ ಹರೀಶ್ ಸಾಳ್ವೆ, ಮನನ್ ಕುಮಾರ್ ಮಿಶ್ರಾ, ಆದಿಶ್ ಅಗರ್‌ವಾಲ್‌, ಚೇತನ್ ಮಿತ್ತಲ್, ಪಿಂಕಿ ಆನಂದ್, ಹಿತೇಶ್ ಜೈನ್, ಉಜ್ವಲಾ ಪವಾರ್, ಉದಯ್ ಹೊಳ್ಳ ಹಾಗೂ ಸ್ವರೂಪಮಾ ಚತುರ್ವೇದಿ ಸೇರಿದಂತೆ ಅನೇಕ ವಕೀಲರು ಸಹಿ ಮಾಡಿದ ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಪತ್ರದ ಪ್ರಮುಖ ಅಂಶಗಳು

  • ನ್ಯಾಯಾಂಗದ ಮೇಲೆ ಒತ್ತಡ ಹೇರಲು, ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಲು ಮತ್ತು ಕ್ಷುಲ್ಲಕ ತರ್ಕ ಮತ್ತು ಹಳಸಿದ ರಾಜಕೀಯ ಕಾರ್ಯಸೂಚಿಗಳ ಆಧಾರದ ಮೇಲೆ ನ್ಯಾಯಾಲಯಗಳನ್ನು ದೂಷಿಸಲು ಪಟ್ಟಭದ್ರ ಹಿತಾಸಕ್ತಿ ಇರುವ ಗುಂಪು ಯತ್ನಿಸುತ್ತಿರುವ ಬಗ್ಗೆ ಆಳವಾದ ಆತಂಕ ಇದೆ.

  • ನ್ಯಾಯಾಂಗ ಕಾರ್ಯಚಟುವಟಿಕೆಯನ್ನು ನಿರೂಪಿಸುವ ನಂಬಿಕೆ ಮತ್ತು ಸಾಮರಸ್ಯದ ವಾತಾವರಣವನ್ನುಇಂತಹ ವಕೀಲರ ವರ್ತನೆಗಳು ಹಾಳುಗೆಡವುತ್ತಿವೆ.

  • ಹಿಂದೆ ನ್ಯಾಯಾಲಯಗಳು ಸುವರ್ಣ ಯುಗದಲ್ಲಿದ್ದವು. ಈಗ ಸ್ಥಿತಿ ಹಾಗಿಲ್ಲ ಎಂದು ಅವರು ಸುಳ್ಳು ಕತೆ ಕಟ್ಟುತ್ತಿದ್ದಾರೆ.

  • ರಾಜಕೀಯ ಪ್ರಕರಣಗಳಲ್ಲಿ, ವಿಶೇಷವಾಗಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ರಾಜಕೀಯ ವ್ಯಕ್ತಿಗಳನ್ನು ಒಳಗೊಂಡ ಪ್ರಕರಣಗಳಲ್ಲಿ ಅಂತಹ ವಕೀಲರು ಹೆಚ್ಚಾಗಿ ಒತ್ತಡ ತಂತ್ರ ಬಳಸುತ್ತಾರೆ.

  • ಇವು ನ್ಯಾಯಾಲಯದ ನಿರ್ಧಾರಗಳನ್ನು ಬದಲಿಸಲು ಮತ್ತು ಕೆಲವು ರಾಜಕೀಯ ಲಾಭಕ್ಕಾಗಿ ನ್ಯಾಯಾಲಯವನ್ನು ಮುಜುಗರಕ್ಕೀಡುಮಾಡಲು ಮಾಡಿದ ಉದ್ದೇಶಪೂರ್ವಕ ಹೇಳಿಕೆಗಳಲ್ಲದೆ ಮತ್ತೇನೂ ಅಲ್ಲ.

  • ಈ ತಂತ್ರಗಳು ನ್ಯಾಯಾಲಯಗಳಿಗೆ ಧಕ್ಕೆ ಉಂಟು ಮಾಡಲಿದ್ದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೆದರಿಕೆ ಒಡ್ಡುತ್ತಿವೆ.

  • ಆ ವಕೀಲರು ಬೆಂಚ್ ಫಿಕ್ಸಿಂಗ್ (ನ್ಯಾಯಪೀಠವನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುವುದು) ಸಿದ್ಧಾಂತದ ಮೊರೆ ಹೋಗಿದ್ದಾರೆ.

  • ಇದು ಬರೀ ಅಗೌರವ ಮತ್ತು ನ್ಯಾಯಾಂಗ ನಿಂದನೆಯಷ್ಟೇ ಆಗಿರದೆ ನಮ್ಮ ನ್ಯಾಯಾಲಯಗಳ ಘನತೆ ಗೌರವದ ಮೇಲಿನ ದಾಳಿ.

  • ಕೆಲವೊಮ್ಮೆ, ಇದು ಗೌರವಾನ್ವಿತ ನ್ಯಾಯಾಧೀಶರ ಮೇಲೆ ಅಪಪ್ರಚಾರಕ್ಕೂ ಕಾರಣವಾಗುತ್ತದೆ.

  • ಕಾನೂನು ಆಳ್ವಿಕೆ ಇಲ್ಲದ ದೇಶಗಳ ಮಟ್ಟಕ್ಕೆ ನಮ್ಮ ನೆಲದ ಕಾನೂನುಗಳನ್ನು ಅವರು ಇಳಿಸುತ್ತಿದ್ದಾರೆ.

  • ತಮ್ಮ ಅನ್ಯಾಯದ ಕ್ರಮಗಳಿಂದಾಗಿ ನ್ಯಾಯಾಂಗ ಸಂಸ್ಥೆಗಳು ದೂಷಣೆಗೆ ಒಳಗಾಗುವಂತೆ ಮಾಡುತ್ತಿದ್ದಾರೆ.

  • ನಿರ್ದಿಷ್ಟ ರಾಜಕೀಯ ಪಕ್ಷವನ್ನು ಬೆಂಬಲಿಸುವ ವಕೀಲರು ತಾವು ಒಪ್ಪುವ ಯಾವುದೇ ತೀರ್ಪುಗಳನ್ನು ಶ್ಲಾಘಿಸುತ್ತಾರೆ. ಆದರೆ ತಮಗೆ ಸಮ್ಮತವಲ್ಲದ ತೀರ್ಪುಗಳಿಗೆ ಮಸಿ ಬಳಿಯುತ್ತಾರೆ.

  • ಇಂತಹ ಹಂಸಕ್ಷೀರ ನ್ಯಾಯದ ಸಂಗತಿಗಳು ಈಚಿನ ತೀರ್ಪುಗಳಲ್ಲಿಯೂ ಬಿಂಬಿತವಾಗುತ್ತಿವೆ.

  • ವೈಯಕ್ತಿಕ ಮತ್ತು ರಾಜಕೀಯ ಕಾರಣಗಳಿಗಾಗಿ ನ್ಯಾಯಾಲಯಗಳನ್ನು ಕೀಳಾಗಿ ಕಾಣುವ ಮತ್ತು ಅವುಗಳನ್ನು ಕುಶಲತೆಯಿಂದ ನಿರ್ವಹಿಸುವ ಯತ್ನಗಳಿಗೆ ಯಾವುದೇ ಸಂದರ್ಭದಲ್ಲೂ ಅನುಮತಿಸಬಾರದು.

[ಪತ್ರದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Letter to CJI.pdf
Preview